ಅವರವರ ಭಾವ-ಭಕುತಿ.!

 "ಇದು ಭಕುತಿ-ಭಾವಗಳ ಅನಾವರಣದ ಕವಿತೆ. ರೀತಿ, ರಿವಾಜು, ವಾಡಿಕೆಗಳ ರಿಂಗಣಗಳ ಅಂತರಾಳದ ಭಾವಗೀತೆ. ನನ್ನ ನಂಬಿಕೆ, ಶ್ರದ್ಧೆ, ನಿವೇದನೆಗಳು ನನಗೆ ಬಿಟ್ಟಿದ್ದು. ನಿಮ್ಮ ಆಚರಣೆ, ಆರಾಧನೆ, ಸಂವೇದನೆಗಳು ನಿಮಗೆ ಬಿಟ್ಟಿದ್ದು. ನನ್ನ ಭಕ್ತಿ ನಿಮಗೆ ತೊಂದರೆ ಕೊಡದೆ, ನಿಮ್ಮ ಭಾವ ನನಗೆ ಉಪದ್ರವ ನೀಡದೆ, ಪರಸ್ಪರ ಪ್ರೀತಿ-ಆದರಗಳಿಂದ ಬದುಕುವುದೆ ಸಹಿಷ್ಣುತೆ. ಇದುವೆ ಅವರವರ ಬೆಳಕಿನ ಸಾಕಾರದ ಯಶೋಗಾತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 




ಅವರವರ ಭಾವ-ಭಕುತಿ.!



ಕೆಲವರಿಗೆ ಮೊರೆವ ಕಡಲೇ ದೈವ

ಹಲವರಿಗೆ ಹರಿವ ಹೊನಲೇ ದೈವ

ಕೆಲವರಿಗೆ ಸುಳಿವ ಗಾಳಿಯು ದೈವ

ಹಲವರಿಗೆ ಉರಿವ ರವಿಯೇ ದೈವ.!


ಕೆಲವರಿಗೆ ಮುಗಿಲ ಶಶಿಯೇ ದೈವ

ಹಲವರಿಗೆ ಭುವಿಯ ಕಲ್ಲಿನಲೆ ದೈವ

ಅವರಿಟ್ಟ ನಂಬಿಕೆ ಅವರವರ ಭಾವ

ಅವರ ವಾಡಿಕೆ ಅವರ ಅನುಭಾವ.!


ಅವರವರ ಭಕ್ತಿ ಅವರವರದೇ ತೃಪ್ತಿ

ಅವರವರ ಬಾಳವ್ಯಾಪ್ತಿ ಬೆಳಕ ದೀಪ್ತಿ

ಅವರವರ ವೈಶಿಷ್ಟ್ಯ ವಿಚಾರಗಳ ಪ್ರೀತಿ

ಅವರವರ ಆಚಾರ ಅನುಸರಣೆ ನೀತಿ.!


ಧ್ಯಾನವೋ? ಸ್ನಾನವೋ? ಪಾನವೋ?

ಜ್ಞಾನವೋ? ಮೌನವೋ? ಗಾನವೋ?

ಅವರವರ ಸಂಪ್ರದಾಯಗಳ ಸಂಪ್ರೀತಿ

ಅವರವರ ಅನೂಷ್ಠಾನ ಕ್ರಮಗಳ ರೀತಿ.!


ಅವರ ನಿವೇದನೆ ಅವರವರ ಆರಾಧನೆ 

ಅವರವರ ಭಕ್ತಿ ಭಾವಗಳ ಸಂವೇದನೆ

ತಪ್ಪು-ಒಪ್ಪು ವ್ಯಾಖ್ಯಾನಿಸಲು ನಾವ್ಯಾರು?

ಶ್ರದ್ದೆ ಸಂಸ್ಕಾರ ಪ್ರಶ್ನಿಸಲೆಲ್ಲಿದೆ ದರ್ಬಾರು?


ಇಳೆಯಲಿದೆ ಎಲ್ಲರಿಗು ಅಭಿವ್ಯಕ್ತಿ ಸ್ವಾತಂತ್ರ್ಯ

ಪರಸ್ಪರ ಗೌರವವೇ ಲೋಕದ ಔದಾರ್ಯ

ಅವರ ನಂಬಿಕೆ ಅವರ ಬಾಳ ಮಾಧುರ್ಯ

ಒಪ್ಪುವುದರಲ್ಲಿದೆ ಆಂತರ್ಯ ಸೌಂದರ್ಯ.!


ಯಾರೂ ಮೌಢ್ಯಗಳ ಪೋಷಿಸದಂತಿರಬೇಕು

ಯಾರಿಗೂ ಜಾಡ್ಯಗಳ ಅಂಟಿಸದಂತಿರಬೇಕು

ಯಾರನ್ಯಾರೂ ಎಂದು ಶೋಷಿಸದಿರೆ ಸಾಕು

ಅವರವರ ಶ್ರದ್ದೆ-ಧರ್ಮ ಅವರಲ್ಲಿದ್ದರೆ ಸಾಕು.!


ಅವರಿಗವರ ದೈವ ಧರ್ಮ ಕರ್ಮಗಳೆ ಸ್ವರ್ಗ

ಅವರವರ ಮುಕ್ತಿ ಶಕ್ತಿ ಮನಃಶಾಂತಿ ಮಾರ್ಗ

ಬಿಟ್ಟುಬಿಡಿ ಅವರವರ ಹಾಡು ಪಾಡು ಬದುಕು

ಅವರವರ ಶ್ರದ್ಧೆಯಲ್ಲಿದೆ ಅವರ ಬಾಳ ಬೆಳಕು.!

 

ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments