"ಇಲ್ಲಿವೆ ಬೆಳಕಿನ ಕಿರಣಗಳ ಚಿಮ್ಮಿಸುವ ಒಂಬತ್ತು ಅಕ್ಷರಪ್ರಣತೆಗಳು. ಬದುಕಿನ ತಾತ್ವಿಕ ಸತ್ವಗಳ, ಮಾರ್ಮಿಕ ಸತ್ಯಗಳ ಪ್ರತಿಫಲಿಸುವ ಭಾವಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಅರಿವಿನ ಸಾರವಿದೆ, ಬದುಕು-ಬೆಳಕಿನ ವಿಸ್ತಾರವಿದೆ. ಇದು ನಮ್ಮ ನಿಮ್ಮದೇ ಬಾಳಿನ ಅನುದಿನದ, ಅನುಕ್ಷಣದ ನಿತ್ಯ ಸತ್ಯಗಳೂ ಹೌದು. ಜಗದ ಯುಗ ಯುಗದ ಚಿರಂತನ ವಾಸ್ತವವೂ ಹೌದು. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
1. ಕಾರುಣ್ಯ.!
ಕೊಲ್ಲುವವರ ಕುರಿತೇಕೆ ಭಯ ಭೀತಿ
ಹಿರಿದಿದೆ ಕಾಯುವವನ ಪ್ರೀತಿ ನೀತಿ
ಕೇಡೆಣಿಸುವವನ ಮಾತ್ಸರ್ಯಕಿಂತಲು
ಕಾಪಾಡುವವನ ಔದಾರ್ಯಕ್ಕಿದೆ ಶಕ್ತಿ.!
**************************
2. ಮರುಳ.!
ಬರುವಾಗ ಒಂಟಿ, ಹೋಗುವಾಗ ಒಂಟಿ
ಮತ್ತೇಕೆ ಸುಖಾಸುಮ್ಮನೆ ನರಳುತ್ತೀಯೋ
ಕಟ್ಟಿಕೊಂಡು ನಂಟು-ಗಂಟುಗಳ ಘಂಟಿ.!
***********************
3. ಪ್ರಜ್ಞೆ.!
ಬೆಳಕಿನ ಸಾಕ್ಷೀಪ್ರಜ್ಞೆಗಿಂತಲೂ
ನಿತ್ಯ ಬದುಕಿನ ಪಾಪಪ್ರಜ್ಞೆಗಳೇ
ಹೆಚ್ಚಾದಾಗ.... ಹುಚ್ಚಾದಾಗ....
ಅಡಿಗಡಿಗೂ ದುಃಖ ನೋವು.!
ಅನುಕ್ಷಣವು ಸೋಲು ಸಾವು.!
********************
4. ಅರಿವು.!
ಅರಿವೆ ಇರದಿರೆ ಜನರೆದುರು ನೀ ಬೆತ್ತಲು
ಅರಿವು ಇರದಿರೆ ನಿನ್ನೊಳಗೆ ನೀನೆ ಬೆತ್ತಲು
ಒಳ ಹೊರಗೂ ನಿನಗೆ ನಿತ್ಯ ಬರೀ ಕತ್ತಲು
ಅಡಿಗಡಿಗು ಜಗದೆದುರು ನೀ ಬಟಾಬಯಲು.!
*********************
5. ಚೋದ್ಯ.!
ಗೆಳೆಯ ನೀನು ಅರಿವುದಿರಲಿ, ಅರ್ಥೈಸುವುದಿರಲಿ
ಕನಿಷ್ಟ ನೀ ಓದಲೂ ಆಗದು ನಿನ್ನದೇ ಹಣೆಬರಹ
ಮತ್ತೆ ಹೇಗೆ ಬರೆವೆಯೋ ಅನ್ಯರ ಬದುಕಿನ ಬರಹ.!
*********************
6. ಬದುಕು.!
ನಂಟಿರಬೇಕು ಅಂಟಿಕೊಳ್ಳದಂತೆ
ಗಂಟಿರಬೇಕು ಕಗ್ಗಂಟಾಗದಂತೆ
ಇರಬೇಕು ಇದ್ದೂ ಇರಲಾರದಂತೆ
ಅವ ಕರೆದಾಗೆದ್ದು ಹೋಗುವಂತೆ.!
********************
7.ಚಿರಸತ್ಯ.!
ಪಾಲಿನ ಪಂಚಾಮೃತ ಸ್ವೀಕರಣೆ ಬಾಳತತ್ವ
ಪ್ರತಿಕ್ಷಣ ಆಸ್ವಾಧನೆಯಲ್ಲಿಹುದು ನಿಜಸತ್ವ
ನಮ್ಮೆಲ್ಲ ನಗು ನಲಿವಿಗೆ ನಮ್ಮದೇ ನೇತೃತ್ವ
ನಮ್ಮ ಬದುಕಿಗೆ ನಮ್ಮದೇ ಉತ್ತರದಾಯಿತ್ವ.!
****************
8. ಪ್ರಾಪ್ತಿ.!
ದಕ್ಕಲು ಪ್ರತಿ ಅಣುರೇಣು ತೃಣ
ಜೀವಕ್ಕಿರಬೇಕು ಜನ್ಮಗಳ ಋಣ
ಸಿಕ್ಕಲು ಪ್ರತಿಭಾಗ್ಯದ ಕಣ ಕ್ಷಣ
ಬದುಕಿನಲಿ ಬರೆದಿರಬೇಕು ಕಾಣ.!
******************
9. ಜೀವನ.!
ತ್ಯಾಗ ಭೋಗಗಳ ನಡುವಿನ
ನಿತ್ಯ ಸಮತೋಲನವೇ ಜೀವನ
ಸೌಭಾಗ್ಯ ವೈರಾಗ್ಯ ನಡುವಿನ
ಆರೋಗ್ಯಕರ ಜೀವಯಾನ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments