"ಹುಷಾರು.. ಈ ಕವಿತೆ ನಿಮಗೆ ತುಂಬಾ ಇಷ್ಟ ಆಗುತ್ತೆ.. ಏಕೆಂದರೆ ಇದರಲ್ಲಿ ಹಾಸ್ಯ ಇದೆ, ಮಾರ್ಮಿಕ ಲಾಸ್ಯ ಇದೆ. ತಾತ್ವಿಕ ರಹಸ್ಯ ಇದೆ. ಜೋಕೆ.. ಈ ಕವಿತೆನ ಪೂರ್ತಿ ಎದೆಗೆ ಹಾಕ್ಕೊಬೇಡಿ.. ಜೀವ ಝಲ್ ಅಂತದೆ, ಹೃದಯ ಕಲ್ಲಾಗ್ತದೆ, ಮನಸು ಡಲ್ಲಾಗ್ತದೆ. ಹಾಗಂತ ಓದದೆನೂ ಇರಬೇಡಿ... ಭಾವ ರೋಸ್ಟಾಗ್ತದೆ, ಭಾಷ್ಯ ವೇಸ್ಟಾಗ್ತದೆ. ಓದಿದ ಮೇಲೆ ಕಾಮೆಂಟು, ಲೈಕು ಮಾಡದೆ ಇರಬೇಡಿ.. ಬರೆದ ಈ ಬಡಪಾಯಿ ಕವಿ ಕಾಯ್ತಿರ್ತದೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಹುಷಾರು ಅರ್ಥಾತ್ ಜೋಕೆ.!
ಈ ಲೋಕದಲ್ಲಿ ತುಂಬಾ
ತುಂಬಾ ಒಳ್ಳೆಯವರಾಗಬೇಡಿ.!
ಮಂದಿ ನಿಮಗೆ ಮಂದಿರಕಟ್ಟಿ
ದೇವರಾಗಿಸಿಬಿಡುತ್ತಾರೆ.!
ಏನನ್ನೂ ಹೇಳದೆ ಕೇಳದೆ
ಎಲ್ಲಕೂ ತಲೆಯಾಡಿಸಬೇಡಿ.!
ಜನ ನಿಮ್ಮನು ಪ್ರತಿಮೆಯಾಗಿಸಿ
ಪೂಜೆಗೇ ಇಟ್ಟುಬಿಡುತ್ತಾರೆ.!
ದೇವರಾದರೆ ಬಹಳ ಕಷ್ಟ.!
ನಿಮ್ಮ ಜೀವನ ಭಕ್ತರಿಷ್ಟ.!
ನಿಮಗಿಲ್ಲ ನಿಮ್ಮದೇ ಸ್ವಾಧೀನ..
ನೀವು ನಿತ್ಯವೂ ಭಕ್ತರಾಧೀನ.!
ದಿನಾ ನಿಮ್ಮೆದುರು ನೈವೇದ್ಯ
ಎಲ್ಲ ಅವರಿಷ್ಟದ ಭಕ್ಷ್ಯಭೋಜ್ಯ.!
ಆರತಿಯ ಹೊಗೆಯಷ್ಟೆ ನಿಮಗೆ
ತೀರ್ಥ ಪ್ರಸಾದಗಳೆಲ್ಲ ಅವರಿಗೆ.!
ಕಣ್ಣೆದುರ ಹುಂಡಿಯಷ್ಟೆ ನಿಮದು
ಒಳಗಿನ ಹಣವೆಲ್ಲ ಅವರದು.!
ನೀವು ಕೇವಲ ಉತ್ಸವಮೂರ್ತಿ.!
ಅವರದೇ ಸಕಲ ವಹಿವಾಟು ಕೀರ್ತಿ.!
ಅಪ್ಪಿತಪ್ಪಿಯೂ ದೇವರಾಗಬೇಡಿ
ಕಪಿಮುಷ್ಠಿಯಲಿ ಸಿಲುಕಬೇಡಿ.!
ಉಸಿರಿಗೂ ಕಡೆಗೆ ತ್ರಾಸಾದೀತು.!
ಬದುಕು ಬಂಗಾರ ಪಂಜರವಾದೀತು.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments