ಕವಿತೆಯಲ್ಲ ಪ್ರಣತೆ.!

 "ಇದು ಕವಿತೆಯೆನ್ನುವ ಅಕ್ಷರ ಪ್ರಣತೆಯ ಭಾವಗೀತೆಯಿದು. ಕವಿಯೊಡಲ ಕಾವ್ಯದ ಜೀವ-ಭಾವ-ಭಾಷ್ಯಗಳ ನಿತ್ಯ ಸತ್ಯ ಕಥೆಯಿದು. ಇಲ್ಲಿ ಆಳಕ್ಕಿಳಿದಷ್ಟೂ ನಿಮ್ಮದೇ ಪದ್ಯಾಂಬುಧಿಯ ಮುತ್ತು ಸಿಕ್ಕೀತು. ಅರಿತಷ್ಟೂ, ಅರ್ಥಸಿದಷ್ಟೂ ಕವಿಯೆದೆಯ ಕಾವ್ಯಶರಧಿಯ ಭಾವದಲೆಗಳ ಭೋರ್ಗರೆತ ದಕ್ಕೀತು. ಕವಿಯೊಡಲಿಂದುದಿಸುವ ಪದ್ಯನದಿಗೆ, ಓದುಗರ ಹೃದ್ಯಕಡಲೇ ಅಂತಿಮ ಗಮ್ಯ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 



ಕವಿತೆಯಲ್ಲ ಪ್ರಣತೆ.!



ಎದೆ ಭಾವಬತ್ತಿಯ ಹೊಸೆದು

ಒಡಲ ಭಾಷ್ಯದ ತೈಲವೆರೆದು

ಲೇಖನಿಯ ಜ್ಯೋತಿ ಸೋಕಿಸಿ

ಹಚ್ಚುತ್ತೇನೆ ನಿತ್ಯ ಕಾವ್ಯದೀಪ.!


ಜಗದ ಅಂಗಳವ ಬೆಳಗಲಿಕ್ಕಲ್ಲ

ಮನಬಾನಂಗಳ ಬೆಳಕಾಗಿಸಲಿಕ್ಕೆ

ಒಳಗಣ ಕವಿದ ಕತ್ತಲೆ ಕಳೆದು

ವಿಕಾರದಂಧಕಾರ ತೊಳೆಯಲಿಕ್ಕೆ.!


ಪ್ರಜ್ವಲಿಸಿದಂತೆಲ್ಲ ಕಾವ್ಯಜ್ಯೋತಿ

ಕರಗಿ ಕವಿಯೆಂಬ ಭ್ರಮೆ-ಭ್ರಾಂತಿ

ಚಿಮ್ಮಿ ಅರಿವು ಅಂತಃಕರಣ ಪ್ರೀತಿ

ಪಸರಿಸಿದೆ ನನ್ನೊಳಗೆ ನಿಜಕಾಂತಿ.!


ತನುಮನದ ಕಣಕಣ ಬೆಳಕಾಗಿಸಿ

ಬೆಳದಿಂಗಳಾಗಿಸಿದೆ ಅಕ್ಷರ ಕಾರುಣ್ಯ

ನರನರ ಮೀಟಿ ಸ್ವರಸ್ವರದಿ ಧ್ವನಿಸಿ

ಉಸಿರಲನುರಣಿಸಿದೆ ಕಾವ್ಯಚೈತನ್ಯ.!


ಲೋಕೋಪದೇಶದ ಗುರಿ ಗುಂಗಿಲ್ಲ

ಒಣಸಂದೇಶಗಳ ಗೊಡವೆ ಹಂಗಿಲ್ಲ

ನನ್ನೊಳಗೆ ನಾನೆ ಬೆಳೆವ ಮಿನುಗು

ಪಸರಿಸಿದೆ ಹೃದ್ಯ ಪದ್ಯಗಳ ರಂಗು.!


ದಿನ ದಿನ ಹಚ್ಚುವಾ ಕಾವ್ಯಪ್ರಣತೆ

ಹರಡಿದೆ ಹರಿಸುತಿದೆ ಭಾವದೊರತೆ

ಬೆಸೆದು ಅಕ್ಷರಬಂಧುತ್ವದ ಜೀವಲತೆ

ಸಮೀಕರಿಸಿದೆ ಸಂವೇದನೆಗಳ ಜೊತೆ.!


ಪ್ರಣತೆಯಿಂದ ಪ್ರಣತೆಯ ಬೆಳಗುವ

ಅಕ್ಷರ ಜ್ಯೋತಿಯ ಬೆಳಕ ಗೀತೆಯಿದು

ಹೃದ್ಯ ಪದ್ಯ ನಿತ್ಯ ಸೇರಿ ಒಡಲಾಗುವ

ಕಾವ್ಯಕಡಲಾಗುವ ಯಶೋಗೀತೆಯಿದು.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments