ಕಿಚ್ಚು-ಹುಚ್ಚುಗಳ ನಡುವೆ..

 "ಇದು ಬುವಿಯ ಬದುಕಿನ ಬಗೆ ಬಗೆ ತಲ್ಲಣಗಳ ಅನಾವರಣದ ಕವಿತೆ. ನಾವು-ನೀವೆಲ್ಲರೂ ಅನುಭವಿಸುವ ವಿಧ-ವಿಧ ವಿಕೃತಿಗಳ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನಗಳ ವಾಸ್ತವ ದರ್ಶನವಿದೆ. ಅರ್ಥೈಸಿದಷ್ಟೂ ನಮ್ಮ-ನಿಮ್ಮದೇ ಸ್ವಾನುಭವ, ಲೋಕಾನುಭವಗಳ ನಿಜ ನಿದರ್ಶನವಿದೆ. ಇದು ಕಲ್ಪನೆಯ ಕವಿತೆಯಲ್ಲ, ನಮ್ಮೆಲ್ಲರ ದೈನಂದಿನ ಸಂವೇದನೆಗಳ ನಿವೇದನೆ ಗೀತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಕಿಚ್ಚು-ಹುಚ್ಚುಗಳ ನಡುವೆ..



ಮೆಚ್ಚುವುದಕಿಂತಲೂ ವಿನಾಕಾರಣ

ನಿತ್ಯ ಚುಚ್ಚುವಾ ಹುಚ್ಚು ಹಲವರಿಗೆ

ಮೆಚ್ಚಿಮೆಚ್ಚಿಯೂ ಬೇಕು ಬೇಕೆಂದೇ

ವೃಥಾ ಚುಚ್ಚುವ ಹುಚ್ಚು ಕೆಲವರಿಗೆ.!


ಮೆಚ್ಚುಗೆಗಳನೆಲ್ಲವ ಮುಚ್ಚಿಕೊಂಡು

ಸುಮ್ಮನೆ ಚುಚ್ಚುವ ಕಿಚ್ಚು ಅನೇಕರಿಗೆ

ಚುಚ್ಚುವುದಕೆ ನಾಲಿಗೆ ಬಿಚ್ಚಿಕೊಂಡು

ಕಚ್ಚಾಡುವ ಹುಚ್ಚುಕಿಚ್ಚು ಅಧಿಕರಿಗೆ.!


ಮೆಚ್ಚುವ ಭಾವ ಭಾಷ್ಯವೇ ಇಲ್ಲದೆ

ಸದಾ ಚುಚ್ಚುವಾ ಕಿಚ್ಚು ಮತ್ತಷ್ಟರಿಗೆ

ಚುಚ್ಚುವುದನ್ನೆ ಹುಚ್ಚಾಗಿಸಿಕೊಂಡು

ಆರ್ಭಟಿಸುವ ರೊಚ್ಚು ಇನ್ನಷ್ಟರಿಗೆ.!


ಚುಚ್ಚು ಕಿಚ್ಚುಗಳನೆ ಮೈಗಚ್ಚಿಕೊಂಡು

ಕಾಳ್ಗಿಚ್ಚಾಗುವ ಹುಚ್ಚು ಮರುಳರಿಗೆ

ಚುಚ್ಚು ಕಿಚ್ಚು ಹುಚ್ಚು ರೊಚ್ಚುಗಳಿಗೆ

ಬೆಂಕಿ ಹಚ್ಚುವ ಹುಚ್ಚು ದುರುಳರಿಗೆ.!


ಕಿಚ್ಚು ಕಾಳ್ಗಿಚ್ಚುಗಳ ಬಚ್ಚಿಟ್ಟುಕೊಂಡು

ಕಾದು ಕೊಚ್ಚುವ ರೊಚ್ಚು ಹಿತಶತೃಗಳಿಗೆ

ರೊಚ್ಚು ಮಚ್ಚುಗಳ ಬಿಚ್ಚಿಟ್ಟುಕೊಂಡು

ಕಡಿಯುವ ಕಿಚ್ಚು ಕೆಚ್ಚಿನ ಕಡುಶತೃಗಳಿಗೆ.!


ಕಿಚ್ಚು ರೊಚ್ಚುಗಳ ಅವಡುಗಚ್ಚಿಕೊಂಡು

ಸಹಿಸಿ ಸಾಗುವುದೆ ಮೆಚ್ಚು ಸಾಧಕರಿಗೆ

ಕಿಚ್ಚು ಹುಚ್ಚುಗಳನೆಲ್ಲ ಮೆಚ್ಚಿಕೊಂಡು

ನಗುವುದೇ ಅಚ್ಚುಮೆಚ್ಚು ಮಹಂತರಿಗೆ.!


ಕಿಚ್ಚುಗಳ ಬೆಂಕಿಯಚ್ಚಿನಲ್ಲು ಭಸ್ಮವಾಗದೆ

ಬೆಳಕಾಗುವ ನೆಚ್ಚು ಲೋಕೋದ್ಧಾರಕರಿಗೆ

ರೊಚ್ಚು ಮಚ್ಚು ಹುಚ್ಚುಗಳೆದುರು ಬಾಗದೆ

ದೀಪ ಹಚ್ಚುವುದಷ್ತೆ ಗೊತ್ತು ಮಹಾತ್ಮರಿಗೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments