ಕೂಪ-ಮಂಡೂಕಗಳು..!

 "ಇದು ನಮ್ಮ ನಿಮ್ಮದೇ ಬದುಕಿನ ಸಾನುಭವ, ಲೋಕಾನುಭವಗಳ ಅನಾವರಣದ ಕವಿತೆ. ನಿತ್ಯವೂ ಸುತ್ತ ಕಾಣುವ, ಕೇಳುವ, ಅನುಭವಿಸುವ ತಲ್ಲಣಗಳ ವಿಷಾದದ ಭಾವಗೀತೆ. ಇದು ಯುಗಯುಗದ ಜಗದ ಅಕ್ಷರಶಃ ಕಹಿಸತ್ಯಗಳ, ಕಟುವಾಸ್ತವದ ಕಥೆ. ಅದೆಂತಹ ದೊಡ್ಡ ಕಾಳ್ಗಿಚ್ಚನ್ನಾದರೂ ನಂದಿಸಬಹುದು, ಆದರೆ ಜನರ ಸಣ್ಣ ಹೊಟ್ಟೆಕಿಚ್ಚನ್ನು ಆರಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಏನನ್ನಾದರೂ ಬದಲಿಸಬಹುದು. ಆದರೆ ಕೂಪಮಂಡೂಕಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಏನಂತೀರಾ..?" - ವಿಷಾದದಿಂದ ಎ.ಎನ್.ರಮೇಶ್. ಗುಬ್ಬಿ.



ಕೂಪ-ಮಂಡೂಕಗಳು..!



ಹೊರಗಿನ ಶತೃಗಳ

ಮಣಿಸಿ ಹಣಿಯಲು

ಹೋರಾಡುವುದಕ್ಕಿಂತ..

ಒಳಗಿನ ಭಂದು-ಮಿತ್ರರ

ಕಾಲೆಳೆದು ಕೆಡವಲು

ಕಾಲ ವ್ಯಯಿಸುತ್ತೇವೆ..!


ನಿತ್ಯ ನಾವೂ ಬೆಳೆದು

ನಮ್ಮವರನೂ ಬೆಳೆಸಿ

ಜಗದೊಡನೆ ಸೆಣೆಸಿ

ಹೆಸರಾಗುವ ಬದಲು

ಒಳಗೊಳಗೆ ಉರಿದು

ಮತ್ಸರದಿ ಮಸೆದು

ಪರಸ್ಪರ ಕೆಸರೆರೆಚಲು

ಕಾಲ ಕಳೆಯುತ್ತೇವೆ..!


ಅನಂತ ವಿಶ್ವದಾಗಸದಿ

ಅಗಾಧ ಮಹಾಸಾಗರದಿ

ಸ್ಪರ್ಧೆಗಿಳಿದು ಜಯಿಸಿ

ದಿಗ್ವಿಜಯ ಸಾಧಿಸಲು

ಹಂಬಲಿಸುವುದಕ್ಕಿಂತ..

ಉರಿನ ಬಾವಿಯೊಳಗೆ

ಬಡಿದಾಡಿ ಬೊಬ್ಬಿರಿವ

ಮಂಡೂಕವಾಗುತ್ತಿದ್ದೇವೆ.!


ತಂತ್ರ – ಕುತಂತ್ರಗಳಲಿ

ನೂರು ಷಡ್ಯಂತ್ರಗಳಲಿ

ಹೀನ ರಾಜಕೀಯದಲಿ

ಮೇಧಾವಿಗಳ ತುಳಿದು

ಮೂಡರ ಮೆರೆಸುತ

ಅಂಧತೆಯ ಆಲಂಗಿಸುತ

ನಮಗೆ ನಾವೇ ಪಾಶವಾಗಿ

ನಿತ್ಯವೂ ನಾಶವಾಗುತ್ತಿದ್ದೇವೆ..!!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments