ನೀನಿಲ್ಲದೆ ನಾನಿಲ್ಲ.!

 “ಇದು ನಮ್ಮ ಅವನ ಅವಿನಾಬಂಧದ ಕವಿತೆ.  ಅಗೋಚರ ಶಕ್ತಿ, ನಶ್ವರ ವ್ಯಕ್ತಿಗಳ ನಡುವಿನ ಶಾಶ್ವತ ಬೆಸುಗೆಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ವ್ಯಕ್ತ, ಅವ್ಯಕ್ತರ ನಡುವಿನ ನಿವೇದನೆಯಿದೆ. ಅರ್ಥೈಸಿದಷ್ಟೂ ಭಾವಾಂತರಂಗದ ಸಂವೇದನೆಯಿದೆ. ಅರಿತಷ್ಟೂ ಬದುಕು-ಬೆಳಕಿನ ಆರಾಧನೆಯಿದೆ. ಅಂತರ್ಜಾಲದಿ ಕಂಡ "THERE'S MO ME, WITHOUT YOU" ಎಂಬೆರಡು ಸಾಲುಗಳೇ ಈ ಕವಿತೆಗೆ ಕಾರಣ, ಪ್ರೇರಣ. ಅದೆಷ್ಟು ಅಗಾಧ ಅರ್ಥವಿದೆ ಈ ಸಾಲುಗಳಲ್ಲಿ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ನೀನಿಲ್ಲದೆ ನಾನಿಲ್ಲ.!



ನೀನೆ ನನ್ನೊಳಗಿನ ಜೀವತ್ವ

ನೀನಿಲ್ಲದೆ ನನಗೆಲ್ಲಿದೆ ಅಸ್ತಿತ್ವ.?

ನಿನೇ ಈ ಬದುಕಿನ ನಿತ್ಯ ಸತ್ವ

ನಿನ್ನಿಂದಲೇ ಆ ಬೆಳಕಿನ ತತ್ವ.!


ನಿನ್ನದೇ ಕಡಲು ಮಳೆಮುಗಿಲು

ನಿನ್ನದೇ ನನ್ನೊಳಗಿನ ಒಡಲು

ನಿನ್ನದೇ ಸುಳಿಗಾಳಿ ತೂಗುಹಸಿರು

ನಿನ್ನದೇ ಒಳಗಣ ಪ್ರಾಣದುಸಿರು.! 


ಅಡಿಗಡಿಗು ನಿನ್ನದೇ ಒಲವು

ಕಣಕಣಕು ನಿನ್ನದೇ ಬಲವು

ಹೊರಗೆ ನಿನ್ನದೇ ಕಾರುಣ್ಯ

ನನ್ನೊಳಗೆ ನಿನ್ನದೇ ಚೈತನ್ಯ.!


ನೀನೇ ಬಾಹ್ಯದ ಸೌಂದರ್ಯ

ನೀನೆ ಅಂತರಂಗ ಮಾಧುರ್ಯ

ನೀನೇ ಜೀವದ ಆಂತರ್ಯ

ನೀನೇ ಜೀವನಕೆ ಔದಾರ್ಯ.!


ನೀನೇ ಪರಮಾತ್ಮನೆಂಬ ಸಿಂಧು

ನಿನ್ನಿಂದಲೇ ಆತ್ಮವೆಂಬ ಬಿಂದು

ನೀನೇ ನರ-ನರದ ಸಂಚಲನ

ನೀನೆ ಸ್ವರ-ಸ್ವರದ ಸಂಕೀರ್ತನ.!


ನಿನ್ನಿಂದಲೇ ನನ್ನಿರುವು ಉಳಿವು

ನಿನ್ನಿಂದಲೇ ನನ್ನಯಾ ಅಳಿವು

ನಿನ್ನಿಂದಲೇ ಪಂಚಭೂತ ಹರಿವು

ನಿನ್ನಿಂದಲೇ ಪಂಚೇಂದ್ರಿಯ ಅರಿವು.! 


ನಿನೇ ಜೀವಭಾವಗಳ ಝೇಂಕಾರ

ನಿನ್ನಿಂದಲೇ ಬೆಳಕು ಭಾಷ್ಯ ಸಾಕಾರ

ನಿನ್ನೊಡನೆಯೇ ಅವಿನಾಬಂಧ ನಂಟು

ನೀನಿಲ್ಲದೆ ನಾನಾದರೂ ಎಲ್ಲುಂಟು.?


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments