ಮರೆವಿನ ಹನಿಗಳು..!

 "ಇಲ್ಲಿವೆ ಒಂದು ಡಜನ್ ಮರೆವಿನ ಹನಿಗಳು. ಮರೆಗುಳಿತನದ ಆಂತರ್ಯ ಬಿಚ್ಚಿಡುವ ಹನ್ನೆರಡು ದನಿಗಳು. ಮರೆವು, ಅರಿವು, ಪರಿವುಗಳ ಕರ್ಮ-ಧರ್ಮದ ಮಾರ್ಮಿಕ ಮಾರ್ದನಿಗಳು. "ಮರೆವು" ಎಂಬ ಮೂರಕ್ಷರದ ಪದದಲ್ಲಿ ಏನೇನೆಲ್ಲ ಸಂಗತಿಗಳ ಸೂಚ್ಯ ಭಾಷ್ಯಗಳ ಮೊರೆತವಿದೆ. ಎಷ್ಟೆಲ್ಲ ಭಾವ ಸಂವೇದನೆಗಳ ಭೋರ್ಗರೆತವಿದೆ. ಏನಂತೀರಾ..?"- ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 



ಮರೆವಿನ ಹನಿಗಳು..!



1. ಮರೆವು.!


ನೆನಪುಗಳು ಬೇಕೆನ್ನುವವರಿಗೆ

ಮರೆವೆಂಬುದು ರೋಗ.!

ನೆನಪುಗಳೆ ಬೇಡೆನ್ನುವವರಿಗೆ

ಮರೆವೆಂಬುದು ಯೋಗ.!


**********************


2. ನಂಟು.!


ಬುದ್ದಿವಂತರಿಗೆ ಮರೆವಿನ ಚಿಂತೆ

ಹೃದಯವಂತರಿಗೆ ನೆನಪುಗಳ ಸಂತೆ.!


*********************


3. ಜಾಣ ಮರೆವು.!


ಬಹಳಷ್ಟು ಜನರಿಗೆ ಕೊಟ್ಟಿದ್ದರ 

ಕುರಿತು ಪೂರ್ಣ ಅರಿವು ಪರಿವು

ಪಡೆದಿದ್ದರ ಬಗೆಗೆ ಅದೇಕೋ

ಅಕ್ಷರಶಃ ಸಂಪೂರ್ಣ ಮರೆವು.!


***********************


4. ವಿಪರ್ಯಾಸ.!


ನೆನೆಯಬೇಕೆನ್ನುವ ಸಾವಿರ ಸಿಹಿಗಳಿಗಿಂತಲೂ

ಮರೆಯಬೇಕೆನ್ನುವ ಒಂದೇ ಒಂದು ಕಹಿಯೆ

ಹೆಚ್ಚು ಕಾಡುವುದು, ಹುಚ್ಚು ಮಾಡುವುದು.!


********************


5. ಅಗತ್ಯ.!


ಜೀವಕ್ಕೆ ಮರೆವು ಬೇಕು

ಜೀವನಕ್ಕೆ ಅರಿವು ಬೇಕು.!


*******************


6. ಅವಿನಾ.!


ಮರೆವಿಗೆ ಶರಣಾದರೆ

ನಿರಾಳ ಬದುಕು

ಅರಿವಿಗೆ ಶರಣಾದರೆ

ಧಾರಾಳ ಬೆಳಕು.!


******************


7. ಪರಿಹಾಸ.!


ಮರೆಯುವವರಿಗೆ

ನೆನಪುಗಳೆ ಇಲ್ಲ.!

ಮರೆಯದವರಿಗೆ

ನೆನಪುಗಳೆ ಎಲ್ಲ.!


****************


8. ಅಂತರ.!


ಮರೆತು ಇರುವವರಿಗೆ

ಮರೆವು ವರರೂಪ.!

ಮರೆಯಲು ಆಗದವರಿಗೆ

ಮರೆವು ಘೋರಶಾಪ.!


*****************


9. ಕಿಲಾಡಿ.!


ಬೇಕಿದ್ದನ್ನು ಮರೆಯಲಾಗದಷ್ಟು ಅರಿವು

ಬೇಡದ್ದನ್ನು ನೆನಪಿಡಲಾಗದಷ್ಟು ಮರೆವು


*******************


10. ಯಾದಿ.!


ಮರೆವಿನ ಅವಧಿ

ಗೆದ್ದರಷ್ಟೆ ನಮಗೆ

ಅರಿವಿನ ಪರಿಧಿ.!


***************


11. ದುರಂತ.!


ಕೆಲವರಿಗೆ ಮರೆವಿನ ಜ್ವರ

ಹಲವರಿಗೆ ನೆನಪಿನ ಬರ.!


******************


12. ಸತ್ಯ.!


ಮೆದುಳಷ್ಟೇ ಇದ್ದವರು

ಮರೆತು ನಿರಾಳವಾಗುತ್ತಾರೆ

ಹೃದಯವೂ ಇದ್ದವರು

ಮರೆಯಲಾಗದೆ ನರಳುತ್ತಾರೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments