"ಇಲ್ಲಿವೆ ಸಾಕ್ಷಾತ್ಕಾರದ ಅರಿವಿನ ಅನಾವರಣದ ಸಪ್ತ ಹನಿಗಳು. ಬದುಕಿನ ಬೆಳಕಿನ ಝೇಂಕಾರದ ಸುಪ್ತ ದನಿಗಳು. ಇಲ್ಲಿ ಆಳಕ್ಕಿಳಿದಷ್ಟೂ ಆಧ್ಯಾತ್ಮದ ಅರಿವಿನ ವಿಸ್ತಾರವಿದೆ. ಅರ್ಥೈಸಿದಷ್ಟೂ ಬೆಳಕಿನ ಸಾಕಾರದ ಅನುಭಾವದ ಸಾರವಿದೆ. ಅವನು ಆಕಾರನೂ ಹೌದು, ನಿರಾಕಾರನೂ ಹೌದು. ಅವನು ವ್ಯಕ್ತನೂ ಹೌದು, ಅವ್ಯಕ್ತನೂ ಹೌದು. ಅವನೆಂದರೆ ಅದೃಶ್ಯ, ಅನಂತ, ಅಚ್ಯುತ, ಅಗೋಚರ, ಆನುಭಾವ. ಅವನೆಂದರೆ ಅವರವರ ಭಾವಕ್ಕೆ, ಅವರವರ ಭಕುತಿಗೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಸಾಕ್ಷಾತ್ಕಾರದ ಹನಿಗಳು..
1. ವ್ಯರ್ಥ.!
ಎದೆಯ ಬಾಗಿಲು ತೆರೆಯದೆ ಕರೆಯದೆ
ಗುಡಿಯ ಘಂಟೆಯನೆಷ್ಟು ಬಡಿದರೇನು.?
ಬಂದಾನೇನು? ನಿಂದಾನೇನು ಅವನು.?
*******************
2. ಆರಾಧನೆ.!
ಕಲ್ಲಲ್ಲಿ ಅವನ ಪೂಜೆಗೈದವರ
ಎದೆಯೂ ಕಲ್ಲಾದದ್ದು ವಿಪರ್ಯಾಸ.!
ಜೀವಗಳಲ್ಲಿ ಅವನ ಸೇವೆಗೈದವರ
ಬದುಕೇ ನೆಲ್ಲಾದದ್ದು ಇತಿಹಾಸ.!
*********************
3. ಅವನು.!
ಒಳಗೆ ಆರಾಧಿಸುವವರಿಗೆ
ಅವನು ಆಲಯ ಅನುರಾಗಿ
ಹೊರಗೆ ಅನ್ವೇಷಿಸುವವರಿಗೆ
ಅವನು ಬಯಲ ಭೈರಾಗಿ
ತಮ್ಮೊಳಗೆ ಅನುಭಾವಿಸುವವರಿಗೆ
ಅವನು ಒಡಲ ಒಳಭಾಗಿ.!
*******************
4. ಸಾಕ್ಷಾತ್ಕಾರ.!
ಗುಡಿ ಘಂಟಾನಾದದೊಂದಿಗೆ
ಹೃದಯದ ನಾದ-ನಿನಾದ
ಸಮೀಕರಣಗೊಂಡರಷ್ಟೇ
ಅವನ ಸತ್ಯ ಸಾಕ್ಷಾತ್ಕಾರ.!
*************************
5. ಅಚ್ಚುಮೆಚ್ಚು.!
ಆಲಯಕ್ಕಂಟಿಕೊಂಡವರಿಗಿಂತ
ಬಯಲ ನಂಟಿಟ್ಟುಕೊಂಡವರಿಗೇ
ಆ ಭಗವಂತ ಒಲಿದಿದ್ದು ಹೆಚ್ಚು.!
ಸ್ಥಾವರಕಿಂತ ಜಂಗಮರೇ ಅವನಿಗೆ
ಅಂದು ಇಂದು ಎಂದು ಅಚ್ಚುಮೆಚ್ಚು.!
**********************
6. ಬೆಳಕು.!
ಕಣ್ಣಿಗೆ ಪಟ್ಟಿಕಟ್ಟಿಕೊಂಡು ದೀಪವಾರಿಸಿ
ಕತ್ತಲಲಿ ತಡಕಾಡಿದರೆ ಬೆಳಕು ಕಂಡೀತೆ?
ಜೀವ ಕೊರಡಾಗಿಸಿಕೊಂಡು ಭಾವ ಬರಡಾಗಿಸಿ
ಕಲ್ಲಿನಲಿ ಹುಡುಕಿದರೆ ಬದುಕು ಬೆಳಗೀತೆ.?
*************************
7. ಸಾಕಾರ.!
ಸಾಮಾನ್ಯರಿಗೆ ಕಲ್ಲು ಲೋಹಗಳ
ಮೂರ್ತಿಯಲಿ ದೈವದ ಸಾಕಾರ
ಸಾಧಕರಿಗೆ ದೀಪ್ತಿ ವ್ಯಾಪ್ತಿಯಲಿ
ಜ್ಯೋತಿಯಾಗಿ ದೈವತ್ವ ಝೇಂಕಾರ.!
ಅನುಭಾವಿಗಳಿಗೆ ಅಂತರಂಗದರಿವಲಿ
ನಿರಾಕಾರನಾಗಿ ಆತ್ಮ ಸಾಕ್ಷಾತ್ಕಾರ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments