"ಒಗ್ಗಟ್ಟೇ ಬಸವ ಮಂತ್ರ" - ಬಸವಪರ ಸಂಘಟನೆಗಳಿಗೆ ಮುಕ್ತ ಪತ್ರ.
---
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು.
########
ಮಾನ್ಯ ಬಸವಪರ ಸಂಘಟನೆಗಳ ಮುಖಂಡರೇ, ಕಾರ್ಯಕರ್ತರೇ, ಬಸವ ಬಂಧುಗಳೇ, ಭಕ್ತಿಯ ಶರಣು ಶರಣಾರ್ಥಿ.
ಇಂದು ದೇಶದಲ್ಲಿ ಪ್ರತಿದಿನ ಸಾವಿರಾರು ಸಂಘಟನೆಗಳು ಹುಟ್ಟುತ್ತವೆ. ಅಷ್ಟೇ ವೇಗದಲ್ಲಿ ಮಾಯವಾಗುತ್ತವೆ.
ಹುಟ್ಟಿದಷ್ಟೇ ವೇಗದಲ್ಲಿ ಸಾಯುವ ಸಂಘಟನೆಗಳು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣವಲ್ಲ. ಇದು ನಮ್ಮ ವಿಘಟನೆಯ ಸಂಕೇತ.
ಅದೇ ರೀತಿ ನಾನೇ ಬೆಳೆಯಬೇಕು, ನನ್ನಿಂದಲೇ ಎಲ್ಲ ಆಗಬೇಕು ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಇಂದು ಈ ಸ್ವಾರ್ಥ ಭ್ರಮೆಯೇ ನಮ್ಮ
ಹೋರಾಟಕ್ಕೆ ಹಿಡಿದಿರುವ ಶಾಪ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಬಸವ ತತ್ವ ವಿರೋಧಿಗಳನ್ನು ವಿರೋಧಿಸುವ ಭರದಲ್ಲಿ, ನಾವೇ ಬಸವ ತತ್ವಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದೇವೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ.
ಈ ಹಿನ್ನೆಲೆಯಲ್ಲಿ ಬಸವಪರ ಸಂಘಟನೆಗಳಿಗೆ ನನ್ನ ಕಳಕಳಿಯ ಮನವಿ:
ಕಣ್ಣೆದುರಿನ ಕಹಿ ಸತ್ಯ: ಹೋರಾಟ ಎಲ್ಲಿದೆ?
1. ಬೆರಳೆಣಿಕೆ ಜಿಲ್ಲೆಗೆ ಸೀಮಿತ: ಇತ್ತಿಚೆಗೆ ಬಸವ ತತ್ವ ವಿರೋಧಿಗಳು ಬಸವ ತತ್ವದ ವಿರುದ್ಧವಾಗಿ ಅಲ್ಲಲ್ಲಿ ಸಮಾವೇಶಗಳು ಮಾಡುವ ಮುಖಾಂತರ ಬಸವ ತತ್ವ ನಾಶ ಮಾಡುವ ನಿಟ್ಟಿನಲ್ಲಿ ಕುತಂತ್ರದ ಕೆಲಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಹೋರಾಟ ಮಾಡಬೇಕಾದ ಬಸವಪರ ಸಂಘಟನೆಗಳು ಅಷ್ಟು ಪ್ರಬಲವಾಗಿ ಹೋರಾಟ ಮಾಡಲಿಲ್ಲ ಎಂಬುದೇ ಬೇಸರದ ಸಂಗತಿ.
ವಿಶೇಷವಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ನೋಡಿದಾಗ ಹೋರಾಟ ನಡೆದಿರುವುದು ಕೇವಲ 4-5 ಜಿಲ್ಲೆಗಳಲ್ಲಿ ಮಾತ್ರ.
2. ತಾಲೂಕು ಮಟ್ಟದಲ್ಲಿ ಶೂನ್ಯ: ಇನ್ನು ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸಂಘಟನೆ ಹೆಸರಿಗಷ್ಟೇ ಇದೆ. ಕೆಲಸಕ್ಕೆ ಬರುವುದಿಲ್ಲ.
3. ಕಲ್ಯಾಣ ಕರ್ನಾಟಕದ ದುರಂತ: ಬಸವಣ್ಣನವರ ಹುಟ್ಟಿ ಬೆಳೆದ, ವಚನ ಕ್ರಾಂತಿ ನಡೆದ ಬಸವಕಲ್ಯಾಣ, ಬೀದರ್ ಭಾಗದಲ್ಲೇ ಸಂಘಟನೆ ಅತ್ಯಂತ ದುರ್ಬಲ. ಇದು ನಾಚಿಕೆಗೇಡಿನ ಸಂಗತಿ. ಬೀದರ್ ಜಿಲ್ಲೆ "ಬಲಿಷ್ಠವಾಗಿದೆ" ಎಂದು ಹೇಳಿಕೊಂಡರೂ, ವಿವಿಧ ತಾಲೂಕುಗಳಲ್ಲಿ ಒಬ್ಬ ಕಾರ್ಯಕರ್ತ ಸಿಗದ ಸ್ಥಿತಿ. ಕೇವಲ ಪದಾಧಿಕಾರಿಗಳ ಸ್ಥಾನಕ್ಕೆ ಸೀಮಿತ, ಸನ್ಮಾನ - ಪ್ರಶಸ್ತಿ - ವೇದಿಕೆ ಸ್ಥಾನಕ್ಕೆ ಮೊದಲು, ಕೆಲಸಕ್ಕೆ ಮಾತ್ರ ಕರೆಯಬೇಡಿ. ಯಾಕೆಂದರೆ ಅವರ ಹತ್ತಿರ ಸಮಯ ಇಲ್ಲಾ...... ಇವರೆಲ್ಲ ಸಮಯ ಸಾಧಕರು........
ಇವರ ಬಗ್ಗೆ ರಾಜ್ಯ/ಜಿಲ್ಲೆಯ ಮುಖಂಡರು ಗಂಭೀರವಾಗಿ ಯೋಚಿಸಬೇಕು.
4. ವಾಟ್ಸಾಪ್ ವೀರರು: ಸಂಘಟನೆಯ ಮುಖಂಡರು ಫೇಸ್‌ಬುಕ್-ವಾಟ್ಸಾಪ್‌ನಲ್ಲಿ ಪೋಸ್ಟ್ ಹಾಕಿ, ಫೋಟೋಗೆ ಪೋಸ್ ಕೊಡುವುದಕ್ಕೆ ಮಾತ್ರ ಸೀಮಿತ. ಪ್ರಾಕ್ಟಿಕಲ್ ಆಗಿ ಬೀದಿಗಿಳಿದು ಹೋರಾಡುವ ಮನಸ್ಥಿತಿಯಲ್ಲಿ ಖಂಡಿತವಾಗಿಯೂ ಇವರು ಇಲ್ಲವೇ ಇಲ್ಲ. ತೋರಿಕೆಗಾಗಿ ಕಪಟ ನಾಟಕ ಮಾಡುತ್ತಾರೆ ಅಷ್ಟೇ, ಇವರಿಂದ ಸಂಘಟನೆಗಳಿಗೆ ಯಾವುದೇ ರೀತಿಯ ನಯಾಪೈಸೆ ಕೊಡುಗೆ ಇಲ್ಲ.
ಇದು ಹೋರಾಟವೇ? ಇಲ್ಲ. ಇದು ಆತ್ಮವಂಚನೆ. ಬಸವಣ್ಣನವರು "ನುಡಿದರೆ ಮುತ್ತಿನ ಹಾರದಂತಿರಬೇಕು, ನಡೆದರೆ ಮುತ್ತು ಒಡೆದಂತಿರಬೇಕು" ಎಂದರು. ನಾವು ನುಡಿಯುತ್ತೇವೆ, ನಡೆಯುವುದಿಲ್ಲ.
ಸಮಾಜದ ಗಣ್ಯರಿಗೆ ನೇರ ಪ್ರಶ್ನೆ ?
ಲಿಂಗಾಯತ ವ್ಯಾಪಾರಸ್ಥರೇ, ರಾಜಕಾರಣಿಗಳೇ, ಅಧಿಕಾರಿಗಳೇ :-
ನೀವು ದೇವಸ್ಥಾನಕ್ಕೆ ಲಕ್ಷ ಕೊಡುತ್ತೀರಿ, ಜಾತ್ರೆಗೆ ಕೋಟಿ ಸುರಿಯುತ್ತೀರಿ. ನೀವು ಯಾರಿಗೂ, ಯಾವುದಕ್ಕೂ ಕೊಡುವುದಕ್ಕೆ ನಮ್ಮದು ಯಾವುದೇ ರೀತಿಯ ಅಭ್ಯಂತರವಿಲ್ಲ. ಅದೇ ರೀತಿ ನಮ್ಮ ಹೋರಾಟಕ್ಕೂ ನೀಡಬೇಕಲ್ಲವೇ? ನೀಡುತ್ತಿಲ್ಲ..... ಇದು ವಿಷಾದಕರ ಸಂಗತಿ.......
ಆದರೆ ನಮ್ಮ ಅಸ್ತಿತ್ವದ ಪ್ರಶ್ನೆಯಾದ "ಧರ್ಮ ಮಾನ್ಯತೆ" ಹೋರಾಟಕ್ಕೆ ನಿಮ್ಮ ಕೊಡುಗೆ ಏನು?ಶೂನ್ಯ.
"ನಾನು" ಎಂಬ ರೋಗಕ್ಕೆ ಮದ್ದು: ಬಸವ ತತ್ವದ ಮೂರು ಔಷಧ :-
ಇದು ನಮ್ಮ ಕರ್ತವ್ಯ, ಮುಂದಿನ ಪೀಳಿಗೆಯ ಭವಿಷ್ಯ
ನಾವು ಇಂದು ಒಗ್ಗಟ್ಟಾಗದಿದ್ದರೆ, ನಾಳೆ ನಮ್ಮ ಮಕ್ಕಳಿಗೆ ಲಿಂಗಾಯತ ಎಂದರೆ ಏನು ಎಂದು ಹೇಳುವ ಅಧಿಕಾರವನ್ನೂ ಕಳೆದುಕೊಳ್ಳುತ್ತೇವೆ. ನಮ್ಮ ಯುವ ಪೀಳಿಗೆಗೆ ಗುರುತಿನ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಅವರಿಗೆ ನಾವು ಅನ್ಯಾಯ ಮಾಡಿದಂತಾಗುತ್ತದೆ.
ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಬಸವ ತತ್ವ ಬಲಾಢ್ಯವಾಗಬೇಕಾದರೆ, ನಾವು "ನಾನು" ಎಂಬುದನ್ನು ಬಿಟ್ಟು "ನಾವು" ಎಂದು ಯೋಚಿಸಬೇಕು. ಸ್ವಾರ್ಥ ಬಿಟ್ಟು ಸೇವೆಗಾಗಿ ಮುಂದಾಗಬೇಕು.
ಅ) "ನಾನು" ಬಿಟ್ಟು "ನಾವು" ಆಗಿ: ನನ್ನ ಸಂಘಟನೆ, ನನ್ನ ಹೆಸರು, ನನ್ನ ಫೋಟೋ ಎಂಬ ಅಹಂ ಬಿಡಿ. "ನಮ್ಮ ಧರ್ಮ, ನಮ್ಮ ಅಸ್ತಿತ್ವ" ಎಂಬುದಷ್ಟೇ ಮಂತ್ರವಾಗಲಿ.
ಆ) ಕಾಯಕವೇ ಕೈಲಾಸ: ಹೋರಾಟಕ್ಕೆ ಹಣ, ಸಮಯ, ಶ್ರಮ ಮೂರೂ ಕೊಡಿ. ಕೇವಲ ವೇದಿಕೆಯಲ್ಲಿ ಭಾಷಣ ಮಾಡಿದರೆ ಸಾಲದು. ಸ್ವಂತ ಕಿಸೆಯಿಂದ 100 ರೂಪಾಯಿ ಖರ್ಚು ಮಾಡದವರು ನಾಯಕರಲ್ಲ. ಸಮಯ ನೀಡದವರು ಮುಖಂಡರಲ್ಲ. ಶ್ರಮ ಮಾಡದವರು ಸಂಘಕರಲ್ಲ.
ಇ) ದಾಸೋಹವೇ ಧರ್ಮ: ನಿಮ್ಮ ಅಧಿಕಾರ, ಸಂಪರ್ಕ, ಜ್ಞಾನವನ್ನು ಹೊಸ ತಲೆಮಾರಿನ ಕಾರ್ಯಕರ್ತರಿಗೆ ದಾಸೋಹ ಮಾಡಿ. ತಾಲೂಕು ಮಟ್ಟದಲ್ಲಿ ದುರ್ಬಲವಿರುವ ಕಡೆ ಸ್ಥಳೀಯ ಯುವಕರಿಗೆ ಜವಾಬ್ದಾರಿ ಕೊಡಿ, ಅವರನ್ನು ಬೆಳೆಸಿ.
ಭಿನ್ನಾಭಿಪ್ರಾಯ ಬದಿಗೊತ್ತಿ, ಬಸವ ತತ್ವವೇ ಗುರಿಯಾಗಲಿ :-
ನಮ್ಮ ನಡುವೆ ಸಾವಿರ ಭಿನ್ನಾಭಿಪ್ರಾಯಗಳಿರಬಹುದು. "ನನ್ನ ಸಂಘಟನೆ ದೊಡ್ಡದು, ನಿನ್ನ ಸಂಘಟನೆ ಚಿಕ್ಕದು", "ನನ್ನ ಹತ್ತಿರ ದುಡ್ಡಿದೆ, ನಾನೇ ನಾಯಕ" ಎಂಬ ಅಹಂಕಾರದ ಗೋಡೆಗಳನ್ನು ಕೆಡವಬೇಕು.
ನಾವು ಮೊದಲು "ಬಸವ ತತ್ವದ ಅನುಯಾಯಿಗಳು" ಎಂಬ ಅಭಿಮಾನವನ್ನು ಎದೆಯಲ್ಲಿಟ್ಟುಕೊಳ್ಳಬೇಕು. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯೇ ನಮ್ಮೆಲ್ಲರ ಏಕೈಕ ಗುರಿ ಆಗಬೇಕು.
ಬಸವಣ್ಣನವರು ಹೇಳಿದ್ದು: "ಇವನಾರವ ಇವನಾರವ ಎಂದೆನಿಸದಿರಯ್ಯ."
ನಾವು ಇಂದು "ಇವನು ನನ್ನ ಸಂಘದವನಲ್ಲ" ಎಂದು ದೂರ ಮಾಡುತ್ತಿದ್ದೇವೆ. ಇದು ಬಸವ ತತ್ವಕ್ಕೆ ಮಾಡಿದ ದ್ರೋಹ.
ಹೋರಾಟ ಹೇಗಿರಬೇಕು? ಎಂದರೆ:
ಅ) ಅಚ್ಚುಕಟ್ಟಾಗಿ: ವೈಯಕ್ತಿಕ ಲಾಭ, ಪ್ರಚಾರಕ್ಕಾಗಿ ಅಲ್ಲ. ಧರ್ಮದ ಅಸ್ತಿತ್ವಕ್ಕಾಗಿ.
ಆ) ತಾಳ್ಮೆಯಿಂದ: ಒಂದು ದಿನದ ಧರಣಿ, ಒಂದು ಪತ್ರಿಕಾ ಹೇಳಿಕೆಯಿಂದ ಮಾನ್ಯತೆ ಸಿಗುವುದಿಲ್ಲ. ದಶಕಗಳ ನಿರಂತರ ಕಾನೂನು ಹೋರಾಟಬೇಕು ಆಗಬೇಕು.
ಇ) ಕಾನೂನಿನ ಅನ್ವಯ: ಸಂವಿಧಾನದ 25-30ನೇ ವಿಧಿಯಡಿ ಸಿಖ್, ಜೈನರಂತೆ ಶಾಸನಬದ್ಧ ಮಾನ್ಯತೆಗೆ ಹೋರಾಡಬೇಕು. ಬೀದಿ ರಂಪಾಟ, ದ್ವೇಷದ ಭಾಷಣದಿಂದ ಏನೂ ಸಾಧಿಸಲಾಗದು.
ಬೀದರ್ ಜಿಲ್ಲೆಗೆ ವಿಶೇಷ ಕರೆ: ಕಲ್ಯಾಣದ ಕಿಚ್ಚು ಮತ್ತೆ ಹೊತ್ತಿಸೋಣ :--
ಬೀದರ್, ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಚಿಟಗುಪ್ಪಾ ,ಔರಾದ್ , ಕಮಲನಗರ, ಹುಲಸೂರ - ಈ 8 ತಾಲೂಕುಗಳಲ್ಲಿ ಮುಂದಿನ 3 ತಿಂಗಳಲ್ಲಿ ಸಂಘಟನೆ ಕಟ್ಟುವ "ಆಪರೇಷನ್ ಕಾಯಕ" ಶುರು ಮಾಡಬೇಕು.
ಜಿಲ್ಲಾ ಮುಖಂಡರು ಮಾಡಬೇಕಾದ ಐದು ಕೆಲಸ:
1. ತಾಲೂಕು ವಾರ್ ರೂಮ್: ಪ್ರತಿ ತಾಲೂಕಿಗೆ ಒಬ್ಬ ಪ್ರಾಮಾಣಿಕ, ಸಂಬಳ-ಅಧಿಕಾರದ ಆಸೆ ಇಲ್ಲದ " ಉಸ್ತುವಾರಿ ತಾಲೂಕು ಸಂಚಾಲಕ" ನೇಮಿಸಿ.
2. ಹಳ್ಳಿಯಿಂದ ಹೋರಾಟ: ಜಿಲ್ಲಾ ಕೇಂದ್ರದಲ್ಲಿ AC ಹಾಲ್ ಮೀಟಿಂಗ್ ಬೇಡ. ಹಳ್ಳಿ-ಹಳ್ಳಿಗೆ ಹೋಗಿ, ವಚನ ಹೇಳಿ, ಜನರನ್ನು ಸಂಘಟಿಸಿ. ಬಸವಣ್ಣನವರು ಹಳ್ಳಿಯಿಂದಲೇ ಕ್ರಾಂತಿ ಮಾಡಿದ್ದು.
3. ಹಣವಂತರ ಜೊತೆ ಪ್ರಾಮಾಣಿಕರಿಗೂ ವೇದಿಕೆ: ಕೇವಲ ಡೋನೇಶನ್ ಕೊಡುವ ಶ್ರೀಮಂತರಿಗೆ ಮಾತ್ರ ಮೈಕ್ ಕೊಡಬೇಡಿ. ನಿಷ್ಠೆಯಿಂದ ದುಡಿಯುವ ಸಾಮಾನ್ಯ ಕಾರ್ಯಕರ್ತನನ್ನು ವೇದಿಕೆಗೆ ಕರೆತನ್ನಿ.
4. ಲೆಕ್ಕ ಕೊಡಿ, ಲೆಕ್ಕ ಕೇಳಿ: ಸಂಘಟನೆಗೆ ಬಂದ ಹಣ, ಖರ್ಚಿನ ಪಾರದರ್ಶಕ ಲೆಕ್ಕ ಪ್ರತಿ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕು.ಇದರಿಂದ ಸಂಘಟನೆ ಪಾರದರ್ಶಕವಾಗಿರುತ್ತದೆ.
5. ಕಾನೂನು ಹೋರಾಟಕ್ಕೆ ತಯಾರಿ: ಭಾವನಾತ್ಮಕ ಭಾಷಣ ಬಿಟ್ಟು, ಸುಪ್ರೀಂ ಕೋರ್ಟ್ ವಕೀಲರನ್ನು, ಸಂವಿಧಾನ ತಜ್ಞರನ್ನು ಕರೆಸಿ ಕಾರ್ಯಾಗಾರ ಮಾಡಿಸಬೇಕು.
ಸಂಘಟನೆಯಲ್ಲಿ ಆಗಬೇಕಾದ ಕ್ರಾಂತಿ:-
ಹಣವಂತರಿಗೆ ಮಾತ್ರ ವೇದಿಕೆ ಬೇಡ: ದುಡ್ಡಿದ್ದವನೇ ನಾಯಕ ಎಂಬ ಪದ್ಧತಿ ತೊಲಗಬೇಕು. ಪ್ರಾಮಾಣಿಕ, ಕಾಯಕಜೀವಿ, ತತ್ವನಿಷ್ಠ ವ್ಯಕ್ತಿಗಳಿಗೆ ಅವಕಾಶ ನೀಡಬೇಕು. ಬಸವಣ್ಣನವರು ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣನಂತಹ ಸಾಮಾನ್ಯರನ್ನು ಅನುಭವ ಮಂಟಪಕ್ಕೆ ಸೇರಿಸಿಕೊಂಡಿದ್ದರು.
ವ್ಯಕ್ತಿ ಪೂಜೆ ಬೇಡ, ತತ್ವ ಪೂಜೆ ಇರಲಿ: ನಾಯಕರ ಭಾವಚಿತ್ರಕ್ಕೆ ಹಾರ ಹಾಕುವ ಬದಲು, ವಚನಗಳನ್ನು ಪಾಲಿಸುವ ಕಾರ್ಯಕರ್ತರನ್ನು ಸೃಷ್ಟಿಸಬೇಕು.
ಒಂದೇ ವೇದಿಕೆ: ಕರ್ನಾಟಕದ ಎಲ್ಲ ಬಸವಪರ ಸಂಘಟನೆಗಳು "ಲಿಂಗಾಯತ ಧರ್ಮ ಮಾನ್ಯತಾ ಒಕ್ಕೂಟ" ಎಂಬ ಒಂದೇ ಛತ್ರಿಯಡಿ ಬರಬೇಕು. ಅಂದಾಗಲೇ ಮಾತ್ರ ಬಲಿಷ್ಠ ಸಂಘಟನೆ ಆಗಲು ಸಾಧ್ಯ.
ನಮ್ಮ ಸೇವೆ ಹೇಗಿರಬೇಕು? ಅಂದರೆ:-
1. ರಾಜಕಾರಣಿಗಳು/ಅಧಿಕಾರಿಗಳು/
ವ್ಯಾಪಾರಸ್ಥರು: ಪ್ರತಿ ತಿಂಗಳು ನಿಮ್ಮ ಲಾಭದ 5% ಅನ್ನು ಬಸವ ತತ್ವ ಪ್ರಚಾರಕ್ಕಾಗಿ ಹಾಗೂ"ಲಿಂಗಾಯತ ಧರ್ಮ ಮಾನ್ಯತಾ ನಿಧಿ"ಗೆ ನೀಡಬೇಕು.
2. ರಾಜಕಾರಣಿಗಳು: ಪಕ್ಷ ಬೇಧ ಮರೆತು ವಿಧಾನಸಭೆಯಲ್ಲಿ/ಲೋಕಸಭೆಯಲ್ಲಿ ಧ್ವನಿ ಎತ್ತಬೇಕು.
3. ಯುವಕರು: ಮೊಬೈಲ್ ಬಿಟ್ಟು, 1 ಗಂಟೆ ಸಂಘಟನೆಗಾಗಿ ಕೆಲಸ ಮಾಡಬೇಕು.
ಆಶಯ ಮಾತು: ಬಸವ ಸಂಸ್ಕೃತಿ ಎಂದರೇನು?
"ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ" ಎನ್ನುವುದು ಮಾತ್ರವಲ್ಲ.
"ನಾನು ದೊಡ್ಡವನು" ಎಂಬ ಅಹಂ ತೊರೆದು, "ನಾವೆಲ್ಲರೂ ಬಸವನ ಮಕ್ಕಳು"ಎಂದು ತಬ್ಬಿಕೊಳ್ಳುವುದೇ ನಿಜವಾದ ಬಸವ ಸಂಸ್ಕೃತಿ.
ಕೊನೆಯ ಕಳಕಳಿ:
ತೋರಿಕೆಗಾಗಿ ಹೋರಾಟ ಮಾಡುವುದು ಬೇಡ, ಅಂತರಂಗದಿಂದ ಹೋರಾಡೋಣ. ಬಸವಣ್ಣನವರು 12ನೇ ಶತಮಾನದಲ್ಲಿ ಅರಮನೆ, ಅಧಿಕಾರ ತೊರೆದು ಜನಸಾಮಾನ್ಯರಂತೆ ಬದುಕಿ, ಜಾಗತಿಕ ಲೋಕಕ್ಕೆ ಮಾದರಿಯಾಗಿದ್ದಾರೆ. ನಾವು 21ನೇ ಶತಮಾನದಲ್ಲಿ ನಾನು ಎಂಬ, ಅಹಂಕಾರವನ್ನು ತೊರೆದು ಹಳ್ಳಿಗೆ ಹೋಗೋಣ. ಸಂಘಟನೆ ಮಾಡೋಣ .......
ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ನಾವು ರಾಜ್ಯದಲ್ಲಿ, ದೇಶದಲ್ಲಿ ನಮ್ಮ ಅಸ್ತಿತ್ವವನ್ನು ದೊಡ್ಡ ಮಟ್ಟದಲ್ಲಿ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ, ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.
ಬಸವಕಲ್ಯಾಣ - ಬೀದರ್‌ನಲ್ಲಿ ಕಿಚ್ಚು ಹತ್ತಿದರೆ, ಕಲ್ಯಾಣ ಕರ್ನಾಟಕ ಹೊತ್ತಿ ಉರಿಯುತ್ತದೆ. ಕರ್ನಾಟಕ ಹೊತ್ತಿದರೆ, ದೇಶ ಎಚ್ಚರಗೊಳ್ಳುತ್ತದೆ. ಇದು ನನ್ನೊಬ್ಬನ ಕಳಕಳಿಯಲ್ಲ. ಲಕ್ಷಾಂತರ ಬಸವ ಅಭಿಮಾನಿಗಳ ಅಂತರಾಳದ ಅಳಲು. ಎಚ್ಚೆತ್ತುಕೊಳ್ಳಿ. ಒಂದಾಗಿ. ಹೋರಾಡಿ. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು "ವಾಟ್ಸಾಪ್ ವೀರರು" ಎಂದು ಕುಚೋದ್ಯ ಮಾಡುತ್ತಾರೆ.
ನೆನಪಿಡಿ: ನಾಳೆ ನಮ್ಮ ಮಕ್ಕಳು "ನಾನು ಲಿಂಗಾಯತ" ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕೆಂದರೆ, ಇಂದು ನಾವು - ನೀವು ತ್ಯಾಗ ಮಾಡಬೇಕು. ಇಲ್ಲವಾದರೆ ಇತಿಹಾಸ ಯಾರನ್ನು ಕ್ಷಮಿಸುವುದಿಲ್ಲ.
ಐಕ್ಯತೆಗಾಗಿ, ಸ್ವಾಭಿಮಾನದ ಬದುಕಿಗಾಗಿ, ಮುಂದಿನ ಪೀಳಿಗೆಯ ಉಳಿವಿಗಾಗಿ - ಒಂದಾಗೋಣ. ನಿರಂತರವಾಗಿ ಹೋರಾಟ ಮಾಡೋಣ.
@@@@
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಬಸವ ತತ್ವ ಪ್ರಚಾರಕರು

.gif)

.gif)


0 Comments