"ಹೀಗೊಂದು ಪ್ರೇಮದ ಅನಾವರಣದ ಕವಿತೆ. ಅನುಬಂಧವಾಗದ ಒಲವಿನ ನಿಶ್ಶಬ್ದ ರಿಂಗಣಗಳ ಭಾವಗೀತೆ. ಇದು ನಿಮ್ಮ ಸ್ವಾನುಭವವೂ ಆಗಿರಬಹುದು, ಲೋಕಾನುಭವವೂ ಆಗಿರಬಹುದು. ಕಂಡಿದ್ದು, ಕೇಳಿದ್ದು, ಕಲ್ಪಿಸಿದ್ದು, ಕನಲಿಸಿದ್ದು, ಅನುಭಾವಿಸಿದ್ದೂ ಆಗಿರಬಹುದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಹೀಗೊಂದು ಪ್ರೇಮ.!
ಮಾತು ಮನಸು ಆಸೆ
ಅಭಿರುಚಿ ಇಷ್ಟವಾಗಿ
ಆಸಕ್ತಿ ಆಕರ್ಷಣೆಯಾಗಿ
ಬಾಂಧವ್ಯದ ಬೆಸುಗೆ
ಬೆಸೆಯಿತು ಜೀವಗಳ..!
ಅವನು ಬಾಂಧವ್ಯದ
ಕಡಲ ಆಳಕ್ಕಿಳಿದು
ಅಮೂಲ್ಯ ಅಪೂರ್ವ
ಪ್ರೇಮ ಪ್ರೀತಿಯ ಮುತ್ತು
ರತ್ನಗಳ ಹೆಕ್ಕೋಣವೆಂದ!
ಅವಳು ನಿರ್ಮೋಹಿಯಾಗಿ
ಅನುರಾಗ ಅತೀತಳಾಗಿ
ಸ್ನೇಹದ ದೋಣಿಯಲಿ
ಬಾಂಧವ್ಯದ ತೆರೆಮೇಲೆ
ನಿರತ ಸಾಗೋಣವೆಂದಳು!
ಅವಳು ನಿರ್ಲಿಪ್ತ ನಿನಾದ!
ಇವನು ಅನುರಕ್ತ ವಿಷಾದ!
ಒಲವ ಭಾವ ಅರಳಲಿಲ್ಲ
ಕಡೆಗು ಪ್ರೀತಿ ಬೆಳೆಯಲಿಲ್ಲ
ಕೊನೆಗು ಸ್ನೇಹ ಉಳಿಯಲಿಲ್ಲ!
ಎರಡು ಹೃದಯಗಳ ನಡುವೆ
ಬಾಂಧವ್ಯ ಶರಧಿ ಉಳಿದಿದೆ
ಈಗ ಜಡವಾಗಿ ನಿಶ್ಚಲವಾಗಿ!
ನೆನಪಿನಲೆಗಳ ಬಡಿತ ನಿತ್ಯ
ಎದೆತೀರಗಳಲಿ ನಿರಂತರವಾಗಿ!
ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments