"ಹೊಸವರ್ಷಕ್ಕೊಂದು ಒಲವಿನ ಕವಿತೆ. ಎದೆಯ ಪುಳಕಿಸುವ ನಲಿವಿನ ಭಾವಗೀತೆ.
ಅನುರಾಗದ ಸ್ವರಗಳೆಂದರೆ ಹಾಗೆ.. ನರ ನರಗಳ ತಂತಿ ಮೀಟಿ, ಹೃದಯದಿ ನಿತ್ಯ ಅನುರಣಿಸುವ ರಿಂಗಣ. ಎದೆಯ ತಾಳಕ್ಕೆ ಪಲ್ಲವಿಯಾಗಿ ಮಾರ್ದನಿಸುವ ಭಾವಸ್ಫುರಣ. ನಮ್ಮೊಳಗಿನ ಒಲವ ಹರಿವಿಗೆ ಹರಿವಿಗೆ ರೂಪದರ್ಶಿಯೂ ನಾವೆ. ನಿತ್ಯ ಸತ್ಯದರ್ಶಿಯೂ ನಾವೆ. ಒಲವಿನ ಭಾವ-ಭಾಷ್ಯಗಳೇ ಹೀಗೆ. ಚಿರ ಚಿರಂತನ. ಸದಾ ನವನವೀನ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಒಲವು..!
ಎದೆಯ ತಂಬುರ ತಂತಿ ಮೀಟಿ
ಚಿತ್ತ ಭಿತ್ತಿಯ ಪರಿಧಿ ದಾಟಿ
ಜೀವ ಜೀವವ ಬೆಸೆದಿದೆ ಒಲವು
ಜಗವ ಬೆಳಗಿದೆ ಭಾವದ ಚೆಲುವು.!
ಸನಿಹವಿರಲಿ ದೂರವೆ ಇರಲಿ
ಒಲವಿಗೆಲ್ಲಿದೆ ಅಂತರ ಬಿಡುವು?
ರಾತ್ರಿಯಿರಲಿ ಹಗಲೇ ಇರಲಿ
ಒಲವಿಗೆಲ್ಲಿದೆ ಕಾಲದ ಗಡುವು?
ಜಾತಿಯಿರಲಿ ಧರ್ಮವೇ ಇರಲಿ
ಒಲವಿಗೆಲ್ಲಿದೆ ಭೇದದ ತಿಳಿವು?
ಭಾಷೆಯಿರಲಿ ಮರ್ಮವೇ ಇರಲಿ
ಒಲವಿಗೆಲ್ಲಿದೆ ಎಲ್ಲೆಯ ಸುಳಿವು?
ನೀತಿಯಿರಲಿ ನಿಯಮವೆ ಇರಲಿ
ಒಲವಿಗೆಲ್ಲಿದೆ ರೀತಿಯ ಅರಿವು?
ಭವನವಿರಲಿ ಬಯಲೇ ಇರಲಿ
ಒಲವಿಗೆಲ್ಲಿದೆ ಭೇದದ ಹರಿವು?
ಬೆಂಕಿಯಿರಲಿ ಗಾಳಿಯೆ ಇರಲಿ
ಒಲವಿಗೆಲ್ಲಿದೆ ಹೆದರಿಕೆ ಜ್ವರವು?
ಸುಖವೆಯಿರಲಿ ಸಂಕಟವಿರಲಿ
ಒಲವಿಗೆಲ್ಲಿದೆ ಪ್ರೇಮಿಯ ಮರೆವು?
ಸಂತೆಯಿರಲಿ ಏಕಾಂತವಿರಲಿ
ಒಲವಿಗೆಲ್ಲಿದೆ ಲೋಕದ ಪರಿವು?
ಕೆಲಸವಿರಲಿ ರಜೆಯೇ ಇರಲಿ
ಒಲವಿಗೆಲ್ಲಿದೆ ವಿರಾಮ ಬಿಡುವು?
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments