"ಗೀತೆ ಬೋಧಿಸಿದವನಿಗೊಂದು ಕವಿತೆ" - ಕೃಷ್ಣಾರ್ಪಣಮಸ್ತು..
ಬುವಿಯ ಬದುಕುಗಳಿಗೆ ಬ್ರಹ್ಮಾಂಡದ ಸತ್ವ, ತತ್ವ, ಮಹತ್ವಗಳ ಸಾರ ಸಾರುತ, ಬೆಳಕಿನ ಭಗವದ್ಗೀತೆ ಬೋಧಿಸಿದವನ ಸ್ತುತಿಸುತ, ಗೀತಾ ಜಯಂತಿಯಂದು ಅವನ ಅನಂತ ಕಾರುಣ್ಯದೆದುರು ಅರ್ಪಿಸಿದ ಕಾವ್ಯಪ್ರಣತಿ. ಒಪ್ಪಿಸಿಕೋ ಕೃಷ್ಣ... " - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಅಚ್ಯುತ - ಅನಂತ.!
ದೇಹದ ಕೊಳಲಿಗೆ
ಜೀವದ ಉಸಿರಿಟ್ಟು
ಬದುಕಿನ ನಾದ
ಹೊಮ್ಮಿಸಿದವನು.!
ಕಾಯದ ಬತ್ತಿಗೆ
ಆಯುಷ್ಯದ ತೈಲವಿಟ್ಟು
ಆತ್ಮದ ಜ್ಯೋತಿ
ಬೆಳಗಿದವನು.!
ಜೀವವೆಂಬ ಲೇಖನಿಗೆ
ಭಾವದ ಶಾಯಿಯಿಟ್ಟು
ಬಾಳಿನ ಕವಿತೆ
ಮೂಡಿಸಿದವನು.!
ಜೀವನ ನೌಕೆಗೆ
ದಿಕ್ಕು ದೆಸೆಗಳನಿಟ್ಟು
ಸಾರ್ಥದ ತೀರಕೆ
ನಡೆಸುವವನು.!
ಬೆವರಿನ ಸೆಲೆಯಲ್ಲು
ಕಂಬನಿ ಅಲೆಯಲ್ಲು
ನೆತ್ತರ ನೆಲೆಯಲ್ಲು
ನಿಂತು ನಗುವವನು.!
ಸುಜ್ಞಾನದ ಒಲವಾಗಿ
ಸಂಪ್ರೀತಿಯ ಬಲವಾಗಿ
ಸತ್ಯಧರ್ಮದ ಗೆಲುವಾಗಿ
ಬುವಿಯ ಪೊರೆವವನು.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments