"ಫೇಸುಬುಕ್ಕು-ವಾಟ್ಸಾಪಿನಲ್ಲಿ ನಿತ್ಯ ಕವಿತೆ ಗೀಚಿ ಸಾಧಿಸಿದ್ದೇನು..?" - ಎನ್ನುವವರಿಗೊಂದು ವಾಸ್ತವ ಘಟನೆಗಳ ಉತ್ತರ..
ಇದು ಅಂತರ್ಜಾಲದ ಅಕ್ಷರ ಪ್ರೀತಿಯ ಸತ್ಯ ಸಾಕ್ಷಾತ್ಕಾರ..
ಗೊಮ್ಮಟಗಳ ನಗರಿಯಲ್ಲಿ.. ದಕ್ಕಿದ್ದು.. ಸಿಕ್ಕಿದ್ದು.. ಕಂಡಿದ್ದು.. ಕೇಳಿದ್ದು.. ಬರೀ ಪ್ರೀತಿ.. ಪ್ರೀತಿ..
ಅಕ್ಷರಬಂಧುಗಳ ಅಕ್ಷರಶಃ ಅಕ್ಷರಪ್ರೀತಿಯ ಅಮೃತಧಾರೆ..
1. “ಗುಬ್ಬಿ ಸಾರ್ ಮತ್ತು ನಿಮ್ಮನ್ನು ಕಂಡು ತುಂಬಾ ಖುಷಿ ಅಯ್ತು.. ನಿಮಗಾಗಿ ಇದನ್ನು ತಂದಿದ್ದೇನೆ” ಎಂದು ವೈಷ್ಣವಿ ಎನ್ನುವ ಅಕ್ಷರಬಂಧು, ಚಟ್ನಿಪುಡಿಯ ದೊಡ್ಡ ಡಬ್ಬವನ್ನೇ ನನ್ನ ಶ್ರೀಮತಿಯವರ ಕೈಯ್ಯಲ್ಲಿಟ್ಟಾಗ.. ಕಣ್ತುಂಬಿ ಬಂದು ನಮಸ್ಕರಿಸಿದೆ ಅಷ್ಟೆ..
2. “ರಮೇಶ್ ಸಾರ್.. ನಿಮ್ಮನ್ನು ನೋಡಲೆಂದೇ ತುರ್ತು ಕೆಲಸಗಳ ನಡುವೆ ಅರ್ಧಗಂಟೆ ಪರ್ಮಿಶನ್ ತೆಗೆದುಕೊಂಡು ಬಂದೆ.” ಎಂದು ಶಾಸಕರ ಆಪ್ತ ಸಹಾಯಕ ಶ್ರೀ ಜಗದೀಶ್ ಹೇಳುವಾಗ.. ಕಣ್ಣಾಲಿಗಳಲ್ಲಿ ತೇವವಾಗಿ.. ಕಣ್ಮುಚ್ಚಿ ನಮಸ್ಕರಿಸಿದೆ ಅಷ್ಟೆ.
3. “ಗುಬ್ಬಿ ಸಾರ್.. ನಿಮ್ಮ ಭೇಟಿಗಾಗಿಯೇ ಬಂದಿದ್ದೇನೆ..” ಎಂದು ಕೂಡಲಸಂಗಮದ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಶಿವಾನಂದ್ ಕೈಕುಲುಕುವಾಗ, ಆನಂದದ ಹನಿಗಳೊಂದಿಗೆ ಕೈಮುಗಿದು ನಿಂತೆ ಅಷ್ಟೆ..
4. “ಗುಬ್ಬಿ ಸಾರ್.. ನೀವು ಬರುತ್ತೀರೆಂದು ಮನೆಯವರು, ಮಗಳು ಎಲ್ಲರನ್ನು ಕರೆತಂದಿದ್ದೇನೆ..” ಎಂದು ಎಸ್.ಎಮ್. ಪಾಟೀಲ್ ಮೇಡಂ ಕುಟುಂಬವನ್ನು ಪರಿಚಯಿಸುವಾಗ.. ಹನಿಗಣ್ಣಾಗಿ ಕರಜೋಡಿಸಿ ನಿಂತೆ ಅಷ್ಟೆ..
5. “ಸಾರ್ ಬಹಳ ವರ್ಷಗಳಿಂದ ನಿಮ್ಮ ಕವಿತೆಗಳನ್ನು ಓದುತ್ತಿದ್ದೆ. ಇವತ್ತು ನಿಮ್ಮನ್ನು ಎದುರಿಗೆ ಕಣ್ಣಾರೆ ನೋಡುತ್ತಿದ್ದೇನೆ..” ಎಂದು ಆರೋಗ್ಯ ಇಲಾಖೆಯ ಪ್ರಕಾಶ್ ಪರಿಚಯಿಸಿಕೊಳ್ಳುವಾಗ.. ಒದ್ದೆ ಕಂಗಳಿಂದ ಕೈಜೋಡಿಸಿ ನಿಂತಿದ್ದೆ..
6. “ನಿಮ್ಮನ್ನು ಕಂಡು.. ನಿಮಗೆ ಈ ಪುಸ್ತಕ ಕೊಡಲೆಂದೇ ಬಂದಿದ್ದೇನೆ..” –ಎಂದು ಹಿರಿಯ ಸಾಹಿತಿ ನಾಗೇಶ್ ಕುಲಕರ್ಣಿಯವರು ಬಿಗಿದಪ್ಪಿದ್ದಾಗ.. ಕಂಗಳಲ್ಲಿ ಆನಂದಭಾಷ್ಪ ಅಷ್ಟೇ..
7. “ನಿಮ್ಮ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆಂದೇ ಹುನಗುಂದದಿಂದ ಬಂದಿದ್ದೇವೆ..” ಎಂದು ಶ್ರೀ ಅಶೋಕ್ ಭಾವಿಕಟ್ಟಿ ಹಾರೈಸಿದಾಗ.. ಕಂಗಳು ತುಳುಕಿ, ಕರಮುಗಿದು ನಿಂತಿದ್ದೆ ಅಷ್ಟೆ..
8. “ರಮೇಶ್ ಗುಬ್ಬಿಯವರೇ.. ನಿಮ್ಮ ಕವಿತೆಗಳನ್ನು ನಿತ್ಯವೂ ಓದುತ್ತೇನೆ. ಅದ್ಭುತವಾಗಿ ಬರೆಯುತ್ತೀರಾ.. ನಿಮಗೆ ಕರೆಮಾಡಬೇಕೆಂದು ಅಂದುಕೊಳ್ಳುತ್ತಿದ್ದೆ. ನಿಮ್ಮನ್ನು ಇಂದು ಕಂಡು ಸಂತಸವಾಯಿತು.. ನಿಮ್ಮ ಕಾವ್ಯದಲ್ಲೊಂದು ಧ್ವನಿಯಿದೆ..” ಎಂದು ಶ್ರೀ ಶ್ರೀ ಜಗದೇವ ಸ್ವಾಮೀಜಿಯವರು ಅಕ್ಕರೆಯಿಂದ ಆಶೀರ್ವದಿಸುವಾಗ.. ಕಣ್ತುಂಬಿ, ಹೃನ್ಮನ ತುಂಬಿ. ಕರಜೋಡಿಸಿ ಶ್ರೀಗಳ ಕಾಲಿಗೆರಗಿ ಶರಣಾಗಿದ್ದೆ ಅಷ್ಟೇ..
9. "ಗುಬ್ಬಿ ಸಾರ್.. ನೀವು ಬಂದಿದ್ದು ಬಹಳ ಆನಂದ ಆಯ್ತು.." ಎಂದು ಸಮ್ಮೇಳನಾಧ್ಯಕ್ಷರಾದ ಪ್ರಖ್ಯಾತ ಸಾಹಿತಿಗಳು, ಪ್ರಖಾಂಡ ಜಾನಪದ ವಿದ್ವಾಂಸರೂ ಆದ ಡಾ.ಪ್ರಕಾಶ್ ಖಾಡೆ ಸಾರ್ ಆದರದಿಂದ ಆಲಂಗಿಸಿ.. ಅಕ್ಕಪಕ್ಕದಲ್ಲಿದ್ದವರಿಗೆಲ್ಲ "ನಮ್ಮ ಗುಬ್ಬಿ ಸಾರ್ ತುಂಬಾ ಚೆಂದ ಬರೆಯುತ್ತಾರೆ.." ಎಂದು ಹೆಮ್ಮೆಯಿಂದ ಪರಿಚಯಿಸುವಾಗ, ಆ ಮೇರು ಚೇತನದೆದುರು ಹನಿಗಣ್ಣಾಗಿ ಕೈಯೆತ್ತಿ ಮುಗಿದು ನಿಂತಿದ್ದೆ ಅಷ್ಟೇ..
10. ಚಹಾ ಕುಡಿಸಲು ಕರೆದುಕೊಂಡು ಹೋಗಿ, ಅಂಗಡಿಯೆದುರಲ್ಲೇ 15-20 ಸಹೃದಯರು ನಡುಬೀದಿಯಲ್ಲೇ ಶಾಲು, ಹಾರ, ಪುಸ್ತಕನೀಡಿ ಸತ್ಕರಿಸಿದಾಗ.. ಕಂಗಳು ತುಂಬಿಬಂದು, ಮಾತಿಲ್ಲದೆ ಮೂಕವಿಸ್ಮಿತನಾಗಿದ್ದೆ ಅಷ್ಟೇ...
ಎರಡೂ ದಿನ ಮನೆಮಗನನ್ನು ಆರೈಸುವಂತೆ ಅಡಿಗಡಿಗೂ ಪ್ರೀತಿ, ಆಸ್ಥೆಯಧಾರೆಯನ್ನೇ ಹರಿಸಿದ ಶ್ರೀ ಸಿದ್ದರಾಮ ಬೀರಾದಾರ್ ಸಾರ್, ದಿನವೆಲ್ಲ ಜೊತೆಗಿದ್ದ ಪ್ರಾಚಾರ್ಯರಾದ ಅಡವಿಸ್ವಾಮಿ ಕೊಳಮಲಿ ಸಾರ್, ಮಹದೇವ ಬಾಸರಕೋಡ್ ಸಾರ್, ಉಪುಲದಿನ್ನಿ ಸಾರ್, ಆತ್ಮೀಯ ಕಾಶಿನಾಥ್ ಖಾಡೆ ಸಾರ್, ಬಸವರಾಜ್ ಬೀರಾದಾರ್ ಸಾರ್, ಮನಸಾರೆ ಆಶೀರ್ವದಿಸಿದ ಕಾಸರಗೋಡಿನ ರಾಧಾಕೃಷ್ಣ ಸಾರ್, ‘ಕಾರ್ಯಕ್ರಮ ಮುಗಿಸಿ ಸೀದಾ ನಮ್ಮ ಮನೆಗೆ ಬಂದು ಉಳಿದುಬಿಡಿ” ಎಂದು ಆಗ್ರಹಿಸಿದ ಶಂಕರ್ ಬೈಚಬಾಳ್ ಸಾರ್, “ರಾತ್ರಿ ಪ್ರಯಾಣ ಬೇಡ.. ನಮ್ಮ ಮನೆಗೆ ನಡೆಯಿರಿ” ಎಂದು ಒತ್ತಾಯಿಸಿದ ಆತ್ಮೀಯ ಡಾ.ಮುರುಗೇಶ್ ಸಂಗಮ್ ಸಾರ್.. ಶಿರ ನೇವರಿಸಿ ಮನಸಾರೆ ಆಶೀರ್ವದಿಸಿದ ಮೇರು ಸಾಹಿತಿ ಶ್ರೀ ಫ.ಗು.ಸಿದ್ದಾಪುರ ಸಾರ್..
ಹೇಳುತ್ತಾ ಹೋದರೆ.. ಅದೆಷ್ಟು ಹೆಸರುಗಳು, ಮಮತೆಯ ಅದೆಷ್ಟು ಉಸಿರುಗಳು.. ಹರಸಿ ಹಾರೈಸಿದ ಅಸಂಖ್ಯ ಜೀವಭಾವಗಳು..
ಗೊಮ್ಮಟ ನಗರಿ ಬಿಜಾಪುರದಲ್ಲಿ ಪುಸ್ತಕ ಪರಿಷತ್ತಿನ ಪ್ರತಿಷ್ಠಿತ ಪುರಸ್ಕಾರ, ಪುಸ್ತಕ ಜಗದ್ಗುರು ‘ಶ್ರೀ ಸಿದ್ದಲಿಂಗ ಶ್ರೀ’ ಪಡೆದ ಅವಿಸ್ಮರಣೀಯ ದಿನದಲ್ಲಿ ಸಿಕ್ಕಿದ್ದು.. ದಕ್ಕಿದ್ದು.. ಅಪೂರ್ವ ಅಕ್ಷರಬಂಧುಗಳ ಪ್ರೀತ್ಯಾಮೃತದ ಭಾವಶರಧಿ. ಇದುವರೆಗೂ ಮುಖವನ್ನೇ ನೋಡಿರದೆ, ಅಂತರ್ಜಾಲದ ಅಕ್ಷರಬಂಧದಿಂದ ಬೆಸೆದುಕೊಂಡ ಹೃದಯಗಳ ಅಕ್ಕರೆಯಾಂಬುಧಿ. ಸ್ಮರಣೀಯ ಕ್ಷಣಗಳ ರಸಧಾರೆ.. ಕಣ್ಣಂಚಲ್ಲಿನ್ನೂ ಜಿನುಗಿದೆ ಆನಂದಭಾಷ್ಪಧಾರೆ..
ಇಂತಹ ಮರೆಯಲಾರದ ಮಧುರದಿನಕ್ಕೆ ಕಾರಣರಾದ ಪುಸ್ತಕ ಪರಿಷತ್ತಿನ ಸಮಸ್ತ ಪದಾಧಿಕಾರಿಗಳಿಗೂ ನಾನು ಚಿರಋಣಿ. ಮುಖಾಮುಖಿಯಾಗಿ ಹೃದಯದಂಗಳವನ್ನು ಬೆಳದಿಂಗಳಾಗಿಸಿದ ಪ್ರತಿಯೊಬ್ಬರಿಗೂ ನಾನು ಆಭಾರಿ. ನಿತ್ಯ ಬರೆಸುತ್ತ, ಹಾರೈಸುತ್ತ ಈ ಎಲ್ಲ ಸಂಭ್ರಮಕ್ಕೆ ಕಾರಣರಾಗಿರುವ ನಿಮಗಿದೋ ಹೃತ್ಪೂರ್ವಕ ಧನ್ಯವಾದಗಳೊಂದಿಗೆ, ಅನನ್ಯ ಕ್ಷಣಗಳ ದೃಶ್ಯಗುಚ್ಚವನ್ನು ನಿಮ್ಮ ಅಂಗೈಯಲ್ಲಿಡುತ್ತಿದ್ದೇನೆ.. ಒಪ್ಪಿಸಿಕೊಳ್ಳಿ... “ - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments