"ಇಲ್ಲಿವೆ ಜಂಗಮವಾಣಿಯ ಹಾಸ್ಯ-ಲಾಸ್ಯಗಳ ರಿಂಗಣಗಳ ಏಳು ಹನಿಗಳು. ಜಂಗಮಗಂಟೆಯ ಜಂಜಡ ತಲ್ಲಣಗಳ ವಿಡಂಬನೆಯ ನಗೆದನಿಗಳು. ಇದು ಮೊಬೈಲು ಮಾಯಾಲೋಕದ ಮಾರ್ಮಿಕ ಸತ್ಯಗಳ ನಗೆಪಾಟಲು. ಬೇಸ್ತು ಬೀಳುವವರ ಬಗೆ ಬಗೆ ಪರಿಪಾಟಲು. ಇದು ನಮ್ಮ ನಿಮ್ಮೆಲ್ಲರ ಸ್ವಾನುಭವವೂ ಹೌದು. ಲೋಕಾನುಭವವೂ ಹೌದು. ಇದರಲ್ಲಿ ವಿನೋದವೂ ಇದೆ. ವಾಸ್ತವವೂ ಇದೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಹನಿಗಳಲ್ಲ ಜಂಗಮವಾಣಿ ದನಿಗಳು..
1. ತಪ್ತ.!
ಕರೆ ಮಾಡಿದಾಗಲೆಲ್ಲ
ವ್ಯಾಪ್ತಿ ಪ್ರದೇಶದಿಂದಾಚೆಯೇ
ಇರುವ ಓ ಮುದ್ದುಗೆಳತಿ..
ನೀ ಆಗುವುದೆಂದು ಪ್ರಾಪ್ತಿ?
ಈ ಜೀವಕೆಂದು ಸಂತೃಪ್ತಿ.?
*************
2. ಖಿಲಾಡಿ.!
ಸೆಲ್ಲು ನಂಬರು ಕೊಟ್ಟೆ.....
ನಂಬಿಕೆ ಲಾಕು ಮಾಡಿಕೊಂಡಳು
ನಂಬಿ ದುಡ್ಡು ಸಾಲ ಕೊಟ್ಟೆ....
ನಂಬರೇ ಬ್ಲಾಕು ಮಾಡಿಕೊಂಡಳು.!
***************
3. ಬೇ-ಸತ್ತೆ.!
ಗೆಳತಿ ಜಂಗಮವಾಣಿಯಲಿ
ನಿನ್ನ ಸಂಖ್ಯೆಯ ಒತ್ತಿದಾಗಲೆಲ್ಲ
“ಚಂದಾದಾರರು ಕಾರ್ಯನಿರತ”
ಕೇಳಿ ಕೇಳಿ ಸಾಕಾಗಿದೆ ಸತತ
ಆ ಅಶರೀರವಾಣಿಯ ವರಾತ.!
********************
4. ಕರ್ಮಕಾಂಡ.!
ನೀನು ಸಿಕ್ಕಾಗ..
ನೆಟ್ವರ್ಕು ಸರಿಯಿರುವುದಿಲ್ಲ
ನೆಟ್ವರ್ಕು ಸರಿಯಿದ್ದಾಗ
ನೀನೇ ಸಿಗುವುದಿಲ್ಲ.!
*********************
5. ಮರೀಚಿಕೆ.!
ಧ್ವನಿ ಕರೆಗೆ ಸಿಗದವಳು
ದರ್ಶನ ಕರೆಗೆ ಸಿಕ್ಕಾಳೆಯೇ?
ಸಂದೇಶವನೇ ನೋಡದವಳು
ಸಂದರ್ಶನಕೆ ಬಂದಾಳೆಯೇ?
********************
6. ಬೇಸ್ತು.!
ಕರೆ ಮಾಡಿದರೆ
ಮೊಬೈಲು ಖಲಾಸ್
ವಿಳಾಸ ಹುಡುಕಿದರೆ
ಅವಳೇ ಅಬೇಸ್.!
**************
7. ಚಾಲಾಕಿ.!
ಪರಿಚಯವಾದಳು ನಂಬರು ಕೊಟ್ಟೆ
ನಂಬರು ಸೇವು ಮಾಡಿಕೊಂಡಳು.!
ಆತ್ಮೀಯಳಾದಳು ಲಕ್ಷ ಸಾಲ ಕೊಟ್ಟೆ
ನಂಬರೇ ಬ್ಲಾಕು ಮಾಡಿಕೊಂಡಳು
ಮರಳಿಕೇಳದಂತೆ ಸೇಫು ಮಾಡಿಕೊಂಡಳು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments