"ಅಪ್ಪ-ಅಮ್ಮನ ಗುಡಿಯೆದುರು ಆತ್ಮನುಸಂಧಾನಕ್ಕೆ ಅಜೂರ ಗೌರವ ಸಮ್ಮಾನ" - ಧನ್ಯವಾಯ್ತು ನನ್ನೀ ಕಾವ್ಯಜೀವನ
ನಿನ್ನೆಯದಿನದ ಅವಿಸ್ಮರಣೀಯ ಕ್ಷಣಗಳಿವು. ನನ್ನೀ ಬರಹದ ಬದುಕನ್ನು ಧನ್ಯ-ಮಾನ್ಯವಾಗಿಸಿದ ಚಿರಸ್ಮಣೀಯ ಅಮೃತಘಳಿಗೆಗಳೀವು.
ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಹೆತ್ತವರನ್ನು ಹಾದಿಗೆ ತಳ್ಳುತ್ತಿರುವ, ಸ್ವಂತ ತಂದೆ-ತಾಯಿಗಳನ್ನು ತಬ್ಬಲಿಯಾಗಿಸಿ ವೃದ್ದಾಶ್ರಮಕ್ಕಟ್ಟುತ್ತಿರುವ ಇಂದಿನ ದಿನಮಾನದಲ್ಲಿ ಬದುಕುಗಳಿಗೇ ದಿಗ್ದರ್ಶನ, ಲೋಕಕ್ಕೇ ನಿದರ್ಶನ ಹಾರೋಗೇರಿಯ ಅಜೂರ ಮನೆತನ.
ಅಪ್ಪ-ಅಮ್ಮ ದೈವಾಧೀನರಾದ ನಂತರ, ಅವರಿಗೊಂದು ಗುಡಿ ಕಟ್ಟಿ, ದೇವತಾಮೂರ್ತಿಗಳಂತೆ ಅವರನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ, ಅನುದಿನವೂ ಅವರನ್ನು ಪೂಜಿಸುತ್ತ, ಅವರ ಆರಾಧನೆಯನ್ನು ’ಗಂಗರಾಮೋತ್ಸವ’ ವೆಂದು ಕಳೆದ 34 ವರ್ಷಗಳಿಂಅ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇಂದಿಗೂ 163 ಜೀವಗಳ ಕೂಡುಕುಟುಂಬ ಈ ಮನೆತನದ್ದು. ಕುಟುಂಬದ ಹಿರಿಯರಾದ ಅತ್ಯಂತ ಸಜ್ಜನ, ಮುತ್ಸದ್ದಿ, ಮೇರು ವ್ಯಕ್ತಿತ್ವದ 73 ವಯಸ್ಸಿನ ಕ್ರಿಯಾಶೀಲ, ಪುಟಿವ ಚೈತನ್ಯದ ಹೃದಯ ವೈಶಾಲ್ಯದ ಶ್ರೀ ಬಸವರಾಜ್ ಅಜೂರ್ ಅವರ ಸಾರಥ್ಯದ ಈ ’ಗಂಗರಾಮೋತ್ಸವ’ ಹಲವು ವೈಶಿಷ್ಟ್ಯಗಳ ಮಹಾ ಮಹೋತ್ಸವ.
ಬಸವರಾಜರು ’ಅಜೂರ ಪ್ರತಿಷ್ಠಾನವನ್ನು’ ಸ್ಥಾಪಿಸಿ, ಹಂದಿಗೊಂದದ ಶ್ರೀ ಶ್ರೀ ಶಿವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಾ, ಸಾವಿರಾರು ಸಾಹಿತಿಗಳಿಗೆ ಆಶ್ರಯವಾಗಿದ್ದಾರೆ. ಪ್ರತಿವರ್ಷವೂ ಗಂಗರಾಮೋತ್ಸವದಂದು, ಆಯ್ಕೆಯಾದ ಆ ವರ್ಷದ ಎಲ್ಲ ಪ್ರಕಾರದ ಸಾಹಿತ್ಯಿಕ ಕೃತಿಗಳಿಗೆ, ರಾಜ್ಯಮಟ್ಟದ ಹಾಗೂ ಬೆಳಗಾವಿ ಜಿಲ್ಲಾಮಟ್ಟದ ಪುಸ್ತಕ ಪ್ರಶಸ್ತಿ ನೀಡಿ, ಸಾಹಿತ್ಯಾರಾಧನೆಯನು ಮಾಡುತ್ತಿದ್ದಾರೆ.
ನಿನ್ನೆಯ 35 ನೇ ’ಗಂಗರಾಮೋತ್ಸವದಲ್ಲಿ’ ನನ್ನ ಆತ್ಮಾನುಸಂಧಾನ ಕವನ ಸಂಕಲನಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸುವಾಗ ಅದೆಂತಹ ದಿವ್ಯಾನುಭವ ನನಗೆ. ಹಚ್ಚ ಹಸುರಿನ ಹೊಲ-ಗದ್ಧೆಯ ನಡುವೆ ಅಪೂರ್ವ ವೇದಿಕೆ. ಮಹಾ ಸಂತ-ಶರಣರ ದಿವ್ಯ ಸಾನಿಧ್ಯ. ನಾಡಿನ ಮೂಲೆ-ಮೂಲೆಯಿಂದಾಗಮಿಸಿದ್ದ ಕವಿ-ಹೃದಯಗಳ ಸಮಾಗಮ, ಆಸನಗಳು ಭರ್ತಿಯಾಗಿ, ಕಿಕ್ಕಿರಿದು ನಿಂತು ಹಾರೈಸಿದ ಸಾವಿರಾರು ಸಾಹಿತ್ಯಿಕ ಮನಸುಗಳು. ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ನಾರಯಣ ಶರಣರು, ಶ್ರೀ ಶಶಿಕಾಂತ ಗುರೂಜಿ, ಶ್ರೀ ವಿಟ್ಠಲ ಶರಣರು, ಸಾಹಿತ್ಯ ದಿಗ್ಗಜ ಡಾ.ಅಶೋಕ ನರೋಜಿ ಹಾಗೂ ಇನ್ನಿತರ ಗಣ್ಯರ ಪಾಂಡಿತ್ಯಪೂರ್ಣ ಅರ್ಥಪೂರ್ಣ ನುಡಿಗಳು, ಘಂಟಿಯವರ ಲವಲವಿಕೆಯ ನಿರೂಪಣೆ, ನಿನ್ನೆಯ ಸಮಾರಂಭದ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾದವು.
ಪ್ರಶಸ್ತಿ ವಿಜೇತರಾದ ಶ್ರೀಮತಿ ಕೃಪ ದೇವರಾಜ್, ಶ್ರೀ ವಿಜಯ್ ಬಡಿಗೇರ್, ಶ್ರೀಮತಿ ಶೃತಿ ಮಹದೇವ್, ಶ್ರೀ ಸಂತೋಶ್ ಎಕ್ಕುಂಡಿ ಹಾಗೂ ಸಕಲ ವಿಜೇತರನ್ನು, ಶ್ರೀ ಶ್ರೀಕಾಂತ್, ಶ್ರೀ ಸಿದ್ದು ಹಾಲೂರ್ ಹಾಗೂ ಹಲವು ಅಕ್ಷರಬಂಧುಗಳೊಂದಿಗೆ ಮುಖಾಮುಖಿಯಾಗಿದ್ದು ಅತೀವ ಸಂತಸ ತಂದಿತು. ನನ್ನನ್ನು ಬೇಟಿ ಮಾಡಿ ಮಾತನಾಡಿಸಲೆಂದೇ ಬಂದ ಅಕ್ಷರಬಂದು, ಕುಡುಚಿ ಠಾಣೆಯ ಆರಕ್ಷಕ ಅಧಿಕಾರಿ ಎಸ್.ಬಿ.ನಾಯಕ್ ಅವರ ಆಗಮನ ಹೃನ್ಮನಗಳಲ್ಲಿ ಅನನ್ಯ ಸಂಚಲನ ತಂದಿತು. ನನ್ನೊಂದಿಗೆ ಇಡೀ ದಿನ ಜೊತೆಯಿದ್ದು 14 ಗಂಟೆಗಳ ಪ್ರಯಾಣವನ್ನು ಸುಂದರವಾಗಿಸಿದ ಜೀವದ ಗೆಳೆಯ, ಸಹೋದ್ಯೋಗಿ ಮಿತ್ರ ಶ್ರೀ ಮಿಲಿಂದ್ ಕಾಂಬ್ಳೆಗೆ ನಾನು ಚಿರ ಋಣಿ.
ಈ ಎಲ್ಲ ಅಕ್ಷರದ ಕಾರುಣ್ಯಕ್ಕೆ, ನಿತ್ಯ ಹಾರೈಸುವ ನೀವೇ ಪ್ರೇರಣ. ನಿಮ್ಮ ಅಕ್ಕರೆ-ಹಾರೈಕೆಗಳೇ ಕಾರಣ. ಹಾಗಾಗಿ ನಿನ್ನೆಯ ಸಮಾರಂಭದ ದೃಶ್ಯಗಳನ್ನು ನಿಮ್ಮ ಅಂಗೈಗಳಿಗೆ ಅರ್ಪಿಸುತ್ತಿದ್ದೇನೆ. ಒಪ್ಪಿಸಿಕೊಳ್ಳಿ." - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments