"ಸಹೃದಯಿ ಅಕ್ಕರಬಂಧುಗಳಿಗೆ ಸಂಭ್ರಮದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.."
ಇದು ನಮ್ಮ ನಿಮ್ಮದೇ ಎದೆಗಳ ಹೊಸವರ್ಷದ ಆಶಯಗಾನದ ಕವಿತೆ. ನವಹರ್ಷಕೆ ಮನದಂಗಳದ ನವೋಲ್ಲಾಸದ ಜೀವಯಾನದ ಭಾವಗೀತೆ. ಪರಾಭವನಾಮ ಸಂವತ್ಸರದ ಶುಭಕಾಮನೆಗಳೊಂದಿಗೆ ಒಪ್ಪಿಸಿಕೊಳ್ಳಿ ಈ ಕಾವ್ಯದುಡುಗೊರೆ.." - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಆಶಯಗಾನ..!
ಸೇರಿಸಿ ಬೇವಿನೊಂದಿಗೆ ಬೆಲ್ಲ
ಸೇವಿಸಬೇಕು ಮೆಲ್ಲ.. ಮೆಲ್ಲ..
ಆಸ್ವಾಧಿಸುತ ನೋವುನಲಿವೆಲ್ಲ
ಆರಾಧಿಸುತ ಸೋಲುಗೆಲುವೆಲ್ಲ
ಸಮಚಿತ್ತದಿ ಸ್ವೀಕರಿಸಬೇಕು ಎಲ್ಲ.!
ಮತ್ತೆ ಮರಳಿ ಬಂದಿದೆ ಯುಗಾದಿ
ಮರೆಸುತೆಲ್ಲ ಹಳತುಗಳ ತಗಾದಿ
ಹಾಸಿಹುದು ನವಸಂಭ್ರಮದ ಗಾದಿ
ತೋರುತಿದೆ ನವಬಾಳಿನ ಯಾದಿ
ಬೆಳಗಿದೆ ಹೊಸ ವರುಷದ ಹಾದಿ.!
ಒಳಿತ ನೀಡಲಿ ಪರಾಭವ ಸಂವತ್ಸರ
ಮಾರ್ದನಿಸಲಿ ಜೀವ ಝೇಂಕಾರ
ಅನುರಣಿಸಲಿ ಎಲ್ಲೆಡೆಯೂ ಸುಸ್ವರ
ಆಗಲಿ ಶಾಂತಿ ಸಂಪ್ರೀತಿಯ ಸಾಕಾರ
ನಲಿಯಲಿ ಸಂತಸದಿ ಸಕಲ ಜೀವಚರ.!
ಬುವಿಗೆ ವರವಾಗಲಿ ಈ ಹೊಸವರ್ಷ
ಕರುಣಿಸುತ ಕಣಕಣಕೂ ನವಹರ್ಷ
ನೀಡುತ ಪ್ರೀತಿ ಕಾರುಣ್ಯದ ಜೀವಸ್ಪರ್ಶ
ಸ್ಫರಿಸುತ ಸೌಹಾರ್ದತೆ ಭಾವೋತ್ಕರ್ಷ
ಸುರಿಸಲಿ ನವಚೈತನ್ಯದ ಅಮೃತವರ್ಷ.!
ನವೀಕರಿಸುತ ಸದ್ಭಾವ ಜೀವ ಬಂಧ
ಸಮೀಕರಿಸಲಿ ಮಾನವತೆ ಸಂಬಂಧ
ಕರಗಲಿ ಜಗದಿ ದ್ವೇಷ ಮತ್ಸರದ ಭೇದ
ನಿರ್ನಾಮವಾಗಲಿ ಸಮರದ ರಣನಾದ
ಮೊಳಗಲಿ ಸೌಹಾರ್ದ ಸಾಮರಸ್ಯ ನಿನಾದ.!
ಎ.ಎನ್.ರಮೇಶ್. ಗುಬ್ಬಿ.

.gif)

.gif)


0 Comments