“ಜೀವ-ಜೀವನದ ಕಟುಸತ್ಯ ಸತ್ವಗಳ ಅನಾವರಣದ ಕವಿತೆಯಿದು
. ಬದುಕಿನ ಕಠೋರ ವಾಸ್ತವಗಳ ತತ್ವಗಳ ರಿಂಗಣಿಸುವ ಭಾವಗೀತೆಯಿದು. ಇಲ್ಲಿ ನಮ್ಮ-ನಿಮ್ಮದೇ ಅನುದಿನದ, ಅನುಕ್ಷಣದ ಅನುಭವಗಳ ಸಾರವಿದೆ. ಸ್ವಾನುಭವ, ಲೋಕಾನುಭವಗಳ ಭಾವಸಂವೇದನೆಗಳ ವಿಸ್ತಾರವಿದೆ. ಅರಿತಷ್ಟೂ ಅರ್ಥಗಳ ಆಗರವಿದೆ. ಅರ್ಥೈಸಿದಷ್ಟೂ ಅರಿವಿನಾ ಸಾಗರವಿದೆ. ಅದಕಾಗಿಯೇ ಕವಿತೆಗಳನ್ನು ಅಕ್ಷರಪ್ರಣತೆಗಳೆನ್ನುವುದು. ಅವುಗಳ ಬೆಳಕಿನಾ ಶಕ್ತಿಯೂ ದೊಡ್ಡದು. ಬೆಳಗುವ ವ್ಯಾಪ್ತಿಯೂ ದೊಡ್ಡದು. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಜಗದ ಜರೂರತ್ತಿದು ಬಾಸು.!
ಕರಗಿ ಮರುಗಿ ಉಪಕರಿಸಿ ಉಪಚರಿಸಿ
ಬೈಗುಳ ತಿನ್ನುತಲಿ ಕೊರಗುವುದಕಿಂತ..
ಕಾಠಿಣ್ಯದಿ ಸಹಕರಿಸದೆ ಬೈಗುಳ ಸಿಟ್ಟು
ಉಪೇಕ್ಷಿಸಿ ಆರಾಮಿರುವುದೇ ಲೇಸು.!
ಮನ್ನಿಸಿ, ಆದರಿಸಿ ಮಮಕಾರ ತೋರಿಸಿ
ಕನಿಕರಿಸಿ ಕೊಟ್ಟು ಕೀಳಾಗುವುದಕಿಂತ
ಕೇಳಿಸಿಕೊಳ್ಳದೆ, ಕಿವುಡಾಗಿ, ಕಡೆಗಣಿಸಿ
ಕೊಡದೆ ಕಡೆಯಾಗುವುದೆ ಸಲೀಸು.!
ಜನರ ಕಷ್ಟನಷ್ಟಗಳಿಗೆ ಅನುಕಂಪ ಸ್ಫುರಿಸಿ
ಸಹಕರಿಸಿ ಜೊತೆಯಾಗದಿದ್ದರೂ ತಪ್ಪಿಲ್ಲ
ಕುಹಕ ನಿಂದನೆಗಳ ಸುರಿಸದಿರೆ ಸಾಕು
ಧರಿಸಿ ಕೆಟ್ಟ ಕುತೂಹಲದ ಚಾಳೀಸು.!
ಧರೆಗೆ ದೊರೆಯಾಗಬೇಕೆಂದು ಬಯಸಿ
ಹನಿ ಧಾರೆಯಾಗದಿದ್ದರು ಪರವಾಗಿಲ್ಲ
ಹೊರೆಯಾಗದಿದ್ದರೆ, ಕೊರೆಯಾಗದಿದ್ದರೆ
ಬರೆಯಾಗದಿದ್ದರೆ ಸಾಕದುವೆ ಶಭಾಷು.!
ಊರಿಗೆ ಬೆಳಕಾಗುವೆನೆಂದು ಹಂಬಲಿಸಿ
ಕೊನೆಗೆ ಕನಿಷ್ಟಕಿರಣವಾಗದಿದ್ದರೂ ಚಿಂತಿಲ್ಲ
ಹುಚ್ಚಾಗಿ ಕಿಚ್ಚಾಗದಿದ್ದರೆ, ಕಾಳ್ಗಿಚ್ಚಾಗದಿದ್ದರೆ
ಬೆಂಕಿಯಾಗದಿದ್ದರೆ ನೀ ನಿಜಕ್ಕೂ ಭೇಷು.!
ಅರಿತುಕೋ ಜಗದ ಜರೂರತ್ತಿದು ಬಾಸು
ಕಳೆದುಕೊಳ್ಳದಿರೆಂದು ಮೈಮನದ ಹೋಶು
ಮರೆತರೆ ಮೆರೆದರೆ ಖಂಡಿತಾ ನೀ ನಪಾಸು
ವಾಸ್ತವಕೇಕೆ ಭ್ರಮೆ ಸುಳ್ಳುಗಳ ಮಾಲೀಷು?
ಇರದಿದ್ದರೆ ಸಾಕು ನಮ್ಮೆಲ್ಲರಲೂ ಎಂದು
ಅಧಿಕಪ್ರಸಂಗತನದಿ ಹದಗೆಡಿಸುವ ಜೋಶು.!
ಚತುರರಿಗಿಂತಲೂ ಸಮಚಿತ್ತದವರಿಗಾಗಿಂದು
ಸಮಾಜ ನಡೆಸುತಿದೆ ಎಡಬಿಡದೆ ತಲಾಷು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments