“ಅಗಲಿದ ಅಪ್ರತಿಮ ಆರ್ಥಿಕ ಸುಧಾರಕ, ರಾಷ್ಟ್ರ ಕಂಡ ಅಪರೂಪದ ಪ್ರಧಾನಿ ದಿವಂಗತ ಮನಮೋಹನಸಿಂಗರಿಗರ್ಪಿಸಿದ ಸಪ್ತ ಹನಿಗವಿತೆಗಳು.
ಮುತ್ಸದ್ದಿ ನಾಯಕ, ಸಜ್ಜನಿಕೆ ಸೌಜನ್ಯದ ಮೇರು ವ್ಯಕ್ತಿತ್ವದ ಶ್ರೀ ಮನಮೋಹನರ ದಿವ್ಯ ಚೇತನಕ್ಕೆ ಸಮರ್ಪಿಸಿದ ಅಂತರಾಳದ ಅನಂತ ಅಶ್ರು ಭಾಷ್ಯಗಳ ಭಾವಪ್ರಣತೆಗಳು. ಮನಮೋಹನ ಸಿಂಗರು ನಮ್ಮಿಂದ ಭೌತಿಕವಾಗಿ ಅಸ್ತಂಗತರಾದರೂ, ಅವರ ಕ್ರಾಂತಿಕಾರಿ ನೀತಿ, ಯೋಜನೆಗಳು, ಸುಧಾರಣ ಕ್ರಮಗಳು, ದೇಶದ ಭವಿಷ್ಯ ಬದಲಿಸಿದ ನಡೆಗಳು ಎಂದೆಂದೂ ಜನಮಾನಸದಲ್ಲಿ ಜನಜನಿತ. ಏನಂತೀರಾ..?” - ಸಂತಾಪ, ಶ್ರದ್ದಾಂಜಲಿಗಳೊಂದಿಗೆ ಎ.ಎನ್.ರಮೇಶ್.ಗುಬ್ಬಿ.
1. ನಿದರ್ಶನ.!
ಮಾತು ಬೆಳ್ಳಿ, ಮೌನ ಬಂಗಾರ
ನಾಣ್ಣುಡಿಗೆ ಚಿರಂತನ ನಿದರ್ಶನ
ಎಲ್ಲರ ಮೆಚ್ಚಿನ ಮನಮೋಹನ.!
*****************
2. ಮನಮೋಹನ್ ಸಿಂಗ್.!
ಉದಾರೀಕರಣ ಖಾಸಗೀಕರಣ
ಜಾಗತೀಕರಣಗಳ ಸತ್ಯಸಾಕಾರ
ಸಾಧ್ಯವಾಗಿಸಿದ ಮಹಾನೇತಾರ
ನೂತನ ಆರ್ಥಿಕತೆಯ ಹರಿಕಾರ.!
********************
3. ಪ್ರಾತಃಸ್ಮರಣೀಯ.!
ಮಾತಿಗಿಂತಲೂ ಕೃತಿ ಮುಖ್ಯ
ಕೀರ್ತಿಗಿಂತ ನೀತಿಯ ಔಚಿತ್ಯ
ಪ್ರಚಾರಕಿಂತ ವಿಚಾರ ವೇದ್ಯ
ವ್ಯಕ್ತಿಗಿಂತ ಪ್ರಗತಿ ದೀಪ್ಯವೆಂದು
ನಿರೂಪಿಸಿದ ಪ್ರಾತಃಸ್ಮರಣೀಯ.!
****************
4. ವೈಶಿಷ್ಟ್ಯ.!
ಕಿಂಗಾಗಿದ್ದರೂ ಮನಮೋಹನ ಸಿಂಗು
ತೋರಲಿಲ್ಲ ರಾಜಕಾರಣಿಯ ರಂಗು
ಇರಲಿಲ್ಲ ಹೆಸರು ಪ್ರಚಾರಗಳ ಹಂಗು
ಸದಾ ಅವರಿಗೆ ಅಭಿವೃದ್ದಿಯ ಗುಂಗು.!
*******************
5. ವ್ಯಕ್ತಿಯಲ್ಲ ಶಕ್ತಿ.!
ದುರದೃಷ್ಟಿಯಿಲ್ಲದ ದೂರದೃಷ್ಟಿಯ ಚಿಂತಕ
ಆರ್ಥಿಕ ಮನ್ವಂತರದ ಯುಗ ಪ್ರವರ್ತಕ
ಕ್ರಾಂತಿಕಾರಿ ನೀತಿ ಸುಧಾರಣೆ ನಿಯೋಜಕ
ನವಶಕೆಗೆ ನಾಂದಿ ಹಾಡಿದ ಮಹಾನಾಯಕ.!
********************
6. ತೆರೆಮರೆ ಸಾಧಕ.!
ನೆರಳಲ್ಲೆ ದುಡಿದರೂ ದೇಶವನು
ನವದಿಕ್ಕಿಗೆ ನಡೆಸಿದ ಬೆರಳಾದರು
ಹಿನ್ನಲೆಯಲ್ಲೆ ನಿಂತರೂ ರಾಷ್ಟ್ರದ
ಮುನ್ನಡೆಗೆ ಮುನ್ನುಡಿ ಕೊರಳಾದರು.!
********************
7. ಆರ್ಥಿಕ ಮಾಂತ್ರಿಕ.!
ಬಿಕ್ಕುತ್ತಲಿದ್ದ ಆರ್ಥಿಕತೆಗೆ
ಸುಧಾರಣೆಗಳ ಹೊಸದಿಕ್ಕು
ಮುಕ್ಕಾಗಿದ್ದ ಔದ್ಯೋಗಿಕತೆಗೆ
ಸಬಲೀಕರಣದ ನವಸೊಕ್ಕು
ನೀಡಿದ ಮೊದಲ ಪ್ರಧಾನಿ
ಬದಲಿಸಿದರು ದೇಶದ ನಿಶಾನಿ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments