"ಇದು ಇಂದು ಪ್ರತಿಯೊಬ್ಬರ ಆಂತರ್ಯದಲ್ಲಿ ತಾಂಡವವಾಡುವ ತಲ್ಲಣಗಳ ಅನಾವರಣದ ಕವಿತೆ. ಪ್ರತಿವರ್ಷ ಡಿಸೆಂಬರ್ ಮುವ್ವತ್ತೊಂದರಂದು ಮನದಲ್ಲಿ ಮಾರ್ದನಿಸುವ ರಿಂಗಣಗಳ ಭಾವಗೀತೆ
. ಇಂದು ರಾತ್ರಿ ಗೋಡೆಯ ಮೇಲಿನ ಕ್ಯಾಲೆಂಡರು ಬದಲಿಸುವ ಘಳಿಗೆಯಲ್ಲಿ ಈ ಎಲ್ಲ ಜೀವ ಸಂವೇದನೆಗಳು, ಭಾವ ನಿವೇದನೆಗಳು, ನೆನಪ ಸಂಕೀರ್ತನೆಗಳು ನಮ್ಮ ಹೃನ್ಮನಗಳನ್ನು ಆರ್ದ್ರಗೊಳಿಸಿ, ಸಾವಿರ ಸಾವಿರದ ಭಾಷ್ಯದಲೆಗಳನ್ನು ಭೋರ್ಗರೆಸುತ್ತವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ತಲ್ಲಣಗಳು.!
ಹಳೆಯದಾಯಿತು..
ವರ್ಷದ ಕ್ಯಾಲೆಂಡರು.!
ಮುಗಿದೇ ಹೋಯಿತು
ಇಪ್ಪತ್ತು ಇಪ್ಪತ್ತನಾಲ್ಕು.!!
ಕಾಲನ ಓಟಕ್ಕೆ
ಯಾವುದು ಸರಿಸಾಟಿ?
ಬದುಕಿನ ವೇಗಕ್ಕೆ
ಎಲ್ಲಿದೆ ಪೈಪೋಟಿ.??
ಬರುವ ನಾಳೆಗಾಗಿ
ಸಡಗರವೋ..??
ಕಳೆದ ದಿನಗಳಿಗಾಗಿ
ಬೇಸರವೋ..???
ವರ್ಷ ಕಳೆಯಿತೆಂದು
ಸಂಭ್ರಮಿಸಬೇಕೋ.?
ವಯಸ್ಸಾಯಿತೆಂದು
ಸಂಕಟಪಡಬೇಕೋ.??
ಮಾಡಿದ ಸಂಕಲ್ಪಗಳೆಷ್ಟೋ?
ಕೈಗೂಡಿದ ಕನಸುಗಳೆಷ್ಟೋ?
ಕೈಚೆಲ್ಲಿದ ಕ್ಷಣಗಳೆಷ್ಟೋ?
ಪಡೆದ ಸಾರ್ಥಕತೆಯೆಷ್ಟೋ?
ಅಬ್ಬಾ.! ವರ್ಷಾಂತ್ಯಕ್ಕೆ
ಅದೆಷ್ಟು ತಲ್ಲಣಗಳು.?!
ಎದೆಯೊಳಗೆ ಅದೆನಿತು
ಭಾವಗಳ ರಿಂಗಣಗಳು.?!!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments