"ಇದು ಒಲವಿನ ಮೋಡಿಯ ಅನಾವರಣದ ಕವಿತೆ. ಅನುರಾಗ ಗಾರುಡಿಯ ರಿಂಗಣಗಳ ಭಾವಗೀತೆ. ಪ್ರೀತಿ-ಪ್ರೇಮ ಸಂವೇದನೆಗಳ ಭಾವದಾಂಗುಡಿಯ ಜೀವಗೀತೆ. ಮುಗಿಲಿನ ಯಾವೊದೋ ಒಂದು ಮಳೆಹನಿ, ಸಾಗರದ ಮತ್ಯಾವುದೋ ಚಿಪ್ಪಿನಲಿ ಸೇರಿ ಸ್ವಾತಿಮುತ್ತಾಗುವಷ್ಟೇ ಅನೂಹ್ಯ ಸಂಗತಿ ಈ ಪ್ರೀತಿ ಮೋಡಿ. ವಿಧಾತನ ಅನನ್ಯ ಗಾರುಡಿ. ಈ ಒಲವೆಂಬುದು ಅಕ್ಷರಶಃ ಅಯೋಮಯ ಅಷ್ಟೇ ಅಲ್ಲ.. ವರ್ಣನಾತೀತ ವಿಸ್ಮಯ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಗಾರುಡಿ..!
ಯಾರ ಅಧರಗಳಿಗೆ
ಮತ್ಯಾರ ಅಧರಗಳ
ಮಾಧುರ್ಯ ಸವಿಯೋ?
ಯಾರ ಆಂತರ್ಯಕೆ
ಇನ್ಯಾರ ಆಂತರ್ಯದ
ಔದಾರ್ಯ ಸಿರಿಯೋ.?
ಯಾರ ಜೀವಗಳಿಗೆ
ಮತ್ಯಾರ ಭಾವಗಳ
ಸೌಂದರ್ಯ ಲಹರಿಯೋ?
ಯಾರ ಬದುಕುಗಳಿಗೆ
ಇನ್ಯಾರ ಬೆಳಕಿನಾ
ಚೈತನ್ಯ ಪ್ರಹರಿಯೋ?
ಯಾರ ಕನಸುಗಳಿಗೆ
ಮತ್ಯಾರ ಮನಸುಗಳ
ಕಾರುಣ್ಯ ಝರಿಯೋ?
ಯಾವ ಕ್ಷಣಗಳಿಗೆ
ಇನ್ಯಾರ ರಿಂಗಣಗಳ
ಲಾಲಿತ್ಯ ಕರೆಯೋ?
ಸರ್ವವೂ ಸಕಲವೂ
ವಿಧಾತನ ವಿಸ್ಮಯಗಳ
ಅನೂಹ್ಯ ಮೋಡಿ.!
ಸಕಲವೂ ಸಮಸ್ತವೂ
ಅದೃಶ್ಯ ನಿಯಾಮಕನ
ಕಲ್ಪನಾತೀತ ಗಾರುಡಿ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments