* ಮಹರ್ ಯೋಧರ ಶೌರ್ಯ ಪರಾಕ್ರಮದ ಪ್ರತಿರೂಪವೇ ಕೋರೆಗಾಂವ್ ವಿಜಯಸ್ತಂಭ *

 (ಸಿಪಾಯಿ ದಂಗೆಗೆ 40 ವರ್ಷಗಳ ಮೊದಲೇ ಮಾನವೀಯತೆಯ ಸಮಾನತೆಗಾಗಿ ನಡೆದ ಭಾರತದ ಅಸ್ಪೃಶ್ಯ ಮೂಲ ನಿವಾಸಿಗಳ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ೦1 ಜನವರಿ 1818 ರಲ್ಲಿ ನಡೆದ ಈ ಮಹಾ ದಂಗೆಯನ್ನು ಭೀಮಾ ಕೊರೇಗಾವ್ ದಂಗೆ ಎಂದು ಕರೆಯಲಾಗಿದೆ ತನ್ನಿಮಿತ್ಯ ಆ ಘಟನಾವಳಿಗಳನ್ನು ನೆನಪಿಸಿ ಮೂಲನಿವಾಸಿ ಭಾರತೀಯರಲ್ಲಿ ಸ್ವಾಭಿಮಾನ ಪ್ರೇರೆಪಿಸುವ ಕಿರು ಲೇಖನ)


*ಹೊಸವರ್ಷದ ಮೊದಲ ದಿನವೇ ಮಾನವೀಯ ಸಮಾನತೆಗಾಗಿ ಮಹರ್ ಯೋಧರು ಪರಾಕ್ರಮ ಮೆರೆದು ದಿಗ್ವಿಜಯ ಸಾಧಿಸಿದ ದಿನ* 


*ಮಹರ್ ಯೋಧರ ಶೌರ್ಯ ಪರಾಕ್ರಮದ  ಪ್ರತಿರೂಪವೇ ಕೋರೆಗಾಂವ್ ವಿಜಯಸ್ತಂಭ*



               ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ಆಚರಿಸಿದ್ದಾಯ್ತು ಅಂದರೆ 75 ವರ್ಷಗಳು ಸಂದಿತು. ಹಾಗೂ ಸಂವಿಧಾನದಲ್ಲಿ ಸ್ಪಷ್ಟವಾಗಿ ಅಸ್ಪೃಶ್ಯತೆ ಆಚರಣೆಗಳನ್ನು ಸಂಪೂರ್ಣ ನಿಷೇಧಿಸಿಲಾಗಿದೆ. ಕೆಳಜಾತಿ ಕಾರಣದಿಂದ ಹಿಂಸಿಸುವವರುಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಲಾಗಿದ್ದರೂ ಸಹ ಅಲ್ಲಿಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ, ದೈಹಿಕ ಹಿಂಸೆ, ಅತ್ಯಾಚಾರ, ಹತ್ಯಾಚಾರ, ದೇವಸ್ಥಾನಗಳ ನಿಷೇಧ, ಅವಾಚ್ಯ ಶಬ್ಧಗಳಿಂದ ನಿಂದನೆ, ಮರ್ಯಾದಾ ಹತ್ಯೆ, ಅರೆಬೆತ್ತಲೆ ಮೆರವಣಿಗೆ ನಡೆದಿರುವುದು ಸುಶಿಕ್ಷಿತ ಮತ್ತು ವೈಚಾರಿಕ ಮಾನವ ಜನಾಂಗದಲ್ಲಿ ನಡೆದಿರುವುದು ಮಾನಗೇಡಿ ಮತ್ತು ತಲೆ ತಗ್ಗಿಸುವ ಕಾರ್ಯವಾಗಿದೆ. ಜಗತ್ತಿನ ಸರ್ವೋಚ್ಛ ಮಾನವೀಯ ಮೌಲ್ಯಗಳ ಪ್ರಜಾಪ್ರಭುತ್ವ ಮಾದರಿ ಸಂವಿಧಾನ ಪಡೆದು ಅಳವಡಿಸಿಕೊಂಡಿರುವ ನಾವು ಹೇಯ - ನೀಚ ಕುಕೃತ್ಯಗಳನ್ನು ಯಾವಾಗ ನಿಲ್ಲಿಸುತ್ತೇವೋ!? ಅದ್ಯಾವಾಗ ಸರ್ವರನ್ನು ಪರಸ್ಪರ ಗೌರವಿಸಿ ಮಾನವಂತವರಾಗುತ್ತೇವೋ!?


                   ಇತಿಹಾಸದಲ್ಲಿ ಮುಚ್ಚಿಹೋದ ಸಮಾನತೆಯ ಸಾಹಸದ ಘಟನೆ. 3೦ ಸಾವಿರ ಸೈನಿಕರನ್ನು ಕೇವಲ 5೦೦ ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು - ಕೀಳುಗಳ ವಿರುದ್ಧ ಸೆಟೆದು ನಿಂತು; ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ, ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿ ನಡೆದ ನಿರ್ಣಾಯ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿ ಗೆಲುವು ಸಾಧಿಸಿದ ಅತ್ಯಮೂಲ್ಯ ಯಶೋಗಾಥೆಯಾಗಿದೆ. ಅದು ಭೀಮಾ ನದಿ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ ಎಂಬುದಾಗಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರು ಇಂಗ್ಲೇಂಡಿನ ಗ್ರಂಥಾಲಯದಿಂದ ಹೆಕ್ಕಿ ತೆಗೆದು ಅದರ ಮಹತ್ವವನ್ನು ಸರ್ವ ಜನಾಂದವರಿಗೂ ತಿಳಿಸುವಲ್ಲಿ ಯಶಕಂಡಿದ್ದಾರೆ.


            ಅಸ್ಪೃಶ್ಯನೊಬ್ಬನನ್ನು ಹಿಂದೂವೊಬ್ಬ ಮುಟ್ಟಿ ಆತ ಮಲಿನಗೊಳ್ಳುವುದನ್ನು ತಪ್ಪಿಸಲು ಅಸ್ಪೃಶ್ಯನು ತನ್ನ ಕುತ್ತಿಗೆಗೆ ಅಥವಾ ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು. ಅಲ್ಲದೆ ಪೇಶ್ವೆಗಳ ರಾಜಧಾನಿಯಾದ ಪೂನಾ (ಮಹಾರಾಷ್ಟ್ರ) ದಲ್ಲಿ ಹಿಂದೂಗಳು, ಅಸ್ಪೃಶ್ಯನೊಬ್ಬ ನಡೆದ ದಾರಿಯಲ್ಲಿ ನಡೆದು ಮಲಿನಗೊಳ್ಳುವುದನ್ನು ತಡೆಯಲು ಅಸ್ಪೃಶ್ಯನಸು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ಆತ ಗುಡಿಸಬೇಕಾಗಿತ್ತು! ಅದಲ್ಲದೆ ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದು, ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು, ಅಸ್ಪೃಶ್ಯ ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತು ಹಾಕಿಕೊಳ್ಳ ಬೇಕಾಗುತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು!                   


                "ಇದೇನು ಅಸ್ಪೃಶ್ಯರು ಮೇಲ್ಜಾತಿಗಳ ವಿರುದ್ಧ, ಅವರ ದೌರ್ಜನ್ಯದ ವಿರುದ್ಧ ನೇರಾನೇರ ಕಾದಾಟಕ್ಕಿಳಿದದ್ದಲ್ಲ. ಆದರೆ ಯಾವ ಜಾತಿ - ವರ್ಣ ವ್ಯವಸ್ಥೆಯಲ್ಲಿ ಶಸ್ತ್ರಹಿಡಿಯುವುದು ಇಂತಹ ಜಾತಿಗೆ - ವರ್ಣಕ್ಕೆ ಎಂದು ಮೀಸಲಾಗಿತ್ತೋ ಅಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮಯದಲ್ಲಿ ಬ್ರಿಟಿಷರ ಪರವಾಗಿ, ಅವರ ಸೇನೆಯಲ್ಲಿ ಸೈನಿಕರಾಗಿಯಷ್ಟೆ ಅಸ್ಪೃಶ್ಯ ಮಹಾರರು ಕಾದಾಡಿದ್ದು. ಪೇಶ್ವೆಗಳ ಸಾಮಾಜಿಕ ಅಸಮಾನತೆ ವಿರುದ್ಧ ಮಹರರು ಬಂಡೆದಿದ್ದು" ಎಂದು ಅಂಬೇಡ್ಕರ್ ರವರು ಸ್ಪಷ್ಟವಾಗಿ ಹೇಳಿದ್ದಾರೆ.


               ಕ್ಯಾಪ್ಟನ್ ಸ್ಟಾಂಟನ್‌ನ ನೇತೃತ್ವದಲ್ಲಿ ಸಿರೂರ್‌ನಿಂದ 1818 ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೇನೆ ಸತತ 27 ಕಿ. ಮೀ. ಗಳು ನಡೆದು ಮಾರನೆಯ ದಿನ 1ನೆ ತಾರೀಕು ಬೆಳಗ್ಗೆ ಕೋರೇಗಾಂವ್ ರಣಾಂಗಣವನ್ನು ತಲುಪುತ್ತದೆ. ಅದೇ ಸಮಯದಲ್ಲಿ ಮೂರೂ ದಿಕ್ಕುಗಳಿಂದಲೂ ತಲಾ 600ರಷ್ಟಿದ್ದ ಪೇಶ್ವೆಯ ಕಾಲ್ದಳದ 3 ತುಕಡಿಗಳು ಕ್ಯಾಪ್ಟನ್ ಸ್ಟಾಂಟನ್‌ನ ಪಡೆಯನ್ನು ಸುತ್ತುವರಿಯುತ್ತವೆ. ಅಲ್ಲದೆ ಪೇಶ್ವೆಯ ಈ ಸೈನ್ಯದ ಬೆಂಬಲಕ್ಕೆ ಬೃಹತ್ ಅಶ್ವದಳ, ರಾಕೆಟ್‌ದಳ ಬೇರೆ! ಒಟ್ಟಾರೆ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಟಿಷ್ ಸೇನೆಯು ಪೇಶ್ವೆಗಳ ಕಾಲ್ದಳ ಮತ್ತು ಫಿರಂಗಿ ದಳಗಳಿಂದ ಸಂಪೂರ್ಣ ವೃತ್ತಾಕಾರ ಮಾದರಿಯಲ್ಲಿ ಸುತ್ತುವರಿಯುತ್ತದೆ. ಹೇಗೆಂದರೆ ಪಕ್ಕದಲ್ಲೇ ಇದ್ದ ಭೀಮಾನದಿಗೆ ಹೋಗುವ ದಾರಿಗಳೆಲ್ಲ ಬಂದ್ ಆಗುವ ಮಟ್ಟಿಗೆ! ಕಡೆಗೆ ವಿಧಿಯಿಲ್ಲದೆ ಎರಡೂ ದಳಗಳೂ ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸುತ್ತವೆ.


           'ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ ಅವರ ಬರಹಗಳು ಮತ್ತು ಭಾಷಣಗಳು' ಸಂಪುಟ 17, ಭಾಗ 3 (ಇಂಗ್ಲಿಷ್ ಆವೃತ್ತಿ) ಪುಟ 4ರ ಪ್ರಕಾರ ಹೇಳುವುದಾದರೆ:- ‘‘ಭೀಮಾ ನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‌ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್‌ನ 24 ಗನ್‌ಮೆನ್‌ಗಳ ಸಹಾಯದಿಂದ 20,000 ಅಶ್ವದಳವಿದ್ದ, 8,000 ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12 ಗಂಟೆಗಳು ಯಾವುದೇ ವಿಶ್ರಾಂತಿ - ಆಯಾಸವಿಲ್ಲದೆ, ಆಹಾರ - ನೀರಿನ ಪರಿವೆಯಿಲ್ಲದೆ ಕ್ಯಾಪ್ಟನ್ ಎಫ್. ಎಫ್. ಸ್ಟಾಂಟನ್‌ನ ನೇತೃತ್ವದಲ್ಲಿ ಜಯಿಸುತ್ತಾರೆ


               ಸಿದ್ದನಾಕ ಮಕನಾಕ (ನಾಯಕ), ರಾಮನಾಕ ಯಶನಾಕ, ಗೋಧನಾಕ ಮೋಡೆನಾಕ, ರಾಮನಾಕ ಯಶನಾಕ, ಭಾಗನಾಕ ಹರನಾಕ, ಅಂಬನಾಕ ಕಾನನಾಕ, ಗಣನಾಕ ಬಾಳನಾಕ, ಬಾಳನಾಕ ದೋಂಡನಾಕ, ರೂಪನಾಕ ಲಖನಾಕ, ಬಾಲನಾಕ ರಾಮನಾಕ, ವಟಿನಾಕ ಧಾನನಾಕ, ಗಜನಾಕ ಗಣನಾಕ, ಬಾಪನಾಕ ಹಬನಾಕ, ಕೇನಾಕ ಜಾನನಾಕ, ಸಮನಾಕ ಯಶನಾಕ, ಗಣನಾಕ ಧರಮನಾಕ, ದೇವನಾಕ ಆಂಕನಾಕ, ಗೋಪಾಲನಾಕ ಬಾಲಿನಾಕ, ಹರನಾಕ ಹರಿನಾಕ, ಜೇಠನಾಕ ದೌನಾಕ, ಗಣನಾಕ ಲಖನಾಕ, ಸೀನನಾಕ ಮಕಲನಾಕ. ಇವರೆಲ್ಲರೂ ಕೊರೇಗಾಂವ ಯುದ್ಧದಲ್ಲಿ ವೀರಾವೇಷದಿಂದ ಹೋರಾಡಿ ಜಯ ತಂದುಕೊಟ್ಟು ಪ್ರಾಣಾರ್ಪಣೆ (ಮಡಿದ) ನೀಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್‌ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ ಒಂದು ಶಿಲಾಸ್ಮಾರಕ ಕೂಡ 1821 ಮಾರ್ಚ್ 26 ರಂದು ನಿರ್ಮಾಣ ಗೊಳ್ಳುತ್ತದೆ ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗಿದೆ. ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯದಿಂದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತ ಪೂರ್ವ ಜಯ ದಾಖಲಿಸಿ; ಪೇಶ್ವೆಗಳ ಆಡಳಿತ ಕೊನೆಗೊಳಿಸುವುದರೊಂದಿಗೆ ಅಸ್ಪಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ. 


                   "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು’’ ಎಂದು ಹೇಳಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಭುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು. ಆ ಕಾರಣಕ್ಕಾಗಿ ಕೋರೆಗಾಂವ್‌ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತಿ ವರ್ಷ ಜನವರಿ ೦1ರಂದು ಸಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು .ಈ ಮಹೋನ್ನತ ಯುದ್ಧ ನಡೆದು 73 ವರ್ಷಗಳ ನಂತರ (1891) ಹುಟ್ಟಿದ ಅಂಬೇಡ್ಕರರು ಶಿಕ್ಷಣ ಪಡೆದು, ವಿದೇಶಿ ವ್ಯಾಸಂಗಕ್ಕೆ ತೆರಳಿ ಸಂವಿಧಾನ ಶಿಲ್ಪಿಯಾಗಲು ಇದು ಕಾರಣೀಭೂತವಾಯಿತು. ಈ ನಿಟ್ಟಿನಲ್ಲಿ ಕೋರೇಗಾಂವ್ ಯುದ್ಧ ಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಅಪರೂಪದ ಮೈಲುಗಲ್ಲಾಗಿ ಉಳಿಯುತ್ತದೆ. ಹಾಗೆಯೇ ಸ್ಫೂರ್ತಿಯ ಸಂಕೇತವೂ ಅದಾಗುತ್ತದೆ.


           ೧೮೧೮ ರ ಕೋರೆಗಾಂವ್ ಕದನವು ದಲಿತರಿಗೆ ಪ್ರಾಮುಖ್ಯವಾದ ಕದನ. ೧ ಜನವರಿ ೧೮೧೮ ರಂದು, ಈಸ್ಟ್ ಇಂಡಿಯಾ ಕಂಪನಿಯ ಬಾಂಬೆ ಪ್ರೆಸಿಡೆನ್ಸಿ ಆರ್ಮಿಯ ೮೦೦ ಪಡೆಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಮಹಾರರು. ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ೨ ನೇ ಪೇಶ್ವೆ ಬಾಜಿ ರಾವ್ ನ (೨೮,೦೦೦) ಪಡೆಯನ್ನು ಸೋಲಿಸಿದರು. ಇದರ ಸ್ಮರರ್ಣಾಥವಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ವಿಜಯಸ್ತಂಭ (ವಿಜಯ್ ಸ್ತಂಭ) ವನ್ನು ಸ್ಥಾಪಿಸಿದರು. ಈ ಮೂಲಕ ಯುದ್ದದಲ್ಲಿ ವೀರಮರಣವನ್ನು ಅಪ್ಪಿದ ಸೈನಿಕರನ್ನು ಸ್ಮರಿಸಿದರು. ೧೯೨೮ ರಲ್ಲಿ ನಡೆದ ಮೊದಲ ಸ್ಮರಣಾರ್ಥ ಸಮಾರಂಭದ ನೇತೃತ್ವವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ವಹಿಸಿದ್ದರು. ಅಂದಿನಿಂದ ಪ್ರತಿ ವರ್ಷ ಜನವರಿ ೧ ರಂದು ಅಂಬೇಡ್ಕರ್ವಾದಿಗಳು ಭೀಮಾ ಕೋರೆಗಾಂವ್‌ನಲ್ಲಿ ತಮ್ಮನ್ನು ಕೀಳಾಗಿ ಕಾಣುವ ಮರಾಠ ಸಾಮ್ರಾಜ್ಯದ ಮೇಲ್ಜಾತಿ ಪೇಶ್ವೆ ಆಡಳಿತದ ವಿರುದ್ಧ ತಮ್ಮ ಪ್ರತಿರೋಧವನ್ನು ತೋರಿಸಲು ವಿಜಯ ದಿನವನ್ನು ಆಚರಿಸಲು ಸೇರುತ್ತಾರೆ.


                 ಪ್ರತಿ ವರ್ಷ ಜನವರಿ ಒಂದನೇ ತಾರೀಖು ಜಗತ್ತಿಗೆ ಹೊಸ ವರ್ಷದ ದಿನ. ಆದರೆ ಅಸ್ಪೃಶ್ಯರ ಪಾಲಿಗೆ ತಮ್ಮ ಅಸ್ತಿತ್ವಕ್ಕಾಗಿ ಶೌರ್ಯ ಮೆರೆದ ಕ್ಷಣ, ಸಮಾನತೆಗೆ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಸುದಿನ. ಮಾನವೀಯ ಸಮಾನತೆಗಾಗಿ ತಮ್ಮ ತೊಳ್ಬಲದಿಂದ ಹೋರಾಡಿ ದಿಗ್ವಿಜಯ ಸಾಧಿಸಿದ ಅತ್ಯಮೂಲ್ಯ ಐತಿಹಾಸಿಕ ಮಹಾ ಸಂಗ್ರಾಮವು; ದಾಸ್ಯವನ್ನು ಸಹಿಸದೆ ಕೆಚ್ಚೆದೆಯಿಂದ ಹೋರಾಡಿ ಸ್ವಚ್ಛಂದವಾಗಿ ಮುಕ್ತ ಬಾಳಿನ ರಥವನ್ನು ಮುನ್ನಡೆಸಿ ಸ್ವಾಭಮಾನದಿಂದ ತಲೆ ಎತ್ತಿ ಮೆರೆಯಬೇಕೆಂಬ ಮಹಾ ಸಂದೇಶಕ್ಕೆ ಕೋರೆಗಾಂವ್ ವಿಜಯಸ್ತಂಭ ಕಳಶಪ್ರಾಯವಾಗಿದೆ.            


ಜೈ ಭೀಮ್, ಜೈ ಕೋರೆಗಾಂವ್ ಶೌರ್ಯ ಸ್ಮಾರಕ ಸ್ತಂಭ.


(*Social insult is more dangerous than poverty* ಶತಮಾನಗಳ ಕಾಲ ಜಾತಿಯ ಕಾರಣಕ್ಕಾಗಿ  ಶೋಷಣೆ, ಧರ್ಮದ ಅನಿಷ್ಠ ಪದ್ದತಿಯ ಕಾರಣದಿಂದ ಅಸ್ಪೃಶ್ಯತೆ  ಅನುಭವಿಸಿ ದಿನಾಲು ಒದೆ ತಿಂದವರು, ದಿನಾಲು ಸಾಯುವ ಬದಲು ಸತ್ತರೆ ಇಂದೇ ಸಾಯೋಣ ಗೆದ್ದರೆ ಇತಿಹಾಸವೆಂದು ತಿಳಿದು ಸ್ವಾಭಿಮಾನಕ್ಕಾಗಿ ತಿರುಗಿ ಶೋಷಣೆ ಮಾಡಿದವನ್ನ  ಒದ್ದರು ಆ ಒದೆ ಹೆಗಿತ್ತೆಂದರೆ ಇತಿಹಾಸದಲ್ಲಿ ದಾಖಲಾಯಿತು!  

*ಭೀಮಾ ಕೋರೆಗಾಂವ ವಿಜಯೋತ್ಸವ*)


*ಸುಹೇಚ ಪರಮವಾಡಿ* ಶ್ರೀ ಸುಭಾಷ್ ಹೇಮಣ್ಣಾ ಚವ್ಹಾಣ, ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ೭೮೭೫೦ ೨೬೭೨೪

Image Description

Post a Comment

0 Comments