“ಅಕ್ಕರೆಯ ಅಕ್ಷರಬಂಧುಗಳಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಪಂಚಾಂಗದ ವರ್ಷಾಂತ್ಯದ ಈ ಸುಗ್ಗಿ ಹಬ್ಬ, ತಮಗೆ ಮತ್ತು ತಮ್ಮ ಕುಟುಂಬಕ್ಕೆ, ಸಕಲ ಹಿಗ್ಗುಗಳ ಕೊಡಲಿ. ಸಮಸ್ತ ಆಯುರಾರೋಗ್ಯ, ಐಶ್ವರ್ಯ, ಸುಖ, ಸಂಪದ, ಸಂತಸ, ಸಂತೃಪ್ತಿಗಳ ನೀಡಲಿ. ನಿಮ್ಮೆಲ್ಲ ಇಷ್ಟಾರ್ಥಗಳ ಕರುಣಿಸಿ, ಕನಸುಗಳ ಸಾಕಾರವಾಗಿಸಲಿ. ಎಳ್ಳುಬೆಲ್ಲ ಮೆಲ್ಲುತ್ತಾ, ಸುತ್ತೆಲ್ಲ ಸಂಭ್ರಮ ಚೆಲ್ಲುತ್ತಿರುವ ನಿಮಗಿದೋ ಕವನುದುಡುಗೊರೆ. ಒಪ್ಪಿಸಿಕೊಳ್ಳಿ..” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಸಂಕ್ರಮಣದನುರಣನ
.!
ದಿಕ್ಕು ಬದಲಿಸುತಿದೆ ಸೂರ್ಯನ ಬೆಳ್ಳಿರಥ
ಬದಲಾಗುತಿದೆ ಇಂದು ಹೊಂಬೆಳಕಿನ ಪಥ
ಕಳೆಯುತ್ತ ನಮ್ಮೆಲ್ಲರಾ ಬದುಕುಗಳ ಬಿಕ್ಕು
ತೋರಲಿ ಸಂಕ್ರಾಂತಿ ನಮಗೂ ನವದಿಕ್ಕು.!
ಅರಂಭವಿನ್ನು ಭಾಸ್ಕರನ ಹೊಸ ಅಧಿಪತ್ಯ
ನವ ತೇಜಸ್ಸಿನಿಂದ ಹೊಳೆಯುತಿಹ ಆದಿತ್ಯ
ನಿಸರ್ಗದ ತುಂಬೆಲ್ಲ ಸಂಕ್ರಮಣ ಸಂಚಲನ
ಸಕಲ ಚರಾಚರಗಳಲು ನವ ಸಂಕೀರ್ತನ.!
ಕವಿದ ಚಳಿ ತೊಳೆದು ವೃದ್ಧಿಸಲಿದೆ ಹಗಲು
ಮಿನುಗುತಿದೆ ಹೊಸಕಾಂತಿಯಿಂದ ಮುಗಿಲು
ಹಿಗ್ಗಿ ಹರಿವ ಹೊನಲು ಮೊರೆವ ಆ ಕಡಲು
ಸಾರುತಿದೆ ಮಕರ ಸಂಕ್ರಾಂತಿಯ ಘಮಲು.!
ಮನೆ್ಮನೆಯನು ತುಂಬಲಿ ಸುಗ್ಗಿಯ ಹಿಗ್ಗು
ಎಲ್ಲೆಡೆ ಮೂಡಲಿ ನವೋಲ್ಲಾಸ ಸೊಬಗು
ಎಲ್ಲರನು ಆವರಿಸಲಿ ನವೋತ್ಸಾಹ ಬೆರಗು
ಸಂಕ್ರಮಣ ಸ್ಫುರಿಸಲಿ ಭರವಸೆಯ ರಂಗು.!
ಮರೆಸುತ್ತ ಹಳೆಯ ಕಹಿ ನೆನಪುಗಳ ಕಾಟ
ಮುಗಿಲ ಚುಂಬಿಸಲಿ ಹೊಸಕನಸ ಗಾಳಿಪಟ
ಸ್ವರಸ್ವರದಿ ಮಾರ್ದನಿಸಲಿ ನವ ನವ್ಯಗಾನ
ಬದುಕ ಹಾದಿಯ ಬೆಳಗಲಿ ದಕ್ಷಿಣಾಯನ.!
ಬೆಲ್ಲದ ನಾವಿನ್ಯ ಕಳೆಯಲಿ ಕಷ್ಟಕಾರ್ಪಣ್ಯ
ಎಳ್ಳಿನಾ ಕಾರುಣ್ಯ ನೀಡಲಿ ಹೊಸಚೈತನ್ಯ
ಕಣಕಣದಿ ಅನುರಣಿಸಲಿ ನವ ಸೌಂದರ್ಯ
ಹೃನ್ಮನ ಪುಳಕಿಸಲಿ ಸಂಕ್ರಾಂತಿ ಮಾಧುರ್ಯ!
ಪ್ರತಿನಡೆ ನಡೆಯಲು ಹೊಳೆಯಲಿ ಒಳಿತು
ಪ್ರತಿನುಡಿ ನುಡಿಯಲು ಚಿಮ್ಮಲಿ ಒಳ್ಳೆಮಾತು
ಹರಡಲಿ ಸಂತಸ ಸಂಭ್ರಮಗಳ ಹೊಂಗಿರಣ
ಭಾವಬತ್ತಿ ಬೆಳಗಿ ಬೆಳಕಾಗಿಸಲಿ ಸಂಕ್ರಮಣ.!
ಅಕ್ಷರಬಂಧು ನಿನಗಿದೋ ಹೃದ್ಯ ಕಾವ್ಯನಮನ
ಮಕರಸಂಕ್ರಾಂತಿಗೆ ಸಂಪ್ರೀತಿಯ ಶುಭಕಾಮನ
ಚಿರಚಿರಂತನವಿರಲೀ ಭಾವ-ಭಾಷ್ಯದ ರಿಂಗಣ
ಈ ಬಂಧ ಬೆಸುಗೆಗಳ ಕಾಪಿಡಲಿ ಸಂಕ್ರಮಣ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments