ಬೆತ್ತಲಾಗದ ಕತ್ತಲಿನ ಸತ್ಯಗಳು.!

 "ಇದು ನಮ್ಮ ನಿಮ್ಮದೇ ಬದುಕಿನ ಕಠೋರ ಸತ್ಯಗಳ ಚಿತ್ರಣದ ಕಟು ವಾಸ್ತವದ ಕವಿತೆ. ಭ್ರಮೆ-ಭ್ರಾಂತು, ಮಿಥ್ಯೆ-ಮಾಯೆಗಳ ಮುಖವಾಡಗೊಳಗಿನ ನಿಜ ಮೊಗದ ವಿಕಾರಗಳ ಅನಾವರಣದ ಕಹಿ ಭಾವಗೀತೆ. ಪ್ರತಿ ಜೀವ-ಜೀವನವೂ ಅವಡುಗಚ್ಚಿ ನುಂಗುವ ತಲ್ಲಣಗಳ ಕಥೆ-ವ್ಯಥೆ. ಇದು ಅಕ್ಷರಶಃ ನಮ್ಮ-ನಿಮ್ಮೆಲ್ಲರ ನಿತ್ಯದ ಸ್ವಾನುಭವವೂ ಹೌದು. ಸುತ್ತ-ಮುತ್ತಲ ಜಗದ ಸತ್ಯ ಲೋಕಾನುಭವವೂ ಹೌದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಬೆತ್ತಲಾಗದ ಕತ್ತಲಿನ ಸತ್ಯಗಳು.!



ನಮ್ಮ ತಲೆಯ ಮೇಲಿದ್ದವರು

ತುಳಿದದ್ದಷ್ಟೇ ತಿಳಿಯುತ್ತದೆ..

ಕೆಳಗೆ ಕಾಲ ಬಳಿಯಿದ್ದವರು

ಕಾಲೆಳೆದದ್ದು ಕಾಣುವುದಿಲ್ಲ.!


ತುಳಿದವರ ದೂರಿ ಹಳಿಯುವಾಗ

ನಮ್ಮ ಜೊತೆಗೆ ’ಜೈ’ ಎನ್ನುವ

ಕೈಗಳೇ ಕಾಲೆಳೆದ್ದಿದ್ದೆಂದು ನಮಗೆ

ಕಡೆಗೂ ತಿಳಿಯುವುದೇ ಇಲ್ಲ.!


ಮೇಲಿನವ ಕಡೆಗಣಿಸುತಿಹನೆಂದು

ಕೆಳಗಿನವನೊಂದಿಗೆ ಬೈದುಕೊಳ್ಳುವ

ನಮಗೆ ಕೆಳಗಿನವನೆ ಮೇಲಿನವನ

ಕಿವಿಯೂದಿದ್ದು ಅರಿವಾಗುವುದೆ ಇಲ್ಲ.! 


ವೃಥಾ ಕಿತ್ತಾಡಿಕೊಂಡು ಮೇಲಿನವಗೆ

ದೂರು ಕೊಡಲು ಹೋಗುವ ನಮಗೆ

ಮೇಲಿನವನೇ ನಿತ್ಯ ನಮ್ಮ ನಡುವೆ

ಬೆಂಕಿ ಹಾಕುತ್ತಿರುವುದು ತಿಳಿವುದೇ ಇಲ್ಲ.!


ಪರಸ್ಪರ ಕೊಳ್ಳಿ ಹಿಡಿದು ಬಡಿದಾಡಿ

ಬೆಂಕಿಹಚ್ಚಿಕೊಂಡು ಹಾಳಾಗುವ ನಮಗೆ

ಕರಗಳಿಗೆ ಕೊಳ್ಳಿಕೊಟ್ಟು ತೆರೆಮರೆಯಲಿ

ನಿಂತ ಊಸರವಳ್ಳಿ ಕಾಣುವುದೇ ಇಲ್ಲ.!


ತುಳಿವವರ ಕಾಲೆಳೆವವರ ಕಾಟದಲ್ಲಿ

ಬೆಂಕಿಹಾಕಿ ಬೆಚ್ಚಗಾಗುವರ ಆಟದಲ್ಲಿ

ನಮ್ಮ ಕಣ್ಣೀರೊರೆಸಲು ಬಂದ ಕರಗಳು

ಒಳೊಳಗೆ ನಗುತ್ತಿರುವುದೂ ತಿಳಿವುದಿಲ್ಲ.!


ಬಟ್ಟೆಯುಡಿಸುವ ನೆಪದಲ್ಲಿ ಬೆತ್ತಲಾಗಿಸುವ

ಬೆಳಕಿಡುವ ಭ್ರಮೆ ನೀಡಿ ಕತ್ತಲಾಗಿಸುವ

ಗೋಸುಂಬೆ ಮುಖವಾಡಗಳ ಒಡಲಾಳದ

ಕಾರ್ಗತ್ತಲ ಕ್ರೌರ್ಯ ಬಯಲಾಗುವುದೆ ಇಲ್ಲ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments