*ಗಝಲ್*
ಕಂಬನಿ ಮಿಡಿದಿಹ ಕ್ಷಣಗಳಿಗೆ ಸ್ಪಂದಿಸಿದವನ
ನಿಲುವು ಬೇಸರವಾಯಿತೆ
ಜೊತೆಗಾರಳೆಂದು ಸದಾಕಾಲ ಸ್ಮರಿಸಿದವನ
ಒಲವು ಭ್ರಮೆ ಅನಿಸಿತೆ
ಜೋಡಿ ಜೀವಗಳೆಂದು ನಾವಂದುಕೊಂಡರೂ
ಒಂಟಿತನ ವಾಸ್ತವ
ಬೇಕು ಬೇಡಗಳ ಪೂರೈಸದವನ ಪ್ರೇಮಸಂಗ
ಬೇಡವಾಯಿತೆ
ನೋವಿನೊಂದಿಗೆ ಬದುಕುವ ಪಾಠದ ಕಲಿಕೆ
ಇಬ್ಬರಿಗೂ ಅನಿವಾರ್ಯ
ಕಾಳಜಿಯ ಬರಿ ಮಾತುಗಳು ಮನದಾಸೆಯ
ಚಿಗುರಿಸದೆ ಬರಡಾಯಿತೆ
ಕತ್ತಲ ಬಾಳಿಗೆ ಬೆಳಕನರಸಿ ಹೊರಟ ವೇಳೆ
ಎದುರಾದವರು ನಾವಿಬ್ಬರು
ಹೃದಯ ದೇಗುಲಕೆ ದೇವನಾದರೂ ಜೀವನ
ಚಕ್ರಕ್ಕೆ ಗಾಲಿಯಾಗದಾಯಿತೆ
ಅಶೋಕನೂ ಬದುಕಲಿ ನೊಂದು ಬೆಂದವನು
ಸುಖ ಸುಪ್ಪತ್ತಿಗೆ ಅವನದಲ್ಲ
ನೀಡಿದ ಪ್ರೀತಿಯನು ತಿರಸ್ಕರಿಸಲು ಆತ್ಮಸಾಕ್ಷಿ
ಅಡ್ಡಿಯಾಯಿತೆ
*ಅಶೋಕ ಬೇಳಂಜೆ*

.gif)

.gif)


0 Comments