ಪ್ರಸಕ್ತ ವರ್ತಮಾನದ ಹೊಸ ವೈರಸ್ಸಿನ ಕುರಿತಾದ ಸಪ್ತ ಹನಿಗವಿತೆಗಳು.

 "ಇಲ್ಲಿವೆ ಪ್ರಸಕ್ತ ವರ್ತಮಾನದ ಹೊಸ ವೈರಸ್ಸಿನ ಕುರಿತಾದ ಸಪ್ತ ಹನಿಗವಿತೆಗಳು.


ಪ್ರಸ್ತುತ ವೈರಸ್ಸಿನ ಬಗೆಗಿನ ವಿವಿಧ ಭಾವಸಂವೇದನೆಗಳ ಆಪ್ತ ಅಕ್ಷರಪ್ರಣತೆಗಳು. ಇಲ್ಲಿ ಪ್ರಸ್ತುತ ವಿದ್ಯಮಾನಗಳ ಅನಾವರಣವಿದೆ. ಈ ಹಿಂದೆ ವೈರಸ್ಸಿನ ವಿಷ ವರ್ತುಲದ ಕರಾಳ ನೆನಪಿನ ರಿಂಗಣವಿದೆ. ಜಗದೊಳಿತ ಬಯಸುವ ಅಂತಃಕರಣದ ಅನುರಣನವಿದೆ. ಲೋಕ ಮತ್ತೊಮ್ಮೆ ನರಕವಾಗದಿರಲಿ ಎಂಬುದೇ ನಮ್ಮ ನಿಮ್ಮೆಲ್ಲರ ಪ್ರಾರ್ಥನೆ, ಆರ್ದ್ರ ನಿವೇದನೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

 


1. ಪ್ರಾರ್ಥನೆ.!


ಅವತರಿಸಿಹ ಓ ಹೊಸವೈರಸ್ಸು ಎಚ್ಚೆಂಪಿವಿ

ನಿನ್ನಿಂದಾಗದಿರಲಿ ನಮ್ಮ ಜೀವಗಳು ಸೋವಿ

ಕಾಡದೆ ಕೂಡಲೇ ನಶಿಸಿಬಿಡು ಮಾಯಾವಿ.!


******************


2. ಸುಗ್ಗಿ.!


ಅಗೋ ಬಂದಿದೆಯಂತೆ ಈಗ

ಮತ್ತೊಂದು ಹೊಸ ವೈರಸ್ಸು

ಖಾಸಗಿ ಆಸ್ಪತ್ರೆಯವರಿಗೀಗ

ಮತ್ತೊಂದೆರಡು ಮಾಳಿಗೆಗಳ

ಕಟ್ಟುವ ವರ್ಣಮಯ ಕನಸು.!


*********************


3. ಫಲಿತಾಂಶ.!


ಬಂದು ಹೋದಂತೆಲ್ಲ

ಹೊಸ ವೈರಸ್ಸು ಜಾಲ

ಚುಕ್ತವಾಗುತಿದೆ ಆಸ್ಪತ್ರೆಗಳ

ಹಳೇ ಬ್ಯಾಂಕು ಸಾಲ.!


*****************


4. ಶೋಚನೀಯ.!


ಅಪ್ಪಳಿಸಿದಂತೆಲ್ಲ ಹೊಸದು 

ಹೊಸ ವೈರಸ್ಸುಗಳ ಶೃಂಖಲೆ

ರೂಪಾಂತರಿಗಳ ಸರಣಿ ಅಲೆ

ಅಭದ್ರವಾಗುತಿದೆ ಬಾಳನೆಲೆ.!


*****************


5. ನಿಗೂಢ.!


ಅದ್ಯಾವ್ಯಾವ ಪಾಪಾತ್ಮರ ತಪ್ಪಸ್ಸೋ?

ವರ್ಷಕ್ಕೊಂದು ಹೊಸ ಹೊಸ ವೈರಸ್ಸು

ಬದುಕುಳಿಯಲು ನಮ್ಮದು ನಾನಾ ಸರ್ಕಸ್ಸು.!


***********************


6. ಗಂಡಾಂತರ.!


ಮಾಸ್ಕು, ಸಾಮಾಜಿಕ ಅಂತರ

ಎಲ್ಲವು ವೈರಸ್ಸಿನಿಂದಾದ ವಿಕಾರ

ಬದಲಾದ ನಮ್ಮ ಆಚಾರ ವಿಚಾರ

ಒಡ್ಡುತಿದೆ ನೂರಾರು ಗಂಡಾಂತರ.!


*******************


7. ಈ ಚಳಿಗಾಲ.!


ಈ ಭಯಂಕರ ಚಳಿಗಾಲ

ವೈರಸ್ಸುಗಳಿಗೆ ಸುಗ್ಗಿಕಾಲ

ಆಸ್ಪತ್ರೆಯವರಿಗೆ ಮಗ್ಗಿಗಾಲ

ಮಾಧ್ಯಮಗಳಿಗೆ ವಾಡಿಕೆಕಾಲ

ರಾಜಕಾರಣಕೆ ಹೂಡಿಕೆಕಾಲ

ಕಡುಬಡವರಿಗೆ ಭೀಕರಕಾಲ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments