ಇಲ್ಲಿವೆ ಚಿತ್ತವಿಕಾರದ ಅಂಶಗಳನ್ನು ಅನಾವರಣಗೊಳಿಸುವ ಆರು ಹನಿಗಳು.

 "ಇಲ್ಲಿವೆ ಚಿತ್ತವಿಕಾರದ ಅಂಶಗಳನ್ನು ಅನಾವರಣಗೊಳಿಸುವ ಆರು ಹನಿಗಳು.


ಮುಗುಳ್ನಗೆ ಕಳೆದು ಮನವನ್ನು ಮಸಣವಾಗಿಸಿ ಮಾರ್ದನಿಸುವ ವಿಕ್ಷಿಪ್ತ ರಿಂಗಣಗಳ ಖನಿಗಳು. ಬದುಕನ್ನು ಬರಡಾಗಿಸಲು ಕಾರಣವಾಗುವ ದನಿಗಳು. ಮೇಲರಿಮೆ ಎನ್ನಿ, ಕೀಳರಿಮೆ ಎನ್ನಿ. EGO ಎನ್ನಿ, ಆತ್ಮರತಿ ಎನ್ನಿ, ಅಹಮಿಕೆಯ ಮದವೆನ್ನಿ.. ಒಟ್ಟಿನಲ್ಲಿ ಈ ವಿಕಾರಗಳು ನಮಗೆ ನಾವೇ ಕೋಟೆ ಕಟ್ಟಿಕೊಂಡು ನರಳುವಂತೆ ಮಾಡಿ ಬದುಕಿನ ಬೆಳಕನ್ನೇ ಕಳೆದುಬಿಡುತ್ತವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



1. ಪರಿತಾಪ.!


ನಾವೆ ನಮ್ಮಯ ಸುತ್ತ

ಕಟ್ಟಿಕೊಂಡರೆ ಹುತ್ತ..

ಬದುಕು ಮೈಲುತುತ್ತ.!


**************


2. ಯಶೋ ಮರ್ಮ.!


ಬಾಗಿದರೆ ಇಲ್ಲಿ ಸಾಧನೆ

ಯಶಸ್ಸಿನ ಅನುಮೋದನೆ

ಬೀಗಿದರೆ ಬರೀ ವೇದನೆ

ಬಾಳು ಶೂನ್ಯಸಂಪಾದನೆ.!


**************


3. ವಿಪರ್ಯಾಸ.!


ನಾವುಗಳೆ ನಿರ್ಮಿಸಿಕೊಂಡ ಕೋಟೆಯೊಳಗೆ

ನಮ್ಮೆದೆಗೆ ಬೆಂಕಿಯಿಟ್ಟುಕೊಂಡು ಬೇಯುತ್ತೇವೆ.!

ಸ್ವಯಂ ಸಂಕೋಲೆ ಬಿಗಿದುಕೊಂಡು ಕೈಗಳಿಗೆ 

ಜಗವನೆಲ್ಲ ದೋಷಿಸಿಕೊಂಡು ನೋಯುತ್ತೇವೆ,!


*******************


4. ಮದ್ದಿಲ್ಲ.!


ತಲೆಭಾರಕೆ ಮುಲಾಮಿದೆ

ತಲೆಶೂ್ಲೆಗೂ ಮದ್ದಿದೆ

ತಲೆಯೇ ಭಾರವಾಗಿ

ಶೂಲವಾದರೆ ಮದ್ದು

ಮುಲಾಮಾದರು ಎಲ್ಲಿದೆ?


*******************


5. ತಲೆದಂಡ.!


ಕೆಳಗಿರಿಸದಿರೆ ಶಿರವೇರಿಸಿಕೊಂಡ 

ಭ್ರಮೆ ಭ್ರಾಂತಿಗಳ ಟೋಪಿ

ಬದುಕಿನ ಶಾಂತಿ ನೆಮ್ಮದಿಗಳ

ತಲೆದಂಡವಾದೀತು ಪಾಪಿ.!


********************


6. ಗೂಡು.!


ಗೂಡುಕಟ್ಟಿಕೊಂಡರೂ ಕಡೆಗೆ

ಕಂಬಳಿಹುಳದಂತೆ್ ಬದಲಾಗಿ 

ಸೆಳೆವ ಬಣ್ಣದ ಚಿಟ್ಟೆಯಾಗಬೇಕು

ರೇಷ್ಮೆಹುಳದಂತೆ ಬಲಿದಾನಗೈದು

ಹೊಳೆವ ರೇಷ್ಮೆದಾರವಾಗಬೇಕು

ಸುಮ್ಮನೆ ಕೊಳೆತು ನಾರಬಾರದು

ನಮಗೆ ನಾವೆ ಭಾರವಾಗಬಾರದು.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments