*ಕಾವ್ಯಧಾರೆ* *ಸರ್ವಜನಾಂಗದ ಶಾಂತಿಯ ತೋಟದೊಳಗೆ ನನ್ನ ವಿಹಾರ*

 *ಕಾವ್ಯಧಾರೆ*


 *ಸರ್ವಜನಾಂಗದ ಶಾಂತಿಯ ತೋಟದೊಳಗೆ ನನ್ನ ವಿಹಾರ* 




“ಸರ್ವಜನಾಂಗದ ಶಾಂತಿಯ ತೋಟ”ವೆಂದು ನುಡಿಯುವ ನಾಡಿದು,

ಮಾತಿನ ಮಲ್ಲಿಗೆ ಅರಳಿದರೂ ಮನದಲಿ ಮುಳ್ಳು ಬೆಳೆದಿದು.

ಒಂದೇ ಮಣ್ಣಿನ ಮಕ್ಕಳೆಂದು ವೇದಿಕೆ ಮೇಲೆ ಹಾಡಿದರೂ,

ಜಾತಿಯ ಗೋಡೆ ಮೌನವಾಗಿ ಹೃದಯಗಳ ನಡುವೆ ನಿಂತಿದೆ.

ಕಲೆ ಸಾಹಿತ್ಯದ ದೀಪಗಳು ಬೆಳಗುವ ಕನ್ನಡ ಭುವಿಯಲ್ಲಿ,

ಮಾನವೀಯ ಮಮತೆಯ ಮಳೆ ಯಾಕೋ ಇಂದು ಕಡಿಮೆಯಾಗಿದೆ.

ಬರಹಗಳಲ್ಲಿ ಪ್ರೀತಿಯ ಮಾತು ಬದುಕಲ್ಲಿ ಕಾಣದಾಗ,

ಸಹೋದರತೆಯ ಹಕ್ಕಿಗಳು ಗೂಡಿಲ್ಲದೆ ಅಲೆದಾಡುತ್ತಿವೆ.

ಭ್ರಾತೃತ್ವದ ಬಾವಿ ಬರಿದಾಗಿ ಸ್ವಾರ್ಥದ ಗಾಳಿ ಬೀಸುತ್ತಿದೆ,

ಸಂಸ್ಕೃತಿಯ ಹೆಸರಲಿ ಕೆಲವೆಡೆ ಸಂಕುಚಿತತೆ ಬೆಳೆದಿದೆ.

ಹೃದಯ ವೈಶಾಲ್ಯದ ನೆರಳಲ್ಲಿ ಬದುಕುವ ಜನ ವಿರಳವಾಗಿ,

ಮನದ ಕಿಟಕಿಯು ಮುಚ್ಚಿಕೊಂಡು ಮನುಜ ಮನುಜನ ಮರೆಯುತ್ತಿದ್ದಾನೆ.

ಪರಿವರ್ತನೆಯ ಕಾಲಘಟ್ಟ ಹೊಸ ಕನಸುಗಳ ಕರೆಯುತ್ತಿದೆ,

ಹಳೆಯ ಗೋಡೆ ಒಡೆದು ಹೊಸ ದಾರಿಯ ಬೆಳಕು ಮೂಡುತ್ತಿದೆ.

ಜಾತಿ ಮತದ ಗೆರೆಯನ್ನು ಮೀರಿ ಕೈಗಳು ಒಂದಾದಾಗ,

ಕುವೆಂಪು ಕಂಡ ಕನಸಿನ ತೋಟ ಮತ್ತೆ ಹಸಿರಾಗಬಹುದು.

ನಾಡು ಕೇವಲ ಭೂಮಿಯಲ್ಲ ಅದು ಬದುಕಿನ ಭಾವಗೀತೆ,

ಮನುಜ ಮನುಜನ ಪ್ರೀತಿಸಿದಾಗ ಅರಳುವುದು ಸತ್ಯನೀತಿ.

“ನಾವೆಲ್ಲರೂ ಒಂದೇ” ಎನ್ನುವ ನುಡಿ ತುಟಿಯಲಿ ನಿಲ್ಲದಿರಲಿ,

ಮನದ ಮಣ್ಣಲಿ ಬೇರು ಬಿಟ್ಟು ಬದುಕಿನ ದಾರಿಯಾಗಲಿ.



ಕವಿ:ಡಾ. ಜಯವೀರ ಎ. ಕೆ.

      ಖೇಮಲಾಪುರ

Image Description

Post a Comment

0 Comments