"ಇದು ಮಾತು ಮತ್ತು ಮುತ್ತಿನ ಸೌಂದರ್ಯದ ಅನಾವರಣದ ಕವಿತೆ. ಸವಿನುಡಿ ಹಾಗೂ ಸಿಹಿಚುಂಬನಗಳ ಮಾಧುರ್ಯದ ರಿಂಗಣಗಳ ಭಾವಗೀತೆ. ಇಲ್ಲಿ ನೀವು ಆಳಕ್ಕಿಳಿದು ಅರ್ಥೈಸಿದಷ್ಟೂ ಅನುಭೂತಿಯ ವಿಸ್ತಾರವಿದೆ. ಆಸ್ವಾಧಿಸಿದಷ್ಟೂ ಆನಂದದ ಸಾರವಿದೆ. ಏನಂತೀರಾ..? " - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಮಾತು ಮತ್ತು ಮುತ್ತು.!
ನುಡಿವ ಹೊತ್ತಿಗೆ
ನುಡಿದರಷ್ಟೇ..
ಮಾತಿನ ಕಿಮ್ಮತ್ತು.!
ಕೊಡುವ ಹೊತ್ತಿಗೆ
ಕೊಟ್ಟರಷ್ಟೇ..
ಮುತ್ತಿನ ಘಮ್ಮತ್ತು.!
ಆಡುವ ಹೊತ್ತಿಗೆ
ಆಡಿದರಷ್ಟೇ..
ಮಾತಿನ ತಾಕತ್ತು.!
ಸಿಗುವ ಹೊತ್ತಿಗೆ
ಪಡೆದರಷ್ಟೇ..
ಮುತ್ತಿನ ಕಿಸ್ಮತ್ತು.!
ಅಪ್ಪಿತಪ್ಪಿ ಜಾರಿದರೆ
ಒಡೆದೀತು..
ಮಾತು ಮುತ್ತು.!
ಸುಮ್ಮನೆ ಜಗ್ಗಾಡಿದರೆ
ಕಳೆದೀತು
ಮುತ್ತಿನ ಹೊತ್ತು.!
ಅರಿತವರಿಗಷ್ಟೇ ಗೊತ್ತು
ಮಾತು ಮುತ್ತುಗಳ
ನಿಜಸ್ವಾದ ಹಕೀಕತ್ತು.!
ಮಧುರ ಮಾತು
ಅಧರ ಮುತ್ತು
ಮೌಲ್ಯಾತೀತ ಸಂಪತ್ತು.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments