"ಇದು ಮುಗುಳುನಗೆಗಾಗಿ ಸಲ್ಲಿಸಿದ ನಿವೇದನೆಯ ಕವಿತೆ. ಮಂದಹಾಸದ ಲಾಸ್ಯ ಲಹರಿಯ ಅರಾಧನೆಯ ಭಾವಗೀತೆ. ಇಲ್ಲಿ ಅನುರಾಗದ ನಗುವಿನ ಅನಾವರಣವಿದೆ. ನಗುವಿನೊಳಗಣ ನಲಿವ ಝೇಂಕಾರದ ರಿಂಗಣಗಳಿವೆ. ಒಲವಿನ ನಗೆಯಲ್ಲಿ ಏನೆಲ್ಲ ಸೌಂದರ್ಯವಿದೆ.? ಎಷ್ಟೆಲ್ಲ ಮಾಧುರ್ಯವಿದೆ.? ಅದೆಂತಹ ಮಾಂತ್ರಿಕ ಆಂತರ್ಯವಿದೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ನಕ್ಕುಬಿಡು ಗೆಳತಿ..!
ಉರಿವ ಆ ಸೂರ್ಯನೂ
ತಣ್ಣಗಾದಾನು ತುಸುಕಾಲ!
ಬೀಸದೇ ನಿಂತಗಾಳಿಯೂ
ಸುಳಿದೀತು ಸ್ವಲ್ಪಸಮಯ!
ಹೆಪ್ಪುಗಟ್ಟಿದ ಹೊನಲೂ
ಹರಿದೀತು ಕೆಲಘಳಿಗೆ.!
ಕೊರಡಾದ ಗಿಡಮರವೂ
ಕೊನರೀತು ಕ್ಷಣಕಾಲ.!
ಮುದುಡಿದ ಕುಸುಮಗಳೂ
ಬಿರಿದಾವು ಕೊಂಚವೇಳೆ.!
ಬೇಸಿಗೆಯ ಬಿರುಬಿಸಿಲೂ
ತಿಂಗಳಾದೀತು ತುಸುಹೊತ್ತು.!
ಹಗಲೂ ಹುಣ್ಣಿಮೆಯಾಗಿ
ಬದಲಾದೀತು ಅರೆಘಳಿಗೆ!!
ಬೆಂದು ಬಿರಿದ ಭುವಿಯೂ
ತಂಪಾದೀತು ಕೆಲವೇಳೆ.!
ಗೂಡೊಳಗಿನ ಗುಬ್ಬಿಯೂ
ಗರಿಬಿಚ್ಚೀತು ಸ್ವಲ್ಪಹೊತ್ತು.!
ಸ್ವರಮರೆತ ಕೋಗಿಲೆಯೂ
ಉಲಿದೀತು ಕೊಂಚಸಮಯ.!
ಬರಡಾದ ಭಾವಗಳೆಲ್ಲವೂ
ಭೋರ್ಗರೆದೀತು ಅರೆಕ್ಷಣ.!
ಕಮರಿದ ಕವಿತೆಕಾವ್ಯಗಳೆಲ್ಲ
ಚಿಮ್ಮಿ ಹಸಿರಾದೀತು ಹೃನ್ಮನ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments