ಗೋವ ತೀರ್ಥಯಾತ್ರೆಯ ಹನಿಗಳು..

 "ನಾನಿರುವ ಜಾಗದಿಂದ ಎಡವಿ ಬಿದ್ದರೆ ಗೋವ. ಕಳೆದೆರಡು ದಶಕಗಳಿಂದ ಕಾಣುತ್ತಿರುವ ಗೋವಾ ತೀರ್ಥಕ್ಷೇತ್ರದ ಒಂಬತ್ತು ಹನಿಗಳು. ತೀರ್ಥಪ್ರಿಯರ ಇಷ್ಟ ನಿಷ್ಟ ಸಕತ್ತು ದನಿಗಳು. ಇಲ್ಲಿನ ಕಡಲು, ಬೀಚು, ನೋಟ, ಮಾಟ, ಮೋದ, ಉನ್ಮಾದ ಪ್ರವಾಸಪ್ರಿಯರಿಗೆ ಅಚ್ಚುಮೆಚ್ಚು. ಯುವಕರಿಗಂತು ಬಲು ಹುಚ್ಚು. ’ನಾಳೆ ಗೋವಾಗೆ ಹೋಗುವಾ’ ಎಂದು ಗೆಳೆಯರು ಕರೆದಾಗ ಮೂಡಿದ ಹನಿಗವಿತೆಗಳಿವು. ಹಾಸ್ಯ-ಲಾಸ್ಯಗಳ ಮನ ಮುದಗೊಳಿಸುವ ಭಾವಪ್ರಣತೆಗಳು.. ಒಪ್ಪಿಸಿಕೊಳ್ಳಿ.." - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

(ಕಡೆಯಲ್ಲಿ ವಿಶೇಷ ಸೂಚನೆ ಇದೆ.. ತಪ್ಪದೆ ಓದಿ..) 



ಗೋವ ತೀರ್ಥಯಾತ್ರೆಯ ಹನಿಗಳು..



1. ಗೋವಾ.!


ಪಡ್ಡೆಗಳ ಪಾಲಿನ

ಪರಮ ಪವಿತ್ರ

ತೀರ್ಥ(?) ಯಾತ್ರ.!


*******************


2. ನೀರಸ.!


ಕಡಲ ಖಾದ್ಯ ಅಭ್ಯಾಸವಿಲ್ಲದವರಿಗೆ

ಗೋವಾ ಯಾತ್ರೆ ಸಪ್ಪೆ.!

ತೀರ್ಥ ಸೇವನೆ ಹವ್ಯಾಸವಿಲ್ಲದವರಿಗೆ

ಸಪ್ಪೆಯೋ ಸಪ್ಪೆ ಸಪ್ಪೆ.!


********************


3. ತೀರ್ಥದ ಯಾತ್ರೆ.!


ಅದೇಕೋ ಯಾರೊಬ್ಬರೂ ಮಾಡುವುದಿಲ್ಲ

ಗೋವಾಗೆ ಮಾತ್ರವೆ ಪಾದಯಾತ್ರೆ.!

ಗಾಡಿಯಲ್ಲೆ ಮಾಡುವರು ಗೋವಾಕ್ಷೇತ್ರಕ್ಕೆ

ತೀರ್ಥದೊಂದಿಗೆ ತೀರ್ಥ ಯಾತ್ರೆ.!


******************


4. ಗೋವೆಯ ರಂಗು.!


ಕಡಲಲ್ಲಿ ಭೋರ್ಗರೆವ ಬೆರಗು

ದಡದಲ್ಲಿ ಬೆಡಗಿಯರ ಸೊಬಗು

ಕಂಗಳಲ್ಲಿ ಮದಿರೆಯ ಮಿನುಗು.!

ವಿವಿಧ ನಶೆಯ ಗುನುಗು ರಂಗು.!


********************


5. ಇಂಧನ ಎಣ್ಣೆ.!


ಕಾರವಾರಕ್ಕಿಂತ ಗೋವಾದಲ್ಲಿ

ಎಣ್ಣೆ ಇಂಧನ ಬಲು ಅಗ್ಗ

ಮಂದಿಗೆ ವಾರಾಂತ್ಯದಿ ಗಾಡಿಗು

ಬಾಡಿಗು ಎಣ್ಣೆ ತುಂಬಿಸುವ ಸಗ್ಗ.!


**************************


6. ತೀರ್ಥ(?) ಕ್ಷೇತ್ರ.!


ಕಾಶಿ ರಾಮೇಶ್ವರ ಕ್ಷೇತ್ರಗಳಿಂದ

ಪ್ರಸಾದ ತರುವ ಸಂಪ್ರತಿ

ಗೋವಾ ಯಾತ್ರೆಯಿಂದ ಮಾತ್ರ

ತೀರ್ಥ ತರುವ ಪದ್ಧತಿ.!


********************


7. ತೀರ್ಥದ ಕ್ಷೇತ್ರ.!


ಕಿನಾರೆದರ್ಶನ ಮಾಡಿ ವಾಸ್ತವ್ಯ ಹೂಡಿ

ತೀರ್ಥಕ್ಕಾಗಿ ತೀರ್ಥಯಾತ್ರೆಗೆ ಹೋಗುವ

ಏಕೈಕ ತೀರ್ಥ-ಕ್ಷೇತ್ರವೇ ಗೋವಾ.!


ಎ.ಎನ್.ರಮೇಶ್.ಗುಬ್ಬಿ.



8. ಕ್ಷೇತ್ರ ಮಹಿಮೆ.!


ಬಂಧುಗಳೊಂದಿಗೆ ಪಿಂಡ ಪ್ರದಾನ

ಮಾಡಲು ಹೋಗುವ ಕ್ಷೇತ್ರ ಗಯಾ.!

ಗೆಳೆಯರೊಂದಿಗೆ ತೀರ್ಥ ಸೇವನೆ

ಮಾಡಲು ಹೋಗುವ ಕ್ಷೇತ್ರ ಗೋವ.!


*******************


9. ಗೋವಾ ಯಾತ್ರೆ.!


ಮುದವಿಡುವ ಬೀಚು ಸ್ನಾನ

ಮತ್ತೇರಿಸುವ ಬೀರು ಪಾನ

ಕಣ್ಕುಕ್ಕುವ ವಿದೇಶಿ ದರ್ಶನ

ಪುಳಕಿಸುವ ಕಡಲ ಯಾನ

ಕಿಕ್ಕೇರಿಸುವ ಪಾಶ್ಚಾತ್ಯ ಗಾನ

ಮೋಜು ಮಸ್ತಿಯ ರಸತಾನ.!


ಎ.ಎನ್.ರಮೇಶ್.ಗುಬ್ಬಿ.


(ವಿಶೇಷ ಸೂಚನೆ :- ತೀರ್ಥಾಭ್ಯಾಸವಿಲ್ಲದ, ಅಪ್ಪಟ ತಿಳಿಸಾರು ಅನ್ನದ ನನ್ನಂತಹ ಸಸ್ಯಾಹಾರಿಗಳಿಗೆ ಗೋವಾಯಾತ್ರೆ ನಿಜಕ್ಕೂ ನೀರಸ. ಅಕ್ಷರಶ: ವೇಸ್ಟು. ನಮ್ಮಂತಹ ವೇಸ್ಟುಬಾಡಿಗಳನ್ನು ಗೋವ ಒಪ್ಪುವುದು ಇಲ್ಲ, ಅಪ್ಪುವುದು ಇಲ್ಲ)

Image Description

Post a Comment

0 Comments