“ ಪ್ರೇಮದ ಸಪ್ತಸ್ವರಗಳ ರಿಂಗಣಗಳ ಹೃದ್ಯಕವಿತೆ. ಪ್ರೇಮದ ಭಾವ ಸಂವೇದನೆಗಳ ಅನಾವರಣಗೊಳಿಸುತ ಅನುರಾಗ ಕಿರಣಗಳ ಸ್ಫುರಿಸುವ ಕಾವ್ಯಪ್ರಣತೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಪ್ರೇಮವೂ ಒಂದುದಿನದ ಆಚಾರ. ಪ್ರತಿಫಲಾಪೇಕ್ಷೆಯ ಜಗದೆದುರಿನ ವ್ಯವಹಾರ. ಫಲಾಫಲಗಳ ವಿನಿಮಯ, ಪ್ರತೀಕ್ಷೆಗಳ ಲೆಕ್ಕಾಚಾರ. ಆದರೆ ನಮ್ಮದು ಅರ್ಪಣೆ ಆರಾಧನೆಗಳ ಸಂಸ್ಕಾರ. ಡಾಂಭಿಕತೆಯಿಲ್ಲದ ಹೃದ್ಯಭಾವ ಅನುಭಾವಗಳ ದಿವ್ಯ ಸಾಗರ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಆರಾಧನೆ.!
ಪ್ರೇಮವೆಂದರೆ..
ಎಣಿಕೆಮಾಡಿ ಕೊಡುವ
ಅಳೆದು ತೂಗಿ ಪಡೆವ
ಲಾಭನಷ್ಟ ಲೆಕ್ಕಾಚಾರಗಳ
ವ್ಯವಹಾರವಲ್ಲ.!
ಪ್ರೇಮವೆಂದರೆ
ಸುಂಕವಿಲ್ಲದೆ ಕೊಡುವ
ಬಿಂಕವಿಲ್ಲದೆ ಪಡೆವ
ಅಗಣಿತ ಸಂಸ್ಕಾರಗಳ
ಅಕ್ಕರೆ ಮಮಕಾರ.!
ಪ್ರೇಮವೆಂದರೆ..
ಸಂಕಲನ ವ್ಯವಕಲನಗಳ
ಗುಣಾಕಾರ ಭಾಗಾಕಾರಗಳ
ಅಕ್ಷರಶಃ ಗಣಿತಶಾಸ್ತ್ರದ
ಸಮೀಕರಣವಲ್ಲ.!
ಪ್ರೇಮವೆಂದರೆ
ಕೊಟ್ಟಿದುದನು ನೆನಪಿಡದೆ
ಪಡೆದುದನು ಪಕ್ಕಕ್ಕಿಡದೆ
ಆರಾಧಿಸುವ ಅಭಿವ್ಯಕ್ತಿಸುವ
ಒಲವಿನಂತಃಕರಣ.!
ಪ್ರೇಮವೆಂದರೆ
ದಿನವೊಂದರ ಆಚರಣೆಯಲ್ಲ
ಕೆಲದಿನಗಳ ಆಕರ್ಷಣೆಯಲ್ಲ
ಜೀವಮಾನದ ಅನುಸರಣೆ
ಉಸಿರುಸಿರಿನ ಅನುಕರಣೆ.!
ಪ್ರೇಮವೆಂದರೆ
ಬರಿಯ ಭಾವ ನಿವೇದನೆಯಲ್ಲ
ಕ್ಷಣದ ಜೀವ ಸಂವೇದನೆಯಲ್ಲ
ಜೀವದ ಚಿರಚಿರಂತನ ಆರಾಧನೆ.!
ಅನುರಾಗಸ್ವರಗಳ ನಿತ್ಯ ಸತ್ಯಾಲಾಪನೆ.!
ಎ.ಎನ್.ರಮೇಶ್.ಗುಬ್ಬಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments