*ಸಿರಿನಾಡು*

 *ಸಿರಿನಾಡು*



ಮಲೆನಾಡಿದು ಸುಂದರ ನೆಲೆಯಾಗಿದೆ

ಕಣ್ಮನ ಸೆಳೆಯುತ ಶೋಭಿಸಿದೆ|

ತಲೆದೂಗಿಸಿ ನೋಡುವ ಜಲಪಾತವು

ಮೈಮನ ಪುಳಕಿಸಿ ರಂಜಿಸಿದೆ||


ನಿತ್ಯಹರಿದ್ವರ್ಣದ ಕಾನನವದು

ನೋಡಲೆರಡು ಕಣ್ ಸಾಲದಿವೆ|

ನೃತ್ಯವ ಗೆಯ್ವ ಮಯೂರದ ತೆರದಲಿ

ಕಂಗಿನ ಮರಗಳು ತೂಗುತಿವೆ||


ಜೋಗದ ಪಾತವು ಕಣ್ಣಿಗೆ ಹಬ್ಬವು

ರೋಮಾಂಚನವನು ತರುತಿಹುದು|

ರಾಗವ ಪಾಡುವ ಕೋಗಿಲೆಯಿಂಚರ

ಮನಕಾನಂದವ ನೀಡುವುದು||


ನಾಡಿಗೆ ಕೀರ್ತಿಯ ತಂದಿಹ ಕವಿಗಳು

ಜನ್ಮಿಸಿ  ಪಾವನರಾಗಿಹರು|

ಮೋಡಿಯ ಮಾಡುತ ಪ್ರಕೃತಿಯು ಮೆರೆದಿದೆ

ನೋಡಲು ಜನತೆಯು ಬರುತಿಹರು||


ನಾರೀಕೇಳದ ಚೆಂದದ ಸಿರಿವನ

ಕಾಫಿಯ ಬೀಡಿದು ಮಲೆನಾಡು|

ಚಾರುಮನೋಹರ ದೃಶ್ಯದ ಸೊಬಗಿದೆ

ಮನವನು ತಣಿಸುವ ಸಿರಿನಾಡು||


*ಅಶ್ವತ್ಥನಾರಾಯಣ*

     *ಮೈಸೂರು*

Image Description

Post a Comment

0 Comments