ಬೆಳದಿಂಗಳ ಬಾಲೆ.!

 "ಇದು ನನ್ನ-ನಿಮ್ಮದೇ ಕಲ್ಪನೆಯ ಬೆಳದಿಂಗಳ ಬಾಲೆಯ ಚಿತ್ರಣದ ಸುಂದರ ಕವಿತೆ. ಅಪೂರ್ವ ಚೆಲುವಿನ ಕಾವ್ಯಕನ್ನಿಕೆಯ ಬಣ್ಣನೆಯ ಮಧು ಮಧುರ ಭಾವಗೀತೆ. ನಿಮ್ಮ ಕನಸಿನ ಅನುಪಮ ಚೆಲುವೆಯನ್ನೊಮ್ಮೆ ಕಣ್ಮುಚ್ಚಿ ಧ್ಯಾನಿಸಿ, ಧೇನಿಸಿ ನೋಡಿ. ನಂತರ ಕವಿತೆಯ ಸಾಲುಗಳನೊಮ್ಮೆ ತಾಳೆ ಮಾಡಿ. ಭಾವ ಬೆಳದಿಂಗಳ ಮುಗಿಲಾದೀತು. ಜೀವ ನರ್ತಿಸುವ ನವಿಲಾದೀತು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.



ಬೆಳದಿಂಗಳ ಬಾಲೆ.!



ಮುಗಿಲಿನಾ ಕೋಟಿ ಚುಕ್ಕಿ ಚಂದಿರ

ನಿನ್ನಯಾ ಕಂಗಳಂಚಲ್ಲೇ ಸಾದರ

ಸಪ್ತವರ್ಣದ ಇಂದ್ರಚಾಪ ಸಾವಿರ 

ಹೊಳೆವ ಆ ಕದಪುಗಳಲ್ಲೇ ಸಾಕಾರ.!


ಮುಂಜಾನಿನ ಮನೋಹರ ಭಾಸ್ಕರ

ಮಿನುಗಿಹನು ಆಗಿ ನಿನ್ನ ಸಿಂಧೂರ

ಮುಸ್ಸಂಜೆ ರಂಗು ರಂಗಿನಾ ಅಂಬರ

ಲಜ್ಜೆಯ ಆ ಮೊಗದಲ್ಲೆ ಸಾಕ್ಷಾತ್ಕಾರ.!


ನಿನ್ನಯ ಮೃದುಲ ನಗೆಯ ಇಂಚರ

ಮಾರ್ದನಿಸುತಿದೆ ಮುರಳಿ ಝೇಂಕಾರ

ಮಧು ಮಧುರ ನುಡಿಗಳಾ ಠೇಂಕಾರ

ಮೂಡಿಸಿದೆ ಅನಂತ ಪ್ರೀತಿಯ ಆದರ.!


ಎಲ್ಲೆಡೆ ನಿನ್ನ ಚೆಲುವ ಛಾಯೆ ಮೋಡಿ

ಪಸರಿಸಿದೆ ನಿನ್ನೊಲವ ಮಾಯಗಾರುಡಿ

ನಿನ್ನ ಸೊಬಗ ಹಾಡಿ ಹಾರಿದೆ ಬಾನಾಡಿ

ಎಲ್ಲೆಲ್ಲು ನಿನ್ನ ಸ್ಮರಣೆ ಭಾವದಾಂಗುಡಿ.!


ಹೊನಲಲೂ ನಿನ್ನದೇ ಗುಣಗಾನ ನೀರೆ

ಕಡಲ ಮೊರೆತದಲು ನಿನ್ನ ನೆನಪಧಾರೆ

ಚರಾಚರ ಸೋತಿವೆ ನಿನ್ನಂದಕೆ ಚದುರೆ

ಬೆರಗಿನಲಿ ಅಚಲವಾಗಿಹಳು ವಸುಂಧರೆ.!


ಸೌಂದರ್ಯಕೆ ಸೌಂದರ್ಯ ಸ್ಪರ್ಶದಂತೆ

ಮಾಧುರ್ಯಕು ಮಧುರ ಉತ್ಕರ್ಷದಂತೆ

ಚೆಲುವಿಗೆ ಚೆಲುವೆ ಹೊಸಭಾಷ್ಯವಾದಂತೆ

ಸೊಬಗಿಗೇ ಸಮ್ಮೋಹನದ ವರ್ಷವಾದಂತೆ.! 


ಶರಣಾಗಿವೆ ನಿನ್ನೆದುರು ಶಬ್ಧ ಪದಮಾಲೆ

ಸಾಲುಗಳೆ ಸಾಲಾಗಿ ಹುಡುಕಿವೆ ನವಶಾಲೆ

ಕಾವ್ಯವೇ ನಿಬ್ಬೆರಗಾಗಿದೆ ಬೆಳದಿಂಗಳ ಬಾಲೆ

ಹೃದ್ಯವನೇ ಪದ್ಯವಾಗಿಸಿದೆ ನಿನ್ನಯ ಲೀಲೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments