*ಗಡಿ ಹೋರಾಟಕ್ಕೆ ಮಠದ ಮುದ್ರೆ: ಬೆಳಗಾವಿ ಪ್ರಶ್ನೆಯಲ್ಲಿ ಪಾಲಿಕೆ ಯಾಕೆ ಮೌನ?*
ರಾಯಬಾಗ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಕೇವಲ ಭಾವನಾತ್ಮಕ ಘೋಷಣೆಯಲ್ಲ; ಅದು ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಕಾನೂನುಬದ್ಧ ವಾಸ್ತವದ ಪ್ರತೀಕವಾಗಿದೆ. ಆದರೂ "ಬೆಳಗಾವಿ ಕರ್ನಾಟಕದ್ದೇ" ಎಂಬ ಸರಳ ಹಾಗೂ ಸ್ಪಷ್ಟ ನಿರ್ಣಯವನ್ನು ಅಂಗೀಕರಿಸುವ ವಿಚಾರದಲ್ಲಿ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ ಎರಡು ತಿಂಗಳಿನಿಂದ ಕನ್ನಡಪರ ಸಂಘಟನೆಗಳು ನಿರಂತರವಾಗಿ ನಿರ್ಣಯ ಅಂಗೀಕಾರಕ್ಕಾಗಿ ಒತ್ತಾಯಿಸುತ್ತಿರುವುದು ಈ ವಿಚಾರದ ಗಂಭೀರತೆಯನ್ನು ತೋರಿಸುತ್ತದೆ. ಅವರ ಹೋರಾಟ ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ; ಬೆಳಗಾವಿಯ ಬಗ್ಗೆ ಅನಗತ್ಯ ಗೊಂದಲಗಳು ಮತ್ತು ಭವಿಷ್ಯದಲ್ಲಿ ಉಂಟಾಗಬಹುದಾದ ವಿವಾದಗಳಿಗೆ ಸ್ಪಷ್ಟ ಉತ್ತರ ನೀಡಬೇಕೆಂಬ ಉದ್ದೇಶದಿಂದ ನಡೆಯುತ್ತಿರುವ ಹೋರಾಟವಾಗಿದೆ.
ಇಂತಹ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ಮ. ನಿ. ಪ್ರ ಸ್ವ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ಬೆಂಬಲ ಮಹತ್ವದ ಬೆಳವಣಿಗೆಯಾಗಿದೆ. ಗಡಿ ಪ್ರಶ್ನೆಯನ್ನು ಕೇವಲ ರಾಜಕೀಯ ವಿಷಯವಾಗಿ ನೋಡದೆ, ನಾಡು-ನುಡಿ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿ ಪರಿಗಣಿಸಿರುವುದು ಅವರ ನಿಲುವಿನ ವಿಶೇಷತೆ. ಕನ್ನಡದ ಹಿತಾಸಕ್ತಿಗೆ ಧಕ್ಕೆಯಾದಾಗ ಮಠಗಳು ಮತ್ತು ಸಮಾಜಮುಖಿ ಸಂಸ್ಥೆಗಳು ಮೌನವಾಗಬಾರದು ಎಂಬ ಸಂದೇಶವನ್ನೂ ಅವರ ಹೇಳಿಕೆ ಸಾರುತ್ತದೆ.
ಇತಿಹಾಸದ ಹೋರಾಟಗಳಿಂದ ಬೆಳಗಾವಿ ಕರ್ನಾಟಕದ ಭಾಗವಾಗಿ ಉಳಿದಿದೆ. ಹೀಗಿರುವಾಗ, ಅದೇ ಸತ್ಯವನ್ನು ಮತ್ತೊಮ್ಮೆ ನಿರ್ಣಯದ ಮೂಲಕ ದೃಢೀಕರಿಸಲು ಹಿಂಜರಿಕೆ ತೋರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗುವುದು ಸಹಜ. ಜನಪ್ರತಿನಿಧಿ ಸಂಸ್ಥೆಗಳು ಜನರ ಭಾವನೆಗಳಿಗೆ ಸ್ಪಂದಿಸಿ ಸ್ಪಷ್ಟ ನಿಲುವು ಪ್ರಕಟಿಸುವುದು ಪ್ರಜಾಪ್ರಭುತ್ವದ ಜವಾಬ್ದಾರಿಯಾಗಿದೆ.
ಹೀಗಾಗಿ, ಬೆಳಗಾವಿ ಮಹಾನಗರ ಪಾಲಿಕೆ ಈ ವಿಷಯದಲ್ಲಿ ಅನಗತ್ಯ ವಿಳಂಬ ಮಾಡದೆ, ಜನಾಭಿಪ್ರಾಯ ಮತ್ತು ಐತಿಹಾಸಿಕ ಸತ್ಯಕ್ಕೆ ಗೌರವ ನೀಡಿ ನಿರ್ಣಯ ಕೈಗೊಳ್ಳುವುದು ಸೂಕ್ತ. ಏಕೆಂದರೆ ಗಡಿ ಪ್ರಶ್ನೆಯಲ್ಲಿ ಸ್ಪಷ್ಟತೆ ಎಷ್ಟು ಬೇಗ ಮೂಡುತ್ತದೆಯೋ, ಅಷ್ಟೇ ಬೇಗ ಅನಗತ್ಯ ವಿವಾದಗಳಿಗೂ ತೆರೆ ಬೀಳುತ್ತದೆ.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments