"ಇಲ್ಲಿವೆ ಶಿಳ್ಳೆ ಸೀಟಿಯ ಮೇಲಿನ ಎಂಟು ಹಾಸ್ಯದ ಹನಿಗಳು. ಶಿಳ್ಳೆ-ಸೀಟಿಯೊಳಗಿನ ಮರ್ಮ-ಕರ್ಮಗಳ ವಿಡಂಬಿಸುತ ಗಂಟಿಕ್ಕಿದ ಮೊಗದಿ ನಗೆಯುಕ್ಕಿಸುವ ದನಿಗಳು. ಇಲ್ಲಿ ಹಾಸ್ಯವಿದೆ, ಲಾಸ್ಯವಿದೆ, ವಿನೋದವಿದೆ. ವ್ಯಂಗ್ಯವಿದೆ, ವಿಡಂಬನೆಯಿದೆ, ಜೊತೆ ಜೊತೆಗೆ ಕಹಿ ಸತ್ಯ, ಕಟುವಾಸ್ತವಗಳೂ ಇದೆ. ಕಾಲೇಜು ದಿಗಳನ್ನು ನೆನಸಿಕೊಂಡು, ಮೆಲ್ಲಗೆ ಶಿಳ್ಳೆ ಹಾಕುತ್ತಾ ಓದಿಬಿಡಿ. ಮೆಲುನಗೆ ಉಕ್ಕೀತು.. ಹಾಸ್ಯದ ಸ್ವಾದ ದಕ್ಕೀತು.. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಶಿಳ್ಳೆದನಿಯ ಹನಿಗಳು..
1. ಹೆಣ್ಣು ಮತ್ತು ಸೀಟಿ.!
ಮದುವೆಗೆ ಮುನ್ನ ಸೀಟಿ ಹೊಡೆದು
ಕಾಡುವ ಹುಡುಗರ ಕಾಟ
ಮದುವೆ ನಂತರ ಸೀಟಿ ಹೊಡೆದು
ಕೂಗುವ ಕುಕ್ಕರಿನ ಆರ್ಭಟ.!
*********************
2. ಲವ್-ಚೀ(ಸೀ)ಟಿ
ಅವಳ ಸೀಟಿಯೇ ಅವನೊಲವಿಗೆ ಪ್ರೇರಕ
ಅದುವೇ ಅವರಿಬ್ಬರಾ ಮದುವೆಗು ಕಾರಕ
ಅವಳು ಆ ಬಸ್ಸಿನ ನಿರ್ವಾಹಕಿ, ಅವ ಚಾಲಕ.!
***********************
3. ಶಿಳ್ಳೆ-ಖ್ಯಾತ.!
ಶಿಳ್ಳೆಯ ಸದ್ದು ಕೇಳಿ ಅವನೆಡೆಗೆ
ನೋಡುವರು ಮಾರು ಹೋಗಿ.!
ಶಿಳ್ಳೆಕ್ಯಾತನಂತ ಮೂತಿ ಕಂಡು..
ಓಡುವರು ಮಾರು ದೂರ ಹೋಗಿ.!
**********************
4. ಜೋಕೆ.!
ಶಿಳ್ಳೆ ಸದ್ದಿಗೆ ದಿಕ್ತಪ್ಪಬಾರದು ಭಾಷಣ
ಸೀಟಿ ಹುಚ್ಚಿಗೆ ಮರೆತರೆ ಹತೋಟಿ
ಬಾಯ್ತಪ್ಪಿದ ಮಾತುಗಳೇ ಪಾಶಾಣ
ಗಳಿಸಿದ ಘನತೆ ವ್ಯಕ್ತಿತ್ವಗಳ ನಾಶನ.!
**************************
5. ವಿಧಿ.!
ಅವನು ಶಿಳ್ಳೆ ಹೊಡೆದದ್ದು ಅಕ್ಕನಿಗೆ..
ಅದು ತಾಕಿದ್ದು ತಡವಿದ್ದು ತಂಗಿಗೆ
ಕಡೆಗೆ ತಗಲಾಕ್ಕೊಂಡ ಅವಳೊಂದಿಗೆ
ಯಾವ ಹೂವು ಯಾರ ಮುಡಿಗೋ..!
***********************
6. ಎಚ್ಚರ..ಎಚ್ಚರ.!
ಶಿಳ್ಳೆ, ಸೀಟಿ ಹಾಕುವಾಗ ಬಲು ಎಚ್ಚರ
ಪುಲ್ಲಿಂಗ ಸ್ತ್ರೀಲಿಂಗ ತೃತೀಯ ಲಿಂಗಗಳ
ಉಡುಗೆ ತೊಡುಗೆಯಲಿಲ್ಲೀಗ ಅಂತರ..
ತಿಳಿಯದೇ ಮಾಡಿಕೊಳ್ಳದಿರಿ ಅವಾಂತರ
ಶಿಳ್ಳೆ ನಿಮಗೆ ಚಳ್ಳೆಯಾಗದಿರಲಿ ತರತರ.!
*************************
7. ಕಂಡಕ್ಟ್ರು..!
ಮನೆಯ ಹೊರಗೆ ಅವನ ಶಿಳ್ಳೆ ಸೀಟಿಗಿದೆ
ಇಡೀ ಬಸ್ಸನ್ನೇ ನಿಯಂತ್ರಿಸುವ ತಾಕತ್ತು..
ಮನೆಯೊಳಗೆ ಬಾಯಿ ಹೊಯ್ಕೊಂಡರೂ
ಹೆಂಡತಿ ಕೊಡುವುದಿಲ್ಲ ಚೂರು ಕಿಮ್ಮತ್ತು.!
***********************
8. ಕಟುಸತ್ಯ.!
ಸೀಟಿ ಶಿಳ್ಳೆ ಹಾಕುವುದು ಒಂದು ಕಲೆ
ಶಾಲೆ ಕಾಲೇಜುಗಳೆ ಇವುಗಳಿಗೆ ನೆಲೆ
ಹೆಂಗೆಳೆಯರೇ ಈ ಕಲೆಗೆ ನಿತ್ಯ ಸೆಲೆ
ಆದರೂ ಈ ಕಲಾನೈಪುಣ್ಯಕ್ಕಿಲ್ಲ ಬೆಲೆ.!
ಒಮ್ಮೊಮ್ಮೆ ಶಿಳ್ಳೆ ವ್ಯಕ್ತಿತ್ವಕ್ಕೆ ಕಪ್ಪುಕಲೆ.!
ಎ.ಎನ್.ರಮೇಶ್.ಗುಬ್ಬಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments