"ಇದು ನಮ್ಮ ನಿಮ್ಮದೇ ಒಳಗಿನ ego ವನ್ನು ಅನಾವರಣಗೊಳಿಸುವ ಕವಿತೆ. ನಮ್ಮನ್ನು ದಿಕ್ತಪ್ಪಿಸುವ ನಮ್ಮೊಳಗಿನ ಆತ್ಮರತಿ, ಅಹಮಿಕೆಗಳ ವಿಡಂಬಿಸುವ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಜೀವ-ಜೀವನಗಳ ಕಟುವಾಸ್ತವವನ್ನು ಅರಿತುಕೊಂಡರೆ, ಬದುಕು-ಬೆಳಕಿನ ಸತ್ವ ತತ್ವಗಳನ್ನು ಅರ್ಥೈಸಿಕೊಂಡರೆ ಸತ್ಯದ ಸಾಕ್ಷಾತ್ಕಾರ. ಕಳೆವುದು ಭ್ರಮೆ-ಭ್ರಾಂತಿಯ ಅಂಧಕಾರ. ಏನಂತೀರಾ..? - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ನೀನೇ ನೀನಲ್ಲ..!
ಭಾಷೆ ನಿನದಲ್ಲ ಲಿಪಿ ನಿನದಲ್ಲ
ಕೂಡಿಸಿ ಬರೆದ ಸೆಲೆಯಷ್ಟೆ ನಿನದು
ನಾನೇ ಮಿಗಿಲೆಂಬ ಮದವೇಕೋ.?
ಹೂವು ನಿನ್ನದಲ್ಲ ದಾರ ನಿನ್ನದಲ್ಲ
ಪೋಣಿಸುವ ಕಲೆಯಷ್ಟೆ ನಿನದು
ನಾನೇ ಹಾರವೆಂಬ ಜಂಭವೇಕೋ.?
ಶೃಂಗ ನಿನದಲ್ಲ ಹಾದಿ ನಿನದಲ್ಲ
ಏರಿದಾ ನಡೆಯಷ್ಟೆ ನಿನದು
ನಾನೇ ಶಿಖರವೆಂಬ ಹುಂಬತನವೇಕೋ.?
ಪಾಯ ನಿನದಲ್ಲ ಸೂರು ನಿನದಲ್ಲ
ನಡುವಿನ ಬದುಕಷ್ಟೆ ನಿನದು
ಸೌಧವೇ ನನದೆಂಬ ಮೌಢ್ಯವೇಕೋ.?
ಭೂತ ನಿನದಲ್ಲ ಭವಿಷ್ಯ ನಿನದಲ್ಲ
ಈದಿನ ಈಕ್ಷಣವಷ್ಟೆ ನಿನದು
ನಾನೇ ಅಮರನೆಂಬ ಜಾಡ್ಯವೇಕೋ.?
ಕಾಲ ನಿನದಲ್ಲ ಕಾಯ ನಿನದಲ್ಲ
ನಾಲ್ಕುದಿನದ ಉಸಿರಷ್ಟೆ ನಿನದು
ನಾನೇ ಸ್ಥಿರವೆಂಬ ಭ್ರಾಂತಿಯೇಕೋ.?
ಬತ್ತಿ ನಿನದಲ್ಲ ತೈಲ ನಿನದಲ್ಲ
ಹೊತ್ತಿಸಿದ ಕಿಡಿಯಷ್ಟೆ ನಿನದು
ನಾನೇ ಬೆಳಕೆಂಬ ಭ್ರಮೆಯೇಕೋ.?
ಆಚೆ ನೀನಿಲ್ಲ ಈಚೆಯೂ ನೀನಿಲ್ಲ
ನಿನ್ನೊಳಗಿನ ನೀನೇ ನೀನಲ್ಲ
ನಾನು ನನದೆಂಬ ಭುಕ್ತಿಯೇಕೋ.?
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments