* ನುಡಿಕಾರರ ಅಪಸವ್ಯಗಳ ಬಿಚ್ಚಿಡುವ ಏಳು ಹನಿಗವಿತೆಗಳು *

 “ಇಲ್ಲಿವೆ ನುಡಿಕಾರರ ಅಪಸವ್ಯಗಳ ಬಿಚ್ಚಿಡುವ ಏಳು ಹನಿಗವಿತೆಗಳು


. ಭಾಷಣ, ಭೂಷಣಗಳ ಔಚಿತ್ಯ ಬಿಂಬಿಸುವ ಭಾವಪ್ರಣತೆಗಳು.  ಈಗೀಗಂತು ಸಾಹಿತ್ಯ ಧುರೀಣರು, ನೇತಾರರು, ಸೆಲೆಬ್ರಿಟಿಗಳು ಮೈಕು ಸಿಕ್ಕರೆ ಸಾಕು, ಮೆದುಳು ಮತ್ತು ನಾಲಿಗೆಯ ಕನೆಕ್ಷನ್ನೇ ಕಳೆದುಕೊಂಡು ಬಿಡುತ್ತಾರೆ. ಕೆಲವರಿಗೆ ಕೊರೆಯುವ ಹುಚ್ಚು, ಕೆಲವರಿಗೆ ಕೆರೆಯುವ ಹುಚ್ಚು, ಮತ್ತೆ ಕೆಲವರಿಗೆ ಬೆಂಕಿ ಎರೆಯುವ ಕಿಚ್ಚು. ಹಾಗಾಗಿ ಪ್ರತಿ ವೇದಿಕೆಯಲ್ಲೂ ವಿವಾದ. ಸಾಮಾಜದ ಜೀವ-ಜೀವನಗಳ ನೆಮ್ಮದಿ ಕೆಡಿಸುವ ಉನ್ಮಾದ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


1. ಎಚ್ಚರ..!


ಸಭೆಯ ಚಪ್ಪಾಳೆ ಶಿಳ್ಳೆಗಳಿಗೆ ಉನ್ಮತ್ತರಾಗಿ

ಕಡಿದುಕೊಂಡರೆ ಮೆದುಳು ನಾಲಿಗೆ ಕೊಂಡಿ

ತೋಡಿಕೊಂಡಂತೆ ವಿವಾದಗಳ ಗುಂಡಿ

ಸ್ವಯಂ ಸುರಿದುಕೊಂಡಂತೆ ಕೆಸರಿನ ಬಂಡಿ.!


******************


2. ಭಾಷಣ.!


ವೇದಿಕೆಯ ಮಾತುಗಳು

ಆಸಕ್ತಿಯಿಂದ ಕೇಳುವಂತಿರಬೇಕು

ಆಸ್ವಾಧಿಸುತ್ತ ಮಾಧುರ್ಯ

ಆಕಳಿಸುತ್ತ ಶಪಿಸುವಂತಿರಬಾರದು

ಕೈಗಡಿಯಾರದ ಔದಾರ್ಯ.!


********************


3. ಬೆಳಕು-ಬೆಂಕಿ.!


ಪ್ರಾಂಜಲ ನಿಲುವಿನ ನುಡಿಗಳು

ಮನದಂಗಳಕೆ ಬೆಳಕಿನ ದೀಪವಿಟ್ಟಂತೆ

ಪಂಥೀಯ ಒಲವಿನ ಮಾತುಗಳು

ಮನದಗೂಡಿಗೆ ಬೆಂಕಿಕೊಳ್ಳಿಯಿಟ್ಟಂತೆ.!


***************


4.  (ನಿ)ವೇದನೆ.!


ಸಾಹಿತಿಗಳೇ ನಿಮ್ಮ ನುಡಿಗಳಿಂದ

ಸೇತುವೆ ಕಟ್ಟಿ ಸಾಕು.!

ಗೋಡೆಯೆಬ್ಬಿಸುವ ಮೇಸ್ತ್ರಿಯ

ಕೆಲಸ ನಿಮಗೇಕೆ ಬೇಕು.?!


*************


5. ಮನವಿ.!


ಭೂತದ ಸತ್ಯದರ್ಶನ ಮಾಡಿಸುವ

ಪಾಂಡಿತ್ಯದ ಭ್ರಮೆಯಲ್ಲಿ, ಭರದಲ್ಲಿ..

ಮಾಡದಿರಿ ವರ್ತಮಾನದ ಶಾಂತಿದಮನ 

ಸುಡದಿರಿ ಜೀವ-ಭಾವಗಳ ನಂದನ.!


***********


6. ದೂ(ದು)ರಾಲೋಚನೆ.!


ಆಡುವ ನುಡಿಗಳು ಎಚ್ಚರಿಸುವಂತಿರಬೇಕು

ಕೇಳುಗರೆದೆ ಬೆಚ್ಚಿಬೀಳಿಸುವಂತಿರಬಾರದು

ಪ್ರೀತಿ ಶಾಂತಿಯ ಹುಚ್ಚು ಹೆಚ್ಚಿಸುವಂತಿರಬೇಕು

ಸೇಡು ಕೇಡಿನ ಕಿಚ್ಚು ಹಚ್ಚಿಸುವಂತಿರಬಾರದು.!


**********


7. ಜೋಕೆ.!


ಎದುರಿನ ಹೃನ್ಮನ ಬೇಕು ಬೇಕು 

ಎನಿಸುವಾಗಲೇ ನಿಲ್ಲಿಸಿದರಷ್ಟೇ.. 

ಮಧುರ ಮಾತಿನ ಸ್ವಾದ.!

ಕೇಳುವ ಕರ್ಣಗಳಿಗೆ ಸಾಕು ಸಾಕು

ಎನಿಸಿದರೂ ಮುಂದುವರಿಸಿದರೆ

ಅದು ಕರ್ಕಶ ಭೈರಿಗೆ ನಾದ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments