ಜಾತ್ಯಾತೀತೆಯ ಪ್ರತಿಮೂರ್ತಿ, ಕಾರ್ಮಿಕರ ಧ್ವನಿ ದಿವಂಗತ ಶ್ರೀ ಜಾರ್ಜ್ ಫರ್ನಾಂಡೀಸ್
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ
--
ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿ ಜಾರ್ಜ್ ಫರ್ನಾಂಡೀಸ್ ಹಲವು ಕಾಲದ ಅನಾರೋಗ್ಯದ ನಂತರ ಬದುಕಿನಿಂದ ವಿರಮಿಸಿದ್ದು 2019ರ ಜನವರಿ 29 ರಂದು. ಅನಾರೋಗ್ಯಕ್ಕೆ ಹಿಂದೆ ಅವರು ಜನಪ್ರತಿನಿಧಿಗಳಾಗಿ ಲೋಕಕ್ಕಾಗಿ ಸವೆಸಿದ ಪ್ರಾಮಾಣಿಕ ಬದುಕು ಅನನ್ಯವಾದದ್ದು.
ಭಾರತದ ರಾಜಕೀಯ ಇತಿಹಾಸದಲ್ಲಿ 'ಹೋರಾಟದ ರಾಜಕಾರಣದ ಕೊನೆಯ ಕೊಂಡಿ' ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಜಾರ್ಜ್ ಫರ್ನಾಂಡೀಸ್ ಅವರು ಪ್ರಖರ ಸಮಾಜವಾದಿ, ಕಾರ್ಮಿಕರ ಧ್ವನಿ ಮತ್ತು ಜಾತ್ಯತೀತತೆಯ ಅಚಲ ಪ್ರತಿಮೂರ್ತಿಯಾಗಿದ್ದರು.
ಕರ್ನಾಟಕದ ಮಂಗಳೂರಿನಲ್ಲಿ ಹುಟ್ಟಿ, ಇಡೀ ಭಾರತದ ರಾಜಕೀಯ ಮತ್ತು ಕಾರ್ಮಿಕ ಚಳುವಳಿಗಳ ಕೇಂದ್ರಬಿಂದುವಾಗಿದ್ದರು.
1950ರ ದಶಕದಲ್ಲಿ ಮುಂಬೈಗೆ ತೆರಳಿದ ಜಾರ್ಜ್ ಅವರು, ಆರಂಭದಲ್ಲಿ ಹೋಟೆಲ್ ಕೆಲಸಗಾರರು, ಟ್ಯಾಕ್ಸಿ ಚಾಲಕರು ಹಾಗೂ ದಿನಗೂಲಿ ನೌಕರರ ಹಕ್ಕುಗಳಿಗಾಗಿ ಹೋರಾಡಿದವರು. ಆಲ್ ಇಂಡಿಯಾ ರೈಲ್ವೇಮೆನ್ಸ್ ಫೆಡರೇಶನ್' ನ ಅಧ್ಯಕ್ಷರಾಗಿ, 1974ರಲ್ಲಿ ಇಡೀ ಭಾರತವೇ ಸ್ತಬ್ಧವಾಗುವಂತೆ ಮಾಡಿದ ಬೃಹತ್ ರೈಲ್ವೇ ಮುಷ್ಕರವನ್ನು ಸಂಘಟಿಸಿದವರು.
ಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರದ ಗಮನ ಸೆಳೆಯಲು ಅವರು ನಡೆಸಿದ ಹೋರಾಟಗಳು ಭಾರತೀಯ ಕಾರ್ಮಿಕ ಸಂಘಟನೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹವು. ಅಂತೆಯೇ 1970ರ ದಶಕದಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಭೂಗತ ಚಳುವಳಿಗಳನ್ನು ನಡೆಸಿದವರು.ತಮ್ಮ ಇಡೀ ರಾಜಕೀಯ ಜೀವನದುದ್ದಕ್ಕೂ ಜಾತ್ಯತೀತ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ತಮ್ಮ ಧ್ವನಿ ಮತ್ತು ಬಲವಾದ ವಿಚಾರಗಳಿಂದ ಹಿಂದುಳಿದ ವರ್ಗದವರ, ರೈತರ ಮತ್ತು ಕಾರ್ಮಿಕರ ಏಳಿಗೆಗೆ ಶ್ರಮಿಸಿದವರು.ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ (1998–2004) ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಅವರ ಕಾಲದಲ್ಲಿಯೇ ಪೋಖ್ರಾಣ್ ಅಣುಪರೀಕ್ಷೆ ಹಾಗೂ ಕಾರ್ಗಿಲ್ ಯುದ್ಧ ಯಶಸ್ವಿಯಾಗಿ ನಡೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಅಂದಹಾಗೆ ಜಾರ್ಜ್ ಫರ್ನಾಂಡೀಸ್ ಅವರ ಉಡುಗೆ ತೊಡುಗೆ ಅತ್ಯಂತ ಸರಳವಾಗಿತ್ತು. ಇಸ್ತ್ರಿ ಮಾಡದ ಖಾದಿ ಜುಬ್ಬಾ ಮತ್ತು ಪ್ಯಾಂಟ್ ಅವರ ಅಧಿಕಾರದಲ್ಲಿದ್ದಾಗಲೂ ಜನಸಾಮಾನ್ಯರಂತೆಯೇ ಬದುಕಿದ ಅವರು, ಭಾರತೀಯ ರಾಜಕಾರಣದಲ್ಲಿ ಎಂದಿಗೂ ಅಳಿಸದ ಛಾಪು ಮೂಡಿಸಿದ್ದಾರೆ.ಜಾರ್ಜ್ ಫರ್ನಾಂಡೀಸ್ ಅವರ ಸಮಾಜವಾದಿ ಚಿಂತನೆಗಳು ಮತ್ತು ಅವರ ಸರಳತೆಯ ಜೀವನ ಇಂದಿನ ಸಮಾಜಕ್ಕೆ ಮಾದರಿ.
ಜಾತ್ಯಾತೀತ ಮತ್ತು ಧರ್ಮ ನಿರಪೇಕ್ಷ ಮೌಲ್ಯಗಳಿಗೆ ಬದ್ಧರಾಗಿ, ಸದಾ ಜನರ ಧ್ವನಿಯಾಗಿದ್ದ ದಿವಂಗತ ಶ್ರೀ ಜಾರ್ಜ್ ಫರ್ನಾಂಡೀಸ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು ಸಲ್ಲಿಸುತ್ತಾ, ಅವರ ಕುರಿತು ಬರೆಯುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಯಾರು ಈ ಜಾರ್ಜ್ ಫರ್ನಾಂಡೀಸ್? ಜಾರ್ಜ್ ಫಾರ್ನಾಂಡಿಸ್ 1930ರ ಜೂನ್ 3ರಂದು ಮಂಗಳೂರಿನಲ್ಲಿ ಜನಿಸಿದರು. ಎಸ್ಎಸ್ಎಲ್‍ಸಿ ಓದಿದ ನಂತರ ಮನೆಯವರು ಪಾದ್ರಿಯಾಗಲು ತರಬೇತಿ ಪಡೆಯಲು ಬೆಂಗಳೂರಿಗೆ ಕಳುಹಿಸಿದರೆ, ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವ್ಯತ್ಯಯದಿಂದ ಜಿಗುಪ್ಸೆಕೊಂಡು ಹೊರಬಂದರು. ಅಲ್ಲಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಿನಗಳಲ್ಲೇ ಮಂಗಳೂರಿನ ಸರಕು ಸಾಗಾಣೆ ಸಂಸ್ಥೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಅಸಂಘಟಿತ ಶೋಷಿತ ಕಾರ್ಮಿಕರನ್ನು ಒಗ್ಗೂಡಿಸಿ ಅವರ ಪರವಾದ ಹೋರಾಟಗಳಿಗೆ ಧ್ವನಿಯಾದವರು.ಮುಂದೆ ಮುಂಬೈಗೆ ಬಂದು ಕೆಲಸ ಹುಡುಕುತ್ತಾ ಹಲವಾರು ಬಾರೀ ರಸ್ತೆಗಳ ಬದಿಯಲ್ಲಿ ಮಲಗಿ ಬದುಕು ಸವೆಸಿದರು. ನಂತರ ಒಬ್ಬ ಪ್ರೂಫ್ ರೀಡರ್ ಆದರು. ಹಲವಾರು ಪತ್ರಿಕೆಗಳಲ್ಲಿ ಸಂಪಾದಕೀಯ ನಡೆಸಿದರು. ರೈತರ ಮತ್ತು ಕಾರ್ಮಿಕರ ಧ್ವನಿಯಾದರು. ಮುಂದೆ ಪ್ಲಾಸಿಡ್ ಡಿ’ಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರುಗಳ ಕಾರ್ಯದಿಂದ ಪ್ರೇರಿತರಾಗಿ ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ಐವತ್ತು ಅರವತ್ತರ ದಶಕದಲ್ಲಿ ಅವರು ಮುಂಬೈನ ಪ್ರಭಾವಿ ಕಾರ್ಮಿಕ ನಾಯಕರಾಗಿದ್ದರು. 1961ರಿಂದ 1968ರ ಅವಧಿಯಲ್ಲಿ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಜನಪ್ರಿಯ ಸೇವೆ ಸಲ್ಲಿಸಿದರು. 1967ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟಿಲ್ ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು.ನಂತರ ಕ್ರಮೇಣವಾಗಿ ಮುಂಬೈನಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ ಅವರು ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾಗಿ ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ತಬ್ಧವೆನಿಸಿತ್ತು. ಜಾರ್ಜ್ ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಗೆ ತೊಡಗಿದ್ದರು. 1949ರಲ್ಲಿ ಅವರು ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. 1952-53ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ‘Dockman’ ವಾರಪತ್ರಿಕೆಯನ್ನು ಪುನಃಚೇತನಗೊಳಿಸಿದರು. ಅವರು ಅನೇಕ ವೈಚಾರಿಕ ಗ್ರಂಥಗಳು ರಚಿಸಿದ್ದಾರೆ .ಇದಲ್ಲದೆ ಅವರು ಇಂಗ್ಲಿಷ್ ಮಾಸಿಕವಾದ The Other Side ಪತ್ರಿಕೆಯ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್’ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ Amnesty International, People's Union for Civil Liberties ಸಂಸ್ಥೆಗಳ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಅವರು
ರೈಲ್ವೇ ಮಂತ್ರಿಗಳಾದಾಗ ಪ್ರಸಿದ್ಧವಾದ ಕೊಂಕಣ್ ರೈಲ್ವೇ ಅಸ್ತಿತ್ವಕ್ಕೆ ಬಂತು. ಅವರು ರಕ್ಷಣಾ ಸಚಿವರಾದಾಗ ಕಾರ್ಗಿಲ್ ಯುದ್ಧದ ಹೋರಾಟ ಏರ್ಪಟ್ಟಿತು. ಭಾರತ ಧೈರ್ಯದಿಂದ ಪರಮಾಣು ಸ್ಪೋಟ ನಡೆಸಿತು. ಚೀನಾ ದೇಶ ಭಾರತದ ವಿರುದ್ಧ ಆಗಾಗ ನಡೆಸುತ್ತಿದ್ದ ಕುತಂತ್ರಗಳನ್ನು ಧೈರ್ಯದಿಂದ ಬಯಲಿಗೆಳೆದರು. ಕೆಲವೊಂದು ಹಗರಣಗಳಲ್ಲಿ ಅವರ ಹೆಸರು ಸಿಲುಕಿತ್ತಾದರೂ ಅವರು ಧೈರ್ಯವಾಗಿ ಎದುರಿಸಿ ನಿಂತು ಸಮಜಾಯಿಷಿ ನೀಡಿದರು. ಅವರನ್ನು ವಿಚಾರಣೆಗೆ ಒಳಪಡಿಸಿದ ಆಯೋಗಗಳೆಲ್ಲವೂ ಅವರನ್ನು ನಿರ್ದೋಷಿಯೆಂದು ತೀರ್ಪು ನೀಡಿದವು. ಹೀಗೆ ಏಳು ಬಿಳುಗಳ ನಡುವೆ ಪುಟ್ ಪಾತಿನಿಂದ ಮಂತ್ರಿಸ್ಥಾನದ ವರೆಗೆ ಮೇಲೇರಿದರೂ ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದ ಜಾರ್ಜ್ ಫರ್ನಾಂಡೀಸ್ ಕಾಲನ ದೆಸೆಗೆ ಸಿಕ್ಕಿ ಹಲವು ವರ್ಷಗಳ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ನೋವಿನಿಂದ ನಲುಗುವ ದೇಹಕ್ಕೆ ಸಾವೇ ಸುಖದ ಬಿಡುಗಡೆ. ಇಂತಹ ಮಹಾನ್ ಚೇತನ ಸತ್ತಾಗಲೇ ಜನಕ್ಕೆ ನೆನಪಾಗಿ ಪುನಃ ಸ್ಮೃತಿಯಿಂದ ಅಳಿದು ಹೋಗುವುದು ನಿಜವಾದ ದುಃಖದ ಸಂಗತಿ. ಇಂತಹ ಸ್ವಾರ್ಥ ರಹಿತ ಪುತ್ರನನ್ನು ಕೊಟ್ಟ ಭಾರತ ಮಾತೆ ನಿಜಕ್ಕೂ ಧನ್ಯೆ. ನಮ್ಮ ಕಾಲದಲ್ಲಿ ಇವರನ್ನು ಕಂಡ ನಾವು ಕೂಡಾ ಧನ್ಯರು.
ಸರಳತೆ ನಾಯಕ ಜಾರ್ಜ್ :
1. ಕಾರ್ಮಿಕರ ಪ್ರಖರ ನಾಯಕ:
ಮುಂಬೈನ ಗಿರಣಿ ಕಾರ್ಮಿಕರಿಂದ ಹಿಡಿದು ರಾಷ್ಟ್ರದ ಕಾರ್ಮಿಕ ವರ್ಗದವರೆಗೆ ಎಲ್ಲರ ಧ್ವನಿಯಾಗಿದ್ದರು. "ಜೈ ಜವಾನ್, ಜೈ ಕಿಸಾನ್" ನಂತರ "ಜೈ ಕಾರ್ಮಿಕ" ಎಂಬ ಘೋಷಣೆಯನ್ನೂ ಬಲಪಡಿಸಿದ ನಾಯಕ. 1974ರ ರೈಲು ಮುಷ್ಕರ ಅವರ ದಿಟ್ಟತನದ ಸಂಕೇತ.
2. ದಕ್ಷ ಆಡಳಿತಗಾರ:
ಕೇಂದ್ರದ ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದರು:
ಕೈಗಾರಿಕೆ ಸಚಿವ - ಕೈಗಾರಿಕಾ ನೀತಿಗೆ ಹೊಸ ದಿಕ್ಕು
ರೈಲ್ವೆ ಸಚಿವ - ಜನಸಾಮಾನ್ಯರ ರೈಲ್ವೆ ವ್ಯವಸ್ಥೆಯನ್ನು ಬಲಪಡಿಸಿದರು
ರಕ್ಷಣಾ ಸಚಿವ - ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ಗಡಿ ಕಾಯುವ ಜವಾಬ್ದಾರಿ ಹೊತ್ತರು. ಅವರ ದೂರದೃಷ್ಟಿ ಮತ್ತು ದಕ್ಷತೆ ಅನನ್ಯವಾದುದು.
3. ತತ್ವ ನಿಷ್ಠೆ:
ಅಧಿಕಾರಕ್ಕಾಗಿ ತತ್ವ ಬಿಡದ ನಾಯಕ. ಸರಳತೆ, ಪ್ರಾಮಾಣಿಕತೆ ಅವರ ಬ್ರಾಂಡ್. ಸಚಿವರಾಗಿದ್ದರೂ ಬಾಡಿಗೆ ಮನೆಯಲ್ಲಿ, ಸರಳ ಜೀವನ. ಜಾತಿ-ಮತದ ಗೋಡೆ ಮುರಿದು ಜಾತ್ಯಾತೀತ ಭಾರತ ಕನಸು ಕಂಡವರು.
ಹೋರಾಟ ರಾಜಕಾರಣದ ಕೊನೆಯ ಕೊಂಡಿ :
ಭಾರತೀಯ ರಾಜಕೀಯ ದಿಗಂತದಲ್ಲಿ ಜಾರ್ಜ್ ಫರ್ನಾಂಡಿಸ್ ಎಂಬ ಧ್ರುವತಾರೆ ಅಸ್ತಂಗತವಾಗಿದೆ. ಜಾರ್ಜ್ ಅವರು 'ಹೋರಾಟ ರಾಜಕಾರಣ 'ದ ಕೊನೆಯ ಕೊಂಡಿ. ಹೋರಾಟದ ಮೂಲಕವೇ ರಾಜಕೀಯ ಏಳ್ಗೆ ಕಂಡು, ಜನ ಮತ್ತು ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಿದವರು. ಅವರನ್ನು ಕೇವಲ ರಾಜಕಾರಣಿ ಎಂಬ ಒಂದೇ ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಹೋರಾಟಗಾರ, ಕಾರ್ಮಿಕ ಮುಖಂಡ, ಪ್ರಖರ ಸಮಾಜವಾದಿ , ಸಮತಾವಾದಿ, ಅತ್ಯುತ್ತಮ ವಾಗ್ಮಿ. ಹೀಗೆ ಏನೆಲ್ಲ ವಿಶೇಷಣಗಳನ್ನು ಅವರಿಗೆ ಧಾರಾಳವಾಗಿ ನೀಡಬಹುದು. ಅವರು ಎಂದೂ ತಾವು ನಂಬಿದ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಿಲ್ಲ. ರಾಜಕೀಯದಲ್ಲಿ ಏರಬೇಕಾದ ಎಲ್ಲ ಮಜಲುಗಳನ್ನು ಏರಿದರು; ಯಾವುದಕ್ಕೂ ರಾಜಿಯಾಗಲಿಲ್ಲ. ಅಧಿಕಾರ ಸುಖ ಅವರನ್ನು ಆಲಸಿಯಾಗಿ ಮಾಡಲಿಲ್ಲ; ಗರ್ವಿಷ್ಠರನ್ನಾಗಿಸಲಿಲ್ಲ. ಅಧಿಕಾರ ಬರುವ ಮುಂಚೆ ಹೇಗಿದ್ದರೋ, ಕುರ್ಚಿಯಲ್ಲಿ ಕುಳಿತಾಗಲೂ ಹಾಗೆಯೇ ಇದ್ದರು. ತಾವು ಏರಿದ ಪ್ರತಿ ಹುದ್ದೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ದೊಡ್ಡತನ.ಅವರ ಉಡುಗೆ ತೊಡುಗೆ ಸಿಂಪಲ್. ಒಂದು ಖಾದಿ ಪ್ಯಾಂಟ್; ಇಸ್ತ್ರಿಯಾಗದ ಖಾದಿ ಜುಬ್ಬಾ, ಇಷ್ಟೆ ಅವರ ತೊಡುಗೆ. ಬಿಳಿ ಕೂದಲು ತುಂಬಿದ ತಲೆ, ಮುಖಕ್ಕೊಂದು ಅಗಲವಾದ ಕನ್ನಡಕ ಅವರ ಒಟ್ಟು ವ್ಯಕ್ತಿತ್ವಕ್ಕೆ ಒಂದು ಗಂಭೀರತೆಯನ್ನು ತಂದುಕೊಟ್ಟಿತ್ತು. ಆದರೆ, ಅವರ ಜೀವನ ಮಾತ್ರ ಸರಳವಾಗಿರಲಿಲ್ಲ. ಮೂಲತಃ ಕರ್ನಾಟಕದವರಾದರೂ ಇಡೀ ಭಾರತವೇ ಅವರ ಹೋರಾಟದ ಅಂಗಣವಾಗಿತ್ತು. ಅವರು ಕಾಲಿಟ್ಟ ಕಡೆ ಹೋರಾಟದ ಹೆಜ್ಜೆಗಳು ಮೂಡುತ್ತಿದ್ದವು. ಮಂಗಳೂರು, ಬೆಂಗಳೂರು, ಮುಂಬಯಿ, ಬಿಹಾರ, ದಿಲ್ಲಿ... ಹೀಗೆ ಅವರ ಕಾರ್ಯಕ್ಷೇತ್ರ ಹರಡಿಕೊಳ್ಳುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯಾವಾಗಲೂ ಚಿಂತನೆಗಳಿರುತ್ತಿದ್ದವು. ಕಾರ್ಮಿಕರ ಶ್ರೇಯೋಭಿವೃದ್ಧಿಯೇ ಮೂಲಮಂತ್ರವಾಗಿತ್ತು. ಅವರ ಹಿತರಕ್ಷ ಣೆಗೆ ಎಂಥ ಹೋರಾಟಕ್ಕೂ ಅಣಿಯಾಗುತ್ತಿದ್ದರು. ಒಮ್ಮೆ ಅವರ ಮುಷ್ಕರ ಕರೆಗೆ ಇಡೀ ದೇಶವೇ ಸ್ತಬ್ಧವಾಗಿತ್ತು; ಅಂಥ ಧೀಃಶಕ್ತಿ ಅವರಲ್ಲಿತ್ತು. ಆದರೆ, ಅವರ ಕೊನೆಯ ದಿನಗಳು ಮಾತ್ರ ಯಾತನಾಮಯವಾಗಿದ್ದವು ಎಂಬುದು ಅವರನ್ನು ಇಷ್ಟಪಡೋರಿಗೆ ಅರಗಿಸಿಕೊಳ್ಳಲಾಗದ ಸಂಗತಿ.ಜಾರ್ಜ್ ಅದ್ಭುತ ಮಾತುಗಾರರು. ಅವರು ಭಾಷಣಕ್ಕೆ ನಿಂತರೆ ಇಡೀ ಜನಸಮೂಹ ತದೇಕ ಚಿತ್ತದಿಂದ ಆಲಿಸುತ್ತಿತ್ತು. ಸಂಸತ್ತಿನಲ್ಲಿ ಮಾತನಾಡಲು ಆರಂಭಿಸಿದರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ಜಾರ್ಜ್ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಖರ ಸಮಾಜವಾದಿಯಾಗಿದ್ದ ಜಾರ್ಜ್ ತುಂಬ ದಿನಗಳ ಕಾಲ ಅನಾರೋಗ್ಯಪೀಡಿತರಾಗಿ ಕೊನೆಯ ದಿನಗಳನ್ನು ಅತ್ಯಂತ ಯಾತನೆಯಲ್ಲಿ ಕಳೆದರು. ಅವರೀಗ ಯಾರೂ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇಂತಹ ಆದರ್ಶ ವ್ಯಕ್ತಿತ್ವದ ವ್ಯಕ್ತಿಯ ಸರಳತೆಯ ಜೀವನವನ್ನು ಇಂದಿನ ನಾಗರಿಕ ಸಮಾಜ ಅಳವಡಿಸಕೊಳ್ಳಬೇಕು. ಈ ಮುಖಾಂತರ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಇಂದಿನ ರಾಜಕೀಯ ವ್ಯಕ್ತಿಗಳು ಸಾಗುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಹ ಕೆಲಸ ಮಾಡಲೇಬೇಕು.
ಜಾರ್ಜ್ ಧರ್ಮನಿರಪೇಕ್ಷತೆ:
1. ಜನರೇ ದೇವರು: ಅಧಿಕಾರ ಸಿಕ್ಕಾಗ ಜನರನ್ನು ಮರೆಯದಿರಿ. ಜಾರ್ಜ್ ಸಾಹೇಬ್ ಕೊನೆವರೆಗೂ ಬೀದಿಯ ಜನರ ಜೊತೆಗಿದ್ದರು.
2. ತತ್ವಕ್ಕೆ ಬೆಲೆ: ಯಾವುದೇ ಒತ್ತಡಕ್ಕೆ ಮಣಿಯದೆ ಧರ್ಮನಿರಪೇಕ್ಷತೆ ಎಂಬ ಮೌಲ್ಯವನ್ನು ಉಳಿಸಿಕೊಂಡರು.
3. ಕೆಲಸವೇ ಆರಾಧನೆ: ರಕ್ಷಣಾ ಖಾತೆ ನಿಭಾಯಿಸುತ್ತಲೂ ಸೈನಿಕರ ಬೂಟು ತೊಳೆದ ನಾಯಕ. ಹುದ್ದೆ ದೊಡ್ಡದಲ್ಲ, ಕೆಲಸ ದೊಡ್ಡದು ಎಂಬುದಕ್ಕೆ ಸಾಕ್ಷಿ.
ಕೊನೆಯ ಮಾತು:
ಜಾತಿ-ಮತದ ಹೆಸರಲ್ಲಿ ಜನರನ್ನು ಒಡೆಯುತ್ತಿರುವ ಇಂದಿನ ರಾಜಕಾರಣಕ್ಕೆ ಜಾರ್ಜ್ ಫರ್ನಾಂಡೀಸ್ ಅವರ ಬದುಕು ಒಂದು ಪಾಠ.
ಕಾರ್ಮಿಕರ ಹಕ್ಕು, ದೇಶದ ಸುರಕ್ಷತೆ, ಜಾತ್ಯಾತೀತ ಮೌಲ್ಯ - ಮೂರನ್ನೂ ಸಮತೋಲನದಲ್ಲಿ ನಡೆಸಿದ ನಾಯಕ.
ಅವರ ಜನ್ಮದಿನದಂದು ನಾವೆಲ್ಲರೂ ಪ್ರತಿಜ್ಞೆ ಮಾಡೋಣ: "ಜನರ ಧ್ವನಿಯಾಗಿ ಬದುಕೋಣ, ತತ್ವಕ್ಕೆ ಬೆಲೆ ಕೊಡೋಣ, ಸರಳತೆಯನ್ನು ಉಳಿಸಿಕೊಳ್ಳೋಣ"
@@@@@@
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಪರಿಸರವಾದಿ, ಹೋರಾಟಗಾರರು, ಬೀದರ ಜಿಲ್ಲೆ


.gif)

.gif)


0 Comments