*ಸರಳ ಧ್ಯಾನವು ಸರ್ವ ರೋಗಗಳ ನಿವಾರಿಣಿ ಯಾಗಿದೆ:*
*ಡಾ. ಜಿ ಜಿ ಕರ್ಲಟ್ಟಿ*
ರಾಯಬಾಗ:ಈ ವೇಗದ ಹಾಗೂ ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಮಾನಸಿಕ ನೆಮ್ಮದಿ ಇಲ್ಲವಾದಂತಾಗಿದೆ. ಸರಳ ಧ್ಯಾನ ದೇಹ ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ. ಆದುದರಿಂದ ಸರಳ ಧ್ಯಾನವು ಸರ್ವ ರೋಗಗಳ ನಿವಾರಿಣಿಯಾಗಿದೆ ಎಂದು ಕಾಗವಾಡ ಪಟ್ಟಣದ ಶ್ರೀ ಶಿವಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ. ಜಿ. ಜಿ ಕರ್ಲಟ್ಟಿ ಹೇಳಿದರು.
ಇಲ್ಲಿಯ ಸಮೀಪದ ಶಿರಗುಪ್ಪಿಯ ಕೆ ಎಲ್ ಇ ಸಂಸ್ಥೆಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಕಳೆದ ಬುಧವಾರ ದಿ. 22 ರಂದು ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗಾಗಿ ಸರಳ ಧ್ಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಧ್ಯಾನವು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುವುದು. ಮಾತ್ರವಲ್ಲದೆ ನಿರಂತರ ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂದರು. ನಿಯಮಿತ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ ಆರೋಗ್ಯ ಸುಧಾರಿಸುತ್ತದೆ ಹಾಗೂ ದೇಹದಲ್ಲಿ ಸಂತೋಷ ಹೆಚ್ಚುತ್ತದೆ ಎಂದು ವಿಶ್ಲೇಷಿಸಿದರು. ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ನಿತ್ಯ ಅರ್ಧ ಗಂಟೆಯಾದರೂ ಸರಳ ಧ್ಯಾನ ಮಾಡುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆ ಸ್ಮರಣ ಶಕ್ತಿ ಉದ್ದೀಪನಗೊಳ್ಳುತ್ತದೆ ಎಂದರು. ಸರಳ ಧ್ಯಾನದ ವಿವಿಧ ಆಯಾಮಗಳನ್ನು ಪ್ರಾಯೋಗಿಕವಾಗಿ ಮಾಡುವುದರೊಂದಿಗೆ ಸೊಗಸಾಗಿ ಪರಿಚಯಿಸಿದರು. ಧ್ಯಾನವನ್ನು ಕೈ ವಶ ಮಾಡಿಕೊಂಡು ಇಡೀ ಭಾರತ ದೇಶದಲ್ಲಿಯೇ ಆದರ್ಶ ಪ್ರಾಯ ವ್ಯಕ್ತಿತ್ವ ಹೊಂದಿದ ಭಗವಾನ್ ಗೌತಮ ಬುದ್ಧರು, ಶತಮಾನದ ಸಂತ ಶ್ರೇಷ್ಠ ಲಿಂಗೈಕ್ಯ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಹಾಗೂ ಡಾ. ಸುಭಾಷ್ ಪತ್ರಿಜಿ ಅವರ ಸಾಧನಾ ಪಥವನ್ನು ಡಾ.ಕರ್ಲಟ್ಟಿ ಅವರು ಸಾಂದರ್ಭಿಕವಾಗಿ ಸ್ಮರಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಎಸ್ ಬಿ ಪಾಟೀಲ ಅವರು ಘನ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ಪ್ರೊ ಕೆ ಎ ಮಾಳಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪ್ರೊ ಆರ್ ಡಿ ಪವಾರ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments