ಸಾಹಿತ್ಯ ಕೃಷಿಯ ಪ್ರಾರಂಭದಲ್ಲಿಯೇ ಕರಗಿ ಹೋದ ಕವಿ
ಡಾ. ಸಿ.ಎಂ. ಪರಶಿವಪ್ಪ
"ಪ್ರೀತಿ ಸಂಪದ" ಡಾ.ಸಿ.ಎಂ. ಪರಶಿವಪ್ಪನವರ ಸಮಗ್ರ ಬರಹಗಳಾಗಿವೆ. ವಿಚಾರವಂತರು, ವಿನಯಶೀಲರು ಆಗಿರುವ ಡಾ. ಸಿ.ಎಂ. ಪರಶಿವಪ್ಪನವರು ಕವಿ ಸಿದ್ದಲಿಂಗಯ್ಯನವರ ಆಪ್ತರಲಿ ಒಬ್ಬರಾಗಿದ್ದರು. ಸಮುದಾಯದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡ ವ್ಯಕ್ತಿ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ, ಚಿಕ್ಕಬಾಗಿಲು ಗ್ರಾಮದಲ್ಲಿ. ತಂದೆ ಮರಿಮಾದಯ್ಯ, ತಾಯಿ ಜಯಮ್ಮರ ಎರಡನೇ ಮಗನಾಗಿ 20-07-1977 ರಲ್ಲಿ ಜನಿಸಿದರು. ಇವರದು ಬಡತನದ ಕುಟುಂಬ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಮುಗಿಸಿ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ. ಗಂಗಾಧರ್ ಅವರ ಮಾರ್ಗದರ್ಶನದಲ್ಲಿ "ಮಳವಳ್ಳಿ ತಾಲೂಕಿನ ಜನಪದ ಪುರಾಣ ಮತ್ತು ಐತಿಹ್ಯಗಳು ಒಂದು ಸಾಂಸ್ಕೃತಿಕ ಅಧ್ಯಯನ" ಎಂಬ ಪ್ರಬಂಧವನ್ನು 2011-12ನೇ ಸಾಲಿನಲ್ಲಿ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಬೆಂಗಳೂರಿನ ಪಾಪರೆಡ್ಡಿಪಾಳ್ಯದ ಸೆಂಟ್ ಜಾನ್ಸ್ ಸಂಸ್ಥೆಯ ಎನ್‌ಆರ್‌ಐ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಡಾ. ಸಿ.ಎಂ. ಪರಶಿವಪ್ಪನವರು ದಿನಾಂಕ 04-06-2017 ರಲ್ಲಿ ಮದ್ದೂರು ತಾಲೂಕಿನ, ಕೆ ಎಂ ದೊಡ್ಡಿ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು. ನಂತರದ ದಿನಗಳಲ್ಲಿ ಡಾ. ಸಿ. ಎಂ. ಪರಶಿವಪ್ಪನವರ ಬರವಣಿಗೆಗಳನ್ನು ಹುಡುಕಾಡಿದಾಗ ಸಾಹಿತ್ಯ ಕೃಷಿಯಲ್ಲಿ ಆಗತಾನೇ ಬರೆಯಲು ಪ್ರಾರಂಭಿಸಿದರು ಎಂದು ತಿಳಿಯಿತು. ಅವರು ಬರೆದ ಹನ್ನೊಂದು ಕವಿತೆಗಳು, ಐದು ಹನಿಗವನಗಳು, 6 ಲೇಖನಗಳು ಮಾತ್ರ ನಮಗೆ ದೊರೆತವು. ಇವುಗಳ ಸಂಗ್ರಹವೇ "ಪ್ರೀತಿ ಸಂಪದ"
ಡಾ. ಸಿ. ಎಂ. ಪರಶಿವಪ್ಪನವರು ಬರೆದ ಕವಿತೆಗಳಲ್ಲಿ ನಿಜಕ್ಕೂ ಸಾವಿನ ಸೂತಕದ ಅನುಮಾನ ಹುಟ್ಟುತ್ತವೆ. ಬರೆದಿರುವ ಹನ್ನೊಂದು ಕವಿತೆಗಳಲ್ಲಿ "ಅಂತರಂಗದ ಅಳಲು" "ಆಶಾವಾದಿ" "ಕಾಡುತೈತೆ ನೆನಪು" ಪ್ರೇಮ ಕವಿತೆಗಳಾದರೂ ಇಲ್ಲಿ ವಿರಹವೇದನೆ, ನಿರಾಸೆ, ಸಾವಿನ ನೆರಳು ಕವಿಯನ್ನು ಕಾಡಿರುವುದನ್ನು ನಾವು ಗಮನಿಸಬಹುದು. "ಅಂತರಂಗದ ಅಳಲು" ಕವಿತೆಯ ಈ ಸಾಲುಗಳನ್ನು ನೋಡುವುದಾದರೆ,
"ನೀನು ಹೋಗುವ ಮುನ್ನ
ನನ್ನ ಮರೆತು ನೀನು ಹೋಗುವ ಮುನ್ನ
ಚಿಗುರಿದ ಕನಸುಗಳಿಗೆ
ತಿಳಿಹೇಳಿ ಹೋಗು
ನನ್ನೆದೆಯ ಗುಡಿಯಲ್ಲಿ
ನೀ ತುಂಬಿದ ಬೆಳಕ ಅಳಿಸಿ ಹೋಗು
ನನ್ನ ನಂಬಿಕೆಗಳಿಗೆ
ಬೆಂಕಿ ಹಚ್ಚಿ ಸುಟ್ಟು ಹೋಗು
ನಿನ್ನ ನಗುವ ಕಾದಿರುವ
ಈ ಹೃದಯ ಬಡಿತಗಳ ನಿಲ್ಲಿಸಿ ಹೋಗು".
ಎನ್ನುವ ಇಲ್ಲಿನ ದಿಟ್ಟ ಸಾಲುಗಳು ಕವಿಯನ್ನು ಬಿಟ್ಟು ಹೋಗುವ ಪ್ರೀತಿ ಅಥವಾ ಸತ್ತು ಹೋಗುವ ಜೀವನದ ಭಯ ತುಂಬಾ ಕಾಡಿರುವುದನ್ನು ನಮಗೆ ತಿಳಿಸುತ್ತವೆ.
"ಆಶಾವಾದಿ" ಎನ್ನುವ ಕವಿತೆಯಲ್ಲಿ ಕವಿ ತನಗೆಟುಕದ ಪ್ರೀತಿಗಾಗಿ ಹಂಬಲಿಸುವುದನ್ನು ನಾವು ಇಲ್ಲಿ ಕಾಣಬಹುದು. ಅದಕ್ಕೆ ಸಾಕ್ಷಿಯಾಗಿ ಈ ಕೆಳಗಿನ ಸಾಲುಗಳು ತಿಳಿಸುತ್ತವೆ.
"ಲೋಕದ ಪುಣ್ಯವೆಲ್ಲ ನಿನ್ನಲ್ಲಿರಿಸಿ
ನನ್ನ ಆತ್ಮದ ಪ್ರತಿಬಿಂಬವು ಭಾವನೆಗಳ
ಆಸೆ ಹೊತ್ತು ಬಂದಾಗ ನೀನೊಂದು
ನಿಲುಕದ ನಕ್ಷತ್ರವಾದೆಯಾ ಗೆಳತಿ".
ಎನ್ನುವ ಸಾಲುಗಳು ನಿಜಕ್ಕೂ ಕಳೆದುಕೊಳ್ಳುತ್ತಿರುವ ಪ್ರೀತಿಯ ಬಗ್ಗೆ ಕವಿ ಚಡಪಡಿಸಿರುವುದನ್ನು ನಾವು ಇಲ್ಲಿ ಗಮನಿಸಬಹುದು.
ಕವಿ ಡಾ. ಸಿ.ಎಂ ಪರಶಿವಪ್ಪನವರು ಸತ್ತ ಮೇಲೂ ಪ್ರೀತಿಗಾಗಿ ಹಂಬಲಿಸಿರುವುದನ್ನ "ಕಾಡತೈತೆ ನೆನಪು" ಕವಿತೆಯ ಈ ಸಾಲುಗಳು ನಮಗೆ ತಿಳಿಸುತ್ತವೆ.
"ಬಾಳಲ್ಲಿ ಬೆಳದಿಂಗಳಾಗಿ ಬರುವ
ಓ ಚೆಲುವೆ ನೀ ಎಲ್ಲಿರುವೆ
ಅಂತರಂಗದೊಳಗೆ ಹಾಡಾಗಿ ನಿಂತ
ಓ ಗೆಳತಿ ನೀ ಸಿಗಲಾರೆಯೇನು
ಪಂಚಭೂತಗಳಿಗೆ ಅರ್ಜಿ ಸಲ್ಲಿಸಿ
ಆತ್ಮವೇ ಅಲೆಯುತ್ತಿದೆ ನಿನಗಾಗಿ".
ಈ ಮಾತುಗಳು ನಿಜಕ್ಕೂ ಪ್ರೀತಿಯ ಶಕ್ತಿಯನ್ನ ನಮಗೆ ತಿಳಿಸುತ್ತದೆ.
"ಅನುಮಾನ" ಕವಿತೆಯಲ್ಲೂ ಕವಿ
"ಅನುಮಾನದ ಸುಳಿಯಲ್ಲಿ ಸಿಲುಕಿ
ಮೌನವಾಯಿತೆ ಮನಸು, ಭಗ್ನವಾಯಿತೇ ಕನಸು, ನುಂಗಿದೆ ಜೀವ ಮುದುಡಿದೆ ದೇಹ" ಎಂದು ಬರೆದಿರುವುದನ್ನು ಕಂಡಾಗ ಅವರು ಅರಸುವ ಪ್ರೀತಿ ಅನುಮಾನದ ಸುಳಿಯಲ್ಲಿ ಸಿಲುಕಿ ಎಷ್ಟೆಲ್ಲ ನೋವನ್ನು ಕೊಟ್ಟಿದೆ ಎಂಬುದನ್ನು ಕವಿತೆ ನಮ್ಮ ಅರಿವಿಗೆ ತರುತ್ತದೆ.
"ನಿನ್ನ ನೋಟದ ಪರಿಯೇನು?" ಹಾಗೂ "ನನ್ನವಳು" ಕವಿತೆಗಳಲ್ಲಿ ತನ್ನ ಪ್ರೀತಿಯ ಗೆಳತಿಯ ಪ್ರೇರಣೆಯ ಒಲುಮೆಯನ್ನು ಅವರು ಚಿತ್ರಿಸಿದ್ದಾರೆ.
ಇನ್ನುಳಿದ ಕವಿತೆಗಳಾದ "ನನ್ನವ್ವ", "ಕನಸು", "ಶವದಯಾತ್ರೆ", "ಸಿಟ್ಟು-ಸೆಡವು" "ಓ ಆತ್ಮವೇ" ಇಲ್ಲಿ ಸಾವು ಮತ್ತು ಬಡತನದ ಸಂಕಟವನ್ನು ಈ ಕವಿತೆಗಳು ಚಿತ್ರಿಸುತ್ತವೆ. "ನನ್ನವ್ವ" ಕವಿತೆಯಲ್ಲಿ ತನ್ನ ತಾಯಿ ಪಡುವ ಭವಣೆಯನ್ನು ಕವಿ ಹೀಗೆ ಚಿತ್ರಿಸುತ್ತಾರೆ.
"ಕೂಲಿನ ಮಾಡ್ಯಾಳೋ ನನ್ನವ್ವ
ಒಂದೊತ್ತು ಉಂಡಾರೆ ಒಂದೊತ್ತು ಊಟಿಲ್ಲ
ಅರೆ ಹೊಟ್ಟೆ ಮಾಡ್ಕೊಂಡು ಬಿಸಿಲಲ್ಲಿ ಬೆಂದ್ಕೊಂಡು ಒಡೆಯಾನ ಮನಿಯಾಗೆ ಗಾಣದ ಬಂಡಿಯಂಗೆ
ಕೂಲಿನ ಮಾಡ್ಯಾಳೋ ನನ್ನವ್ವ"
ಎಂದು ತನ್ನ ತಾಯಿಯ ಶ್ರಮದ ಬಗ್ಗೆ ಕವಿ ತನ್ನೊಳಗಿನ ನೋವುಗಳನ್ನು ಇಲ್ಲಿ ಬಿಂಬಿಸಿದ್ದಾರೆ. ಈ ಸಾಲುಗಳನ್ನು ನಾವು ಓದುವಾಗ ಕವಿ ಬಡತನದ ಕುಟುಂಬದಿಂದ ಬಂದಿರುವುದನ್ನ ಸಾಬೀತುಪಡಿಸುತ್ತವೆ ಇಲ್ಲಿನ ಸಾಲುಗಳು.
ಕವಿ ಡಾ. ಸಿ.ಎಂ. ಪರಶಿವಪ್ಪನವರು ಬರೆದಿರುವ "ಸಿಟ್ಟು- ಸೆಡವು" ಕವಿತೆಯ ಈ ಸಾಲುಗಳನ್ನ ಗಮನಿಸಿ. "ಸಂಘರ್ಷ-ಘರ್ಷಣೆಯ ಬೇಲಿಯೊಳಗೆ
ಬಂಧಿಯಾಗಿದ್ದೇನೆ
ಅವಮಾನ-ಬಡತನದ ಯಜ್ಞದೊಳಗೆ
ಉರಿಯುತ್ತಿದ್ದೇನೆ
ಎಂದು ಬರೆಯುವ ಈ ಸನ್ನಿವೇಶಗಳೆ ಅವರನ್ನು ಗಟ್ಟಿಗೊಳಿಸಿ ವಿದ್ಯಾವಂತರನ್ನಾಗಿ ಡಾಕ್ಟರೇಟ್ ಪದವಿಯನ್ನು ಗಳಿಸಲು ಪ್ರೇರೇಪಣೆಯಾಗಿರಬಹುದು ಎಂದರೆ ಅತಿಶಯೋಕ್ತಿಯಾಗಲಾರದು. ಕವಿ ಕನ್ನಡ ಎಂ.ಎ. ಮುಗಿಸಿ ಪಿಎಚ್ ಡಿ ಮುಗಿಸಿದ್ದರೂ ಅವರನ್ನು ಸಾವು ಮತ್ತೆ ಮತ್ತೆ ಕಾಡಿರುವುದನ್ನು "ಶವದಯಾತ್ರೆ" ಕವಿತೆಯ ಮೂಲಕ ನಾವು ಕಾಣಬಹುದು ಕವಿ ಪ್ರೀತಿ, ಬಡತನ, ಅವಮಾನ, ಸಮಾಜದೊಳಗಿನ ಸಂಘರ್ಷದೊಳಗೆ ಸಾಕಷ್ಟು ನೊಂದಿರುವುದನ್ನು ನಾವು ಇಲ್ಲಿ ಗುರುತಿಸಬಹುದಾಗಿದೆ.
"ಆತ್ಮ ದೇಹಗಳು
ಬೇರೆ ಬೇರೆಯಾಗಿ
ಭಾವನ ಪ್ರಪಂಚದ
ಸಂಬಂಧಗಳು ಕಳಚಿ
ಅಭಿಮಾನಿಗಳ ದಂಡಿನ
ಜಾತ್ರೆಯಲ್ಲಿ ಸಾಗಿದೆ ಶವ
ಸ್ಮಶಾನದ ಕಡೆಗೆ"
ಎಂಬ ಬರಹ ನಿಜಕ್ಕೂ ಕವಿಗೆ ಸಾವನ್ನು ಪ್ರೀತಿಸುವಂತೆ ಮಾಡಿರುವ ಹಿಂದಿನ ರಹಸ್ಯವಾದರೂ ಏನು ಎನ್ನುವ ಪ್ರಶ್ನೆ ಓದುಗನಲ್ಲಿ ತರಿಸುತ್ತದೆ.
ಡಾ. ಸಿ.ಎಂ. ಪರಶಿವಪ್ಪನವರು ಆರು ಲೇಖನಗಳನ್ನು ಬರೆದಿದ್ದಾರೆ ಇವುಗಳನ್ನು ಈ ಸಂಗ್ರಹದಲ್ಲಿ ತರಲಾಗಿದೆ. ಅವುಗಳಲ್ಲಿ "ಐವತ್ತೇಳು ತುಂಬಿದ ಹೊಲೆ ಮಾದಿಗರ ಹಾಡು" ಎಂಬ ಲೇಖನವನ್ನು ಬರೆಯುತ್ತಾ ಕವಿ 'ದಲಿತ ಸಂಘಟನೆಗಳು 70ರ ದಶಕದಲ್ಲಿದ್ದ ಜನಪ್ರಿಯತೆಯನ್ನು ಮರಳಿ ಪಡೆಯಬೇಕಾಗಿದೆ. ಎಲ್ಲಾ ಸಂಘಟನಾಕಾರರು ತಮ್ಮ ಸ್ವಾರ್ಥವೆಂಬ ಕಿರೀಟವನ್ನು ಕಳಚಿ, ಸಮಾಜ ಮತ್ತು ಸಮುದಾಯದ ಕಳಕಳಿಯನ್ನು ಬಯಸಿ ಹೋರಾಡುವ ಮನೋಭಾವನೆಗಳು ರೂಪು ತಾಳಬೇಕಾಗಿದೆ ಎನ್ನುತ್ತಾರೆ'. ಮತ್ತೊಂದು ಲೇಖನ "ದಲಿತರ ಅಂತರಂಗ ಯುದ್ಧ" ಇಲ್ಲಿ 'ಚೂಪಾದ ಮುಳ್ಳಿನ ಮುಖಕ್ಕೆ ಹೂವಿನ ಮುಖವಾಡ' ಎನ್ನುವ ಎಚಸ್ವಿ ಕವಿತೆಯ ಸಾಲಗಳನ್ನು ಉದಾರಿಸುತ್ತಾ 'ಮುಖವಾಡ ರೂಪದ ನಾಯಕತ್ವಗಳು ಸಮುದಾಯವನ್ನು ಜಾಗೃತಿಯನ್ನಾಗಿಸುವ ಬದಲು ಅವು ಸಮುದಾಯದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಾ ವ್ಯಕ್ತಿ ಆರಾಧನೆಯಲ್ಲಿ ತೊಡಗುತ್ತವೆ' ಎಂದು ಹೇಳುತ್ತಾರೆ.
"ಮಹಿಳಾ ಸಬಲೀಕರಣಕ್ಕೆ ಸಾಹಿತ್ಯಕ ಪ್ರೇರಣೆ" ಲೇಖನದಲ್ಲಿ 'ಹೆಣ್ಣು ತನ್ನ ಬದುಕಿನಲ್ಲಿ ಸಮಾನತೆಯ ಹೂವನ್ನು ಅರಳಿಸಬೇಕಾಗಿದೆ. ಪುರುಷ ಸಮಾಜದ ಕ್ರೌರ್ಯದ ಅಂತಹಕರಣಕ್ಕೆ ಮಾನವೀಯತೆಯ ಸ್ಪರ್ಶದಿಂದ ಪರಿವರ್ತಿಸಬೇಕಾಗಿದೆ. ಸಾಹಿತ್ಯ ಬಿತ್ತಿದ ಬೀಜದಿಂದ ಮಹಿಳಾ ಸಮಾಜ ಎದುರಿಸುವ ಸಮಸ್ಯೆಗಳನ್ನು ದಮನ ಮಾಡಲು ಮಹತ್ತರ ಪಾತ್ರವನ್ನು ವಹಿಸುತ್ತದೆ' ಎಂದಿದ್ದಾರೆ.
"ಆತ್ಮ ದ್ರೋಹದ ಬದುಕು" ಲೇಖನದಲ್ಲಿ 'ಆಸೆಯಿಂದ ಸ್ವಾರ್ಥ ಸಾಧನೆಗಾಗಿ ಜನಸಾಮಾನ್ಯರನ್ನು ಪ್ರಚೋದಿಸುವ, ಹಿಂಸಿಸುವವರಿಗೆ ಅಂಬೇಡ್ಕರ್, ಬುದ್ಧ, ಬಸವಣ್ಣ, ಮದರ್ ತೆರೇಸಾ, ಗಾಂಧೀಜಿ, ವಿವೇಕಾನಂದರ ನಡೆ ನುಡಿಗಳು ಆದರ್ಶವಾಗಬೇಕು. ಎಂದು ಹೇಳುತ್ತಾರೆ.
"ಮಹಾತ್ಮರನ್ನು ಗುತ್ತಿಗೆ ತೆಗೆದುಕೊಂಡವರು" ಎಂಬ ಲೇಖನದಲ್ಲಿ 'ಮಹಾತ್ಮರು ಎಲ್ಲಾ ವರ್ಗಗಳ ಜನ ಮಾನಸದ ಅಂತಹಕರಣದಲ್ಲಿ ಬೆಳಗಬೇಕಾದವರು. ಆದರೆ ಕೆಲವರು ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುವುದು ಹೇಯವಾದ ಸಂಗತಿ' ಎನ್ನುತ್ತಾರೆ. ಇಂತಹ ವಿಚಾರವಂತ, ವಿನಯಸಂಪನ್ನರು, ಕವಿ ಹೃದಯವುಳ್ಳ ಕವಿಗಳಾದ ಡಾ. ಸಿ.ಎಂ. ಪರಶಿವಪ್ಪನವರು ಚಿಕ್ಕ ವಯಸ್ಸಿನಲ್ಲಿಯೇ ಕಾಣದ ಕಡಲಲ್ಲಿ ಕರಗಿ ಹೋದದ್ದು ಹಾಗೂ ಸಾಹಿತ್ಯದ ಕೃಷಿಯ ಪ್ರಾರಂಭದಲ್ಲಿಯೇ ಮರೆಯಾದದ್ದು ನಿಜಕ್ಕೂ ಬೇಸರದ ಸಂಗತಿಯೇ ಸರಿ.
ಉದಂತ ಶಿವಕುಮಾರ್
ಲೇಖಕರು ಮತ್ತು ಕವಿಗಳು
ಬೆಂಗಳೂರು -560056
ದೂರವಾಣಿ:9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments