ಕೃಷ್ಣಾರ್ಪಣ

 "ನನ್ನದೆಯಲಿ ಮೂಡಿದ ಈ ಕವಿತೆಯೂ ಅವನದೆ. ಇದರೊಳಗೆ ಪ್ರಜ್ವಲಿಸುವ ಭಾವಪ್ರಣತೆಯೂ ಅವನದೆ. ಈ ಕ್ಷಣ ನಮ್ಮ ನಡುವಿನ ಅಕ್ಷರಬಂಧದ ಕಾರುಣ್ಯವೂ ಅವನದೆ. ಅವನೇ ಬೆಸೆದ ತಂತು. ಅವನೇ ಮೀಟುವ ತಂತಿ. ನಮ್ಮದೇನಿದೆ..? ಬದುಕಿನ ಕ್ಷಣ ಕ್ಷಣವೂ ಅವನದೇ.. ಬೆಳಕಿನಾ ಕಣ ಕಣವೂ ಅವನದೇ.. ಸಕಲವೂ ಸಮಸ್ತವೂ ಸರ್ವವೂ ಅವನೇ ಕೃಷ್ಣಾ.. ಕೃಷ್ಣಾ.. ಕೃಷ್ಣ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಕೃಷ್ಣಾರ್ಪಣ


.!


ನೀನಿಟ್ಟ ಕಡಲು, ನೀಕೊಟ್ಟ ದೋಣಿ

ದಿಕ್ಕುಗಳು ನಿನದೆ, ದಿಕ್ಸೂಚಿಯು ನೀನೆ.

ಬರಿದೆ ಪಯಣಿಗನು ನಾ ವಾಸುದೇವ.!


ನೀನಿಟ್ಟ ಯಾನ, ನೀಕೊಟ್ಟ ಹುಟ್ಟು

ಅಲೆಗಳು ನಿನದೆ, ಆಸರೆಯು ನೀನೆ.

ನೆಪ ಮಾತ್ರ ನಾವಿಕನು ನಾ ಮಾಧವ.!


ನೀನಿಟ್ಟ ಆ ತೀರ. ನೀಕೊಟ್ಟ ಈ ತೆಪ್ಪ

ಗಮ್ಯವೂ ನಿನದೆ, ಗಾಳಿಯೂ ನೀನೆ.

ಯಕಃಶ್ಚಿತ್ ಯಾತ್ರಿಕನು ನಾ ಯಾದವ.!


ನೀನಿಟ್ಟ ಬದುಕು, ನೀಕೊಟ್ಟ ಬೆಳಕು

ದಾರಿಯೂ ನಿನದೆ, ದೀಪ್ತಿಯು ನೀನೆ

ನಡೆಸಿದಂತೆ ನಡೆವವನು ನಾ ಕೇಶವ.!


ನೀನಿಟ್ಟ ಕಾಯ, ನೀಕೊಟ್ಟ ಕಾಯಕ

ಕಾರುಣ್ಯವೂ ನಿನದೆ, ಚೈತನ್ಯವೂ ನೀನೆ

ಉಸಿರ ಹೆಸರಾಗಿಸಿ ಹರಸೆನ್ನ ಸಂಜೀವ.!


ನೀನೆಂದರಷ್ಟೆ ಇಲ್ಲಿ ಎಲ್ಲ ಭಕ್ತಿ-ಭುಕ್ತಿ

ನಿನ್ನಿಂದಲಷ್ಟೇ ಸಕಲ ಶಕ್ತಿ-ಮುಕ್ತಿ.

ನಾನೆಂದರೆ ಸಮಸ್ತವೂ ನಾಸ್ತಿ ರಾಜೀವ.!


ತೇಲಿಸಿಬಿಡು ಈ ಜೀವವ ರೋಧಿಸದಂತೆ

ನನ್ನಿಂದಾರನೂ ಲವಲೇಶವು ಬಾಧಿಸದಂತೆ

ನಗಿಸುತ ಮುಗಿಸೆನ್ನ ಬಾಳಸಂತೆಯ ದೇವ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments