ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಬದುಕಿನೊಳಗಿನ ಬೆಳಕಾದ ಅಚ್ಯುತನ ನಿತ್ಯ ಸತ್ಯ ಭಾವಗೀತೆ.

 "ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಬದುಕಿನೊಳಗಿನ ಬೆಳಕಾದ ಅಚ್ಯುತನ ನಿತ್ಯ ಸತ್ಯ ಭಾವಗೀತೆ.


ನಮ್ಮ ಬಾಳಿಗೆ ದಕ್ಕಿದ, ದಕ್ಕುವ ಹನಿ ನೀರು, ಒಂದಗುಳು, ಹಿಡಿಪ್ರೀತಿ ಎಲ್ಲವೂ ಅದೃಶ್ಯನ ದಯೆ. ಜೀವ-ಜೀವನದ ಒಲವು, ನಲಿವು, ಗೆಲುವು, ಹರಿವು, ಹರವು ಎಲ್ಲವೂ ಅವನ ಮಾಯೆ. ಅಗೋಚರನಾದರೂ ಅನುಭಾವಕೆ ಗೋಚರನಾಗುವ, ಅವ್ಯಕ್ತನಾದರೂ ಅರಿವು, ಅಂತಃಕರಣಕೆ ಅಭಿವ್ಯಕ್ತನಾಗುವ ಅವನದೇ ಅನಂತಾನಂತ ಛಾಯೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಕೃಷ್ಣಾ.. ಕೃಷ್ಣಾ.. ಕೃಷ್ಣಾ.!


ಇದ್ದರಷ್ಟೇ ನಿನ್ನಯ ಪ್ರೀತಿ ಕಾರುಣ್ಯ,

ನನ್ನಯ ಒಡಲೊಳಗೆ ನಿತ್ಯ ಚೈತನ್ಯ. 

ಭೋರ್ಗರೆದೀತು ಎದೆಯ ಕಡಲು.!

ನಿನ್ನುಸಿರು ಸೋಕಿದರಷ್ಟೇ ಅಚಿಂತ್ಯ,

ನುಡಿದೀತು ಭಾವಭಾಷ್ಯದ ಕೊಳಲು.!


ನನ್ನಯ ಪಾಲಿನ ಅಣುರೇಣು ತೃಣ,

ಭುವಿ ಬಾನ ಸಕಲ ಕಣಗಳ ಋಣ,

ಸಿಕ್ಕಲು ದಕ್ಕಲು ನೀನಲ್ಲವೇ ಕಾರಣ

ಬಾಳಿನೆಲ್ಲ ಮಧುರಾತಿ ಮಧುರ ಕ್ಷಣ

ನಿನ್ನೊಲುಮೆ ಅನುಗ್ರಹಗಳ ಸ್ಫುರಣ.!


ದಾಹ, ಹಸಿವು ಬಯಕೆಗಳನುಭಾವ

ಎಲ್ಲದಕು ನೀನೇ ಪ್ರೇರಣ ಮಾಧವ

ಬಂಧಾನುಬಂಧಗಳ ಅವಿನಾಭಾವ

ಬೆಸುಗೆ, ಒಸಗೆಗಳೆಲ್ಲವು ನಿನ್ನಿಂದಲೇ

ಅಡಿಗಡಿಗು, ಅನುಕ್ಷಣಕು ಸಂಭವ.!


ಸಂಕಲನ ವ್ಯವಕಲನ ಎಲ್ಲವು ನಿನದೆ

ಅಗಣಿತನು ಅನೂಹ್ಯನು ನೀನೆ ತಂದೆ

ನೀನಿಟ್ಟ ಚಿತ್ತಭಿತ್ತಿ, ನೀ ಕೊಟ್ಟ ಬುತ್ತಿ

ನನದು ಬಯಲ ಬೈರಾಗಿಯ ಪಯಣ

ಗುರಿ, ಗಮ್ಯಗಳ ನೀನಷ್ಟೆ ಬಲ್ಲೆ ಕೃಷ್ಣ.! 


ಹೊರಗಣ ದಾರಿತೋರುವ ಸತ್ಯಜ್ಯೋತಿ

ಒಳಗಣ ಆತ್ಮಶಕ್ತಿ ಬೆಳಗುವ ನಿತ್ಯದೀಪ್ತಿ

ನೀನಾಗಿರುವಾಗ ನನಗೆಲ್ಲಿಹುದು ಭೀತಿ?

ಮಾರ್ದನಿಸಿದೆ ಎಲ್ಲೆಡೆ ಮುರಳಿ ನಾದ

ಅದೃಶ್ಯದಲ್ಲು ಸಾದೃಶ ನೀ ಮುಕುಂದ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments