*ಕವನ ಲಲಿತಲಯದಲ್ಲಿ ಚೌಪದಿ*
*ಕಮನೀಯ ನಂದೀಶ*
ಯೋಚಿಸುವ ಯಾತನೆಯ ನೀಡದಿರು ಪರಮೇಶ
ಯಾಚಿಸುವೆ ನೀಡು ಶಿವ ಮನಕೆ ಶಾಂತಿ|
ವಾಚಿಸುತ ಹರನಾಮ ತೋರುವೆನು ಭಕ್ತಿಯನು
ಯೋಚಿಸದೆ ಕಳೆ ನನ್ನ ಮನದ ಭೀತಿ||
ಹಿಮಗಿರಿಯ ಶಿಖರದಲಿ ನೆಲೆಸಿರುವ ಗಣಪಪಿತ
ನಮನವನು ಸಲ್ಲಿಸುವೆ ನಿನ್ನ ಪದಕೆ|
ಕಮನೀಯ ನಂದೀಶ ಬೇಡುವೆನು ಕೈವಲ್ಯ
ಭ್ರಮೆನೀಗಿ ಹರಸಯ್ಯ ನನ್ನ ಹಿತಕೆ||
ಚಂದಿರನ ಮುಡಿದವನೆ ನಾಗಾಭರಣ ಭರ್ಗ
ಇಂದೆನಗೆ ಕರುಣಿಸೈ ಸುಜ್ಞಾನವ|
ಬಂಧುಬಾಂಧವ ನೀನೆ ಗರಲಧರ ಶಂಕರನೆ
ಕುಂದನ್ನು ಲೆಕ್ಕಿಸದೆ ಸಲಹು ದೇವ||
ಕರುಣಸಾಗರ ನೀಲಕಂಠ ಹರ ಗೌರೀಶ
ಚರಣಕಮಲದಲೆರಗಿ ಶರಣಾಗುವೆ|
ತರಣಿಕಾಶನೆ ಭಕ್ತ ಜನಕಾಶ್ರಯನು ನೀನು
ವರವಿತ್ತು ಕಾಪಾಡು ನಾ ಬೇಡುವೆ||
ಬೂದಿಯನು ಬಳಿದವನೆ ಲಯಕರ್ತ ಶಿವಶಂಭು
ಹಾದಿಯನು ತೋರಿಸೈ ಕೈಲಾಸಕೆ|
ವೇದನೆಯ ಕಳೆಯುತ್ತ ಸುಜ್ಞಾನ ತುಂಬುತ್ತ
ಮೋದದಿಂ ಹಾರೈಸು ಕಲ್ಯಾಣಕೆ||
*ಅಶ್ವತ್ಥನಾರಾಯಣ*
*ಮೈಸೂರು*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments