"ಇದು ಚಿತ್ರಕ್ಕಾಗಿ ಬರೆದ ಕವಿತೆಯಲ್ಲ. ಚಿತ್ರವೇ ಚಿತ್ತಭಿತ್ತಿಯಲಿ ಕುಳಿತು ಹಾಡಿ ಮೂಡಿಸಿದ ಭಾವಗೀತೆ. ಅಂತರ್ಜಾಲದಿ ಕಂಡ ಈ ಚಿತ್ರ ಅದೆಷ್ಟು ಕಥೆ ಹೇಳುತ್ತಿದೆ ನೋಡಿ.. ಆ ಕನ್ನಡಿ ಅದೆಷ್ಟು ಬದುಕುಗಳ ಯಶೋಗಾತೆಗೆ ಮುನ್ನುಡಿಯಾಗಬಲ್ಲದು. ಚಿತ್ರವನ್ನು ಕಂದಕೂಡಲೇ ಎದೆಯಲಿ ಬೋರ್ಗರೆದ ಭಾವ-ಭಾಷ್ಯಗಳೇ ಈ ಕವಿತೆ. ಅಂತರ್ಜಾಲದ ಆ ಅನಾಮಿಕ ಕಲಾವಿದನ ಅಭಿನಂದಿಸುತ್ತಾ, ನಿತ್ಯದಂತೆ ನನ್ನನ್ನು ಹಾರೈಸುತ್ತಾ ನನ್ನಿ ಆಂತರ್ಯದ ಭಾವಪ್ರಣತೆಯನ್ನು ಒಪ್ಪಿಸಿಕೊಳ್ಳಿ.. " - ಪ್ರೀತಿಯಿಂದ ಎ.ಎನ್.ರಮೆಶ್.ಗುಬ್ಬಿ.
ಕನ್ನಡಿಯ ಮುನ್ನುಡಿ.!
ನಮ್ಮ ನಾಳಿನ ಕನಸುಗಳು
ಎದುರಿನ ಸೃಷ್ಟಿಯಲಿಲ್ಲ..
ಕಣ್ಣೊಳಗಿನ ದೃಷ್ಟಿಯಲ್ಲಿದೆ.!
ನಮ್ಮೊಳಗೆ ತುಂಬಿಕೊಂಡ
ಎದೆಯ ಬಿಂಬದಂತೆಯೇ
ಎದುರ ಕನ್ನಡಿಯ ಪ್ರತಿಬಿಂಬ.!
ಚಿತ್ತದಿ ದಿಟ್ಟವಾಗಿದ್ದಷ್ಟೂ
ಸಂಕಲ್ಪದ ದಟ್ಟಝರಿ
ಸ್ಪಷ್ಟವದು ಕಣ್ಣೆದುರಿಗೆ ಗುರಿ.!
ಕಂಗಳಲಿ ಕನಸುಗಳ ಹೂಡಿ
ನೋಡುತ್ತಾ ದೃಢದಿ ಕನ್ನಡಿ
ಬರೆಯಬೇಕು ಬಾಳ ಮುನ್ನುಡಿ.!
ಹೃದಯದ ಕನಸಿನ ಬತ್ತಿಗೆ
ನಿತ್ಯ ಪರಿಶ್ರಮದ ತೈಲವೆರೆದು
ಸಾಕಾರವಾಗಿಸಬೇಕು ಬೆಳಕಜ್ಯೋತಿ.!
ಅನುಕ್ಷಣವು ನಮ್ಮ ಬದುಕಿಗೆ
ಇಲ್ಲಿ ನಾವೇ ನಿತ್ಯ ಸತ್ಯ ಸ್ಫೂರ್ತಿ.!
ಅಡಿಗಡಿಗೂ ನಮ್ಮ ಕನಸೇ ದೀಪ್ತಿ.!
ಬಾಳಿನ ಸ್ವಪ್ನನೌಕೆಯ ಯಾನ
ದಡ ಮುಟ್ಟಿ ಝೇಂಕರಿಸಿದಾಗಲೇ
ಬದುಕು ಅಮರ ಮಧುರ ಗಾನ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments