ಕವಿ ಸಿದ್ದಲಿಂಗಯ್ಯ ಮತ್ತು ಕಾವ್ಯ ಪಯಣ
"ನನ್ನ ಮನಸ್ಸಿಗೆ ಬಂದ ಭಾವನೆಗಳನ್ನು ಕಾಗದದ ಮೇಲೆ ಚೆಲ್ಲುವುದಷ್ಟೇ ನನ್ನ ಉದ್ದೇಶ" ಎಂದುಕೊಂಡು ಸಿದ್ದಲಿಂಗಯ್ಯನವರು ಬರೆದ ಭಾವನೆಗಳೇ ಕವಿತೆಗಳಾಗಿ ಹೊರಹೊಮ್ಮಿದವು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಸಿದ್ದಲಿಂಗಯ್ಯನವರು ಒಳ್ಳೆಯ ಭಾಷಣಕಾರರಾಗಿದ್ದರು. ಈ ಸಂದರ್ಭದಲ್ಲಿ ಕೆಲವರು ಸಿದ್ದಲಿಂಗಯ್ಯ ಅವರನ್ನು ಕವಿಗಳು ಎಂದೇ ಗುರುತಿಸಿದರು. ಪ್ರೌಢಶಾಲೆಯಲ್ಲಿ ಓದುವಾಗ ಡಾ. ಎನ್. ಸಿ. ಬಿಳಿಗಿರಿ ರಂಗಯ್ಯನವರು ಒಂದು ಕವಿತೆ ಬರೆದು ಓದಿದರೆ ಒಂದು ರೂಪಾಯಿ ಬಹುಮಾನ ಎಂದು ಹೇಳಿದ್ದರಿಂದ ಇದಕ್ಕೆ ಸ್ಫೂರ್ತಿಗೊಂಡ ಸಿದ್ದಲಿಂಗಯ್ಯನವರು ಪ್ರತಿದಿನ ಕವಿತೆ ಬರೆದು ಬಹುಮಾನ ಪಡೆಯುತ್ತಿದ್ದರು.
ಪೌರ ಕಾರ್ಮಿಕರ ಸ್ಥಿತಿಗತಿಗಳ ಅಧ್ಯಯನ ಮಾಡಲು ಸರ್ಕಾರ ನೇಮಿಸಿದ್ದ ಐಪಿಡಿ ಸಾಲಪ್ಪ ಆಯೋಗದ ಸದಸ್ಯರಾಗಿದ್ದ ಸಿ. ಗಂಜೀಗಟ್ಟಿ ಅವರು ಸಿದ್ದಲಿಂಗಯ್ಯನವರ ಕವನಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದರು. ಮೊದಲಿಗೆ ಆಗ ಶಾಸಕರಾಗಿದ್ದ ಪ್ರೊಫೆಸರ್ ಸಿದ್ದಾರ್ಥ ಅರಕೆರಿಯವರು ತರುತ್ತಿದ್ದ "ಮಾರ್ಗದರ್ಶನ" ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಸಿದ್ದಲಿಂಗಯ್ಯನವರ ಫೋಟೋ ಜೊತೆಗೆ ಅವರ ಕವನಗಳನ್ನು ಪ್ರಕಟಿಸಿ ಉತ್ತೇಜನ ನೀಡುತ್ತಿದ್ದರು. ಆಗಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊಫೆಸರ್ ಜಿ.ಎಸ್. ಸಿದ್ದಲಿಂಗಯ್ಯನವರು ಕವಿಯ ಕವಿತೆಗಳನ್ನು ಮೆಚ್ಚಿಕೊಂಡಿದ್ದಲ್ಲದೆ ಅಲ್ಲಿನ ಕನ್ನಡ ಪ್ರಾಧ್ಯಾಪಕರುಗಳಿಗೆ ತೋರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಸಿದ್ದಲಿಂಗಯ್ಯನವರ ಬರೆದ ಕವಿತೆಗಳನ್ನು ಪ್ರಕಟಗೊಳ್ಳುವಂತೆ ನೋಡಿಕೊಂಡಿದ್ದರು. ಇದರಿಂದ ಆಗ ಇವರ ಮಿತ್ರರು ಕವಿ ಎಂದು ಕರೆಯಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿಯೇ ಸಿದ್ಧಲಿಂಗಯ್ಯನವರು ತಮ್ಮ ಮನೆಯ ಸಮೀಪವಿದ್ದ ಹರಿಶ್ಚಂದ್ರ ಘಾಟ್ ನಲ್ಲಿ ಕುಳಿತು ಕವಿತೆಗಳನ್ನು ಬರೆಯಲು ಶುರು ಮಾಡಿದರು. ಇಲ್ಲಿ ಕವಿತೆಗಳನ್ನು ಬರೆಯುವಾಗ ಸ್ಮಶಾನದ ಕಾರ್ಮಿಕ ಕವಿಗಳಿಗೆ ಟೀ ಕೊಡುವುದನ್ನು ಮರೆಯುತ್ತಿರಲಿಲ್ಲ.
ಸಿದ್ದಲಿಂಗಯ್ಯನವರು ಈ ವೇಳೆಗಾಗಲೇ ವಿಚಾರವಾದಿಯಾಗಿದ್ದರು. ಆದ್ದರಿಂದಲೇ ಸಮಾಜದಲ್ಲಿರುವ ಅಸ್ಪೃಶ್ಯತೆ, ಜಾತೀಯತೆ, ಬಡತನ ಇವುಗಳ ವಿರುದ್ಧ ಹೋರಾಡುವ ಹುಮ್ಮಸ್ಸು ಇವರಿಗಿತ್ತು. ಆದ್ದರಿಂದಲೇ ಹೆಚ್ಚು ಸಾಮಾಜಿಕ ಕವಿತೆಗಳನ್ನು ಬರೆಯತೊಡಗಿದರು. ಸಿದ್ದಲಿಂಗಯ್ಯನವರ ಕವಿತೆಗಳನ್ನು ಮೆಚ್ಚಿಕೊಂಡ ಡಾ. ಡಿ. ಆರ್. ನಾಗರಾಜ್ ಕಲಾ ಕಾಲೇಜಿನಲ್ಲಿ ಪ್ರಥಮ ಬಿ. ಎ .ಓದುತ್ತಿದ್ದರು. ಆಗ ಸಿದ್ದಲಿಂಗಯ್ಯನವರು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದರು. ಡಾ. ಡಿ. ಆರ್. ನಾಗರಾಜ್ ರವರು ಶೂದ್ರ ಶ್ರೀನಿವಾಸರನ್ನು ಕವಿಗಳಿಗೆ ಪರಿಚಯಿಸಿ, "ಶೂದ್ರ" ಪತ್ರಿಕೆಯಲ್ಲಿ ಸಿದ್ದಲಿಂಗಯ್ಯನವರ ಕವಿತೆಗಳನ್ನು ಪ್ರಕಟಿಸುವಂತೆ ಅನುವು ಮಾಡಿಕೊಟ್ಟರು.
ಕಾಳೇಗೌಡ ನಾಗವಾರ, ಡಾ. ಕೆ ಮರುಳ ಸಿದ್ದಪ್ಪ, ಪ್ರಸನ್ನ, ಕಿ.ರಂ. ನಾಗರಾಜ, ಕೆ. ವಿ. ನಾರಾಯಣ, ಬಸವರಾಜ ಕಲ್ಗುಡಿ ಇವರುಗಳ ಗಮನಕ್ಕೆ ಬಂದ ಸಿದ್ದಲಿಂಗಯ್ಯನವರ ಕವಿತೆಗಳು ಮೆಚ್ಚುಗೆ ಪಡೆದವು. ಕಿ. ರಂ. ನಾಗರಾಜ್ ಮತ್ತು ಡಿ ಆರ್ ನಾಗರಾಜ್ ಹಾಗೂ ಕಾಳೇಗೌಡ ನಾಗವಾರ ಇವರುಗಳು ಸೇರಿ 1975ರಲ್ಲಿ ಸಿದ್ದಲಿಂಗಯ್ಯನವರ ಕವಿತೆಗಳನ್ನು ಒಟ್ಟಾರೆ ಸೇರಿಸಿ ಕ"ಹೊಲೆ ಮಾದಿಗರ ಹಾಡು" ಎಂಬ ಹೆಸರಿನಲ್ಲಿ ಕವನ ಸಂಕಲನವನ್ನು ಪ್ರಕಟಿಸಿದರು. ಈ ಸಂಕಲನವನ್ನು ದಾವಣಗೆರೆಯಲ್ಲಿ ನಡೆದ ಪ್ರಗತಿಪಂಥ ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳಾದ ನಿರಂಜನ, ಬಸವರಾಜ ಕಟ್ಟಿಮನಿ, ಬಿಷಮ್ ಸಹನಿ ಅವರ ಸಮ್ಮುಖದಲ್ಲಿ "ಹೊಲೆ ಮಾದಿಗರ ಹಾಡು" ಸಂಕಲನ ಬಿಡುಗಡೆಯಾಯಿತು. ಒಂದೇ ವಾರದಲ್ಲಿ ಸಾವಿರ ಪ್ರತಿಗಳು ಮಾರಾಟವಾದವು ಮತ್ತೆ ಮತ್ತೆ ಮರುಮದ್ರಣವಾಗಿ ಇಲ್ಲಿಯವರೆಗೆ 50,000 ಪ್ರತಿಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ.
ನಂತರದಲ್ಲಿ ಸಿದ್ದಲಿಂಗಯ್ಯನವರ ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಕುದಿಯುವ ನೀಲಿಯ ಕಡಲು, ಊರು ಸಾಗರವಾಗಿ ಅವರ ಸಂಕಲನಗಳು ಪ್ರಕಟವಾದವು. ಸಿದ್ದಲಿಂಗಯ್ಯನವರ ಕವಿತೆಗಳಿಗೆ ಮಾಗಡಿ, ಮಾವಳ್ಳಿ, ಶ್ರೀರಾಂಪುರ, ಸ್ವತಂತ್ರ ಪಾಳ್ಯ, ಅವ್ವೇರಹಳ್ಳಿ, ಸಾವನದುರ್ಗ, ಮಂಚನಬೆಲೆ, ಕಲಾಸಿಪಾಳ್ಯ ಪ್ರೇರಣಾ ಸ್ಥಳಗಳಾಗಿದ್ದವು. ಸಮುದಾಯದ ವಾರ್ತಾಪತ್ರದ ಸಂಪಾದಕಿಯಾಗಿದ್ದ ಮಾಲತಿಯವರು ಸಿದ್ದಲಿಂಗಯ್ಯನವರಿಂದ ಬರೆಸಿದ "ಅವತಾರಗಳು" ಲೇಖನಗಳನ್ನು ತಮ್ಮ ಪತ್ರಿಕೆಯಲ್ಲಿ ದಾರವಾಹಿಯಂತೆ ಪ್ರಕಟಿಸಿದರು. ನಂತರ ಲೇಖಕರಾದ ರಾಮಚಂದ್ರದೇವ ಅವರಿಂದ ಪ್ರಜಾವಾಣಿಯಲ್ಲೂ ಪ್ರಕಟವಾಯಿತು. ಡಾ. ಕರಿಗೌಡ ಬೀಚನಹಳ್ಳಿ ಮತ್ತು ಕೆ. ಎಚ್. ರಾಮಯ್ಯನವರು ಸಿದ್ದಲಿಂಗಯ್ಯನವರ ಕವಿತೆಗಳನ್ನು ಸೇರಿಸಿ "ಕಪ್ಪು ಕಾಡಿನ ಹಾಡು" ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಪ್ರಕಾಶ್ ಕಂಬತ್ತಳ್ಳಿ ಅವರು ಸಿದ್ದಲಿಂಗಯ್ಯನವರು ಬರೆದ ಕವನ ಸಂಕಲನ "ಕುದಿಯುವ ನೀಲಿಯ ಕಡಲು" ಮತ್ತು ಅನುಭವ ಲೇಖನಗಳಾದ ಊರುಕೇರಿ 3 ಭಾಗಗಳನ್ನು ಪ್ರಕಟಿಸಿದರು. (ಮುಂದುವರೆಯುವುದು...)
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು - 560056
ಮೊಬೈಲ್ ನಂ:9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments