ಗುರುಭ್ಯೋನಮಃ

 "ಸಂವಿಧಾನ ಉಳಿಸಿದ ಯತಿ, ಸಂತಕುಲ ತಿಲಕ, ಕೇರಳದ ಶಂಕರಾಚಾರ್ಯರೆಂದೇ ಜಗತ್ಪಸಿದ್ದರಾಗಿದ್ದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಬ್ರಹ್ಮೈಕ್ಯರಾದ ನಂತರ ಎಡನೀರು ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಳೆದ ನಾಲ್ಕು ವರ್ಷಗಳಲ್ಲಿ ತೋರಿದ ಸಾಧನೆ, ಮಾಡಿದ ಸೇವಾ ಕೈಂಕರ್ಯ, ಬೆಳೆದ ಪರಿ, ಸಮಾಜ ಬೆಳಗಿದ ಸಿರಿ ಅತ್ಯಂತ ಶ್ಲಾಘನೀಯ, ಅಭಿನಂದನೀಯ. ಶ್ರೀಮಠವನ್ನು ಅತ್ಯದ್ಭುತವಾಗಿ ಮುನ್ನಡೆಸುತ್ತಿರುವ ಅವರ ಆಧ್ಯಾತ್ಮಿಕ ಬದ್ದತೆ, ಸಮಾಜಿಕ ಕಾರ್ಯತತ್ಪರತೆ, ಸೇವಾ ನಿಸ್ಪೃಹತೆ, ಧಾರ್ಮಿಕ ಕ್ಷಮತೆ, ತತ್ವ-ಸತ್ವ ಸಮಗ್ರತೆ ಅಮೋಘ, ಅನನ್ಯ. ಈಗಂತೂ ಅಕ್ಷರಶಃ ಕೇಶವರಂತೆ ಕಂಗೊಳಿಸುತ್ತಿರುವ ಶ್ರೀಗುರು ಸಚ್ಚಿದಾನಂದರ ಜನ್ಮದಿನಕ್ಕೆ ಅರ್ಪಿಸಿದ ಕಾವ್ಯಪ್ರಣತೆಯಿದು. ಒಪ್ಪಿಸಿಕೊಳ್ಳಿ ಗುರುವೆ." - ಅತ್ಯಂತ ಪ್ರೀತ್ಯಾದರ ಅಭಿಮಾನದಿಂದ ಅಸಂಖ್ಯ ಶಿಷ್ಯವೃಂದದ ಪರವಾಗಿ ಎ.ಎನ್.ರಮೇಶ್.ಗುಬ್ಬಿ.  



ಗುರುಭ್ಯೋನಮಃ



ಹಾವಭಾವ, ನಗು, ನಡೆ-ನುಡಿ, ಮೌನ

ಜಪ-ತಪ, ಪೂಜೆ, ಅನುಷ್ಠಾನ, ಧ್ಯಾನ

ಸಕಲವೂ ಕೇಶವಾನಂದರ ಪಡಿಯಚ್ಚು

ಸಮಸ್ತ ಶಿಷ್ಯಕೋಟಿಗೂ ಬಲು ಮೆಚ್ಚು

ಸಚ್ಚಿದಾನಂದರೀಗ ಸರ್ವರ ಅಚ್ಚುಮೆಚ್ಚು.!


ಕೇಶವಾನಂದರದೇ ತೇಜಸ್ಸು, ವರ್ಚಸ್ಸು

ಆ ಶ್ರೀಗುರುವಿನಂತಹದೇ ಪ್ರೀತಿ ಮನಸ್ಸು

ಅಕ್ಷರಶಃ ಅದೇ ಚೈತನ್ಯಜ್ಯೋತಿ ಹೊಳಪು

ಅಡಿಗಡಿಗು ಅದೇ ಕಾರುಣ್ಯಕಾಂತಿ ಒನಪು

ಸಚ್ಚಿದಾನಂದರೆಂದರೆ ಕೇಶವರ ತದ್ರೂಪು.!


ಲೌಕಿಕದಿಂದಲೌಕಿಕದೆಡೆಗಿನ ನಡಿಗೆ ವಿಸ್ಮಯ

ಪರದೆಡೆಗಿನ ಪರಿವರ್ತನೆ ಪರಮಾಶ್ಚರ್ಯ

ಭವ ಕಳಚಿ ಕಾವಿ ಧರಿಸಿದ ಪರಿಯೆ ಅನನ್ಯ

ಬದುಕನ್ನೆ ಬದಲಿಸಿಕೊಂಡ ಬಗೆ ಅದ್ವಿತೀಯ.

ಸಚ್ಚಿದಾನಂದರೆ ನೀವಿಂದು ಜಗಕೆ ದೇದೀಪ್ಯ.!


ಗುರು ಪರಂಪರೆ ಮುಂದುವರಿಸಿದ ಮಹಿಮ

ನೀಡಿ ಪೂಜಾರಾಧನೆಗಳಿಗೆ ನವ ಆಯಾಮ

ನಿತ್ಯ ನಾದ, ವೇದ, ಮಂತ್ರಗಳ ಸಂಕೀರ್ತನ

ಕಲೆ ಸಾಹಿತ್ಯ, ಸಂಸ್ಕಾರ, ಸಂಸ್ಕೃತಿ ಆವರ್ತನ

ಸಚ್ಚಿದಾನಂದರೇ ನೀವೀಗ ವಿಶ್ವಕೆ ನಿದರ್ಶನ.!


ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಂಚರಿಪ ರೀತಿ

ಅವಿರತ ದಣಿವಿಲ್ಲದೆ ದುಡಿವ ಪರಿಶ್ರಮ ಪ್ರೀತಿ

ಸಮಾಜಮುಖಿ ಸೇವೆ ಸಾಧನೆಗಳ ನವನೀತಿ

ಲೋಕವನೇ ನಿಬ್ಬೆರಗಾಗಿಸಿಹ ನಿಸ್ಪೃಹ ಸಂತ

ಸಚ್ಚಿದಾನಂದರೇ ಶುಭಕೋರುತಿದೆ ದಿಗ್ದಿಗಂತ.!


ಶ್ರೀಗುರುವೇ ಬೆಳಗುತಿದೆ ನಿಮ್ಮ ಕೀರ್ತಿಸಮ್ಮಾನ

ನಿಮ್ಮಿಂದ ಮಠದ ಅಭ್ಯುದಯ ಪ್ರವರ್ಧಮಾನ

ಕೇಶವಾನಂದರ ಕರಸಂಜಾತರಿಗಿದೋ ನಮನ

ಅರ್ಪಿಸಿಕೊಳ್ಳಿ ನಿಮ್ಮಡಿದಾವರೆಗೆ ನನ್ನೀ ಕವನ

ಶ್ರೀಗುರುವಿನ ಜನ್ಮದಿನಕೆ ಅನಂತ ಶುಭಕಾಮನ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments