*ಹೆಚ್ಚಳವಾದ ಕೃಷ್ಣಾ ನದಿ ನೀರು: ಸ್ಥಗಿತಗೊಂಡ ರಸ್ತೆ ಸಂಚಾರ:*
ರಾಯಬಾಗ: ಕಳೆದ ವಾರದಿಂದ ಕೃಷ್ಣಾ ನದಿಗೆ ಅಧಿಕ ನೀರು ಹರಿದು ಬರುತ್ತಿರುವುದರಿಂದ ತಾಲ್ಲೂಕಿನ ನದಿ ತಟದ ಗ್ರಾಮಗಳಾದ ಶಿರಗೂರ, ಗುಂಡವಾಡ, ಖೇಮಲಾಪುರ, ಹಾಗೂ ಸಿದ್ದಾಪುರ ಗ್ರಾಮಗಳ ನದಿ ತಟದಲ್ಲಿ ವಾಸಿಸುವ ಜನರಿಗೆ ಈಗ ನೆರೆ ಹಾವಳಿ ಉಂಟಾಗಿದ್ದು,ಹಲವು ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಹಾಗೂ ಸಂಬಂಧಿಕರ ತೋಟ ಪಟ್ಟಿಗಳಿಗೆ ಹೋಗುತ್ತಿದ್ದಾರೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಕೃಷ್ಣಾ ನದಿಗೆ ಈಗ 250375 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾದ ಕುಡಚಿ ಸೇತುವೆ ಮೇಲಿನ ಸಂಚಾರ ಒಂದು ವಾರದ ಹಿಂದೆಯೇ ಸ್ಥಗಿತಗೊಂಡಿದೆ. ಶಿರಗೂರ ಖೇಮಲಾಪುರ ಹಳ್ಳದ ರಸ್ತೆ ಹಾಗೂ ಖೇಮಲಾಪುರ ಸಿದ್ದಾಪುರ ರಸ್ತೆ ಸಂಚಾರ ಈಗ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಗ್ರಾಮಸ್ಥರು ಬೇರೆ ಬೇರೆ ಗ್ರಾಮಗಳ ಮೂಲಕ ಸುತ್ತುವರೆದು ಈಗ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ನಿತ್ಯವೂ ನದಿಗೆ ನೀರು ಹೆಚ್ಚಳವಾಗುತ್ತಿರುವುದರಿಂದ ಗ್ರಾಮಸ್ಥರಿಗೆ 2019 ರ ಮಹಾಪೂರ ದ ಆತಂಕ ಕಣ್ಮುಂದೆ ಬರುತ್ತಿದೆ!!. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕುಡಚಿ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ತಾಲ್ಲೂಕಿನ ತಹಶೀಲ್ದಾರ ಸುರೇಶ ಮುಂಜೆ ಅವರು ಪ್ರತ್ಯೇಕವಾಗಿ ಖುದ್ದು ನದಿ ತಟದ ಗ್ರಾಮಗಳಿಗೆ ಭೇಟಿ ನೀಡಿ ನದಿ ನೀರಿನ ಮಟ್ಟ ಹಾಗೂ ಪ್ರಸ್ತುತ ನೆರೆಹಾವಳಿಯ ಸ್ಥಿತಿಗತಿಯ ಕುರಿತು ಅವಲೋಕನ ಮಾಡಿದ್ದು ಇಲ್ಲಿ ಸ್ಮರಿಸಬಹುದು. ಕುಡಚಿ ಸೇತುವೆಯ ಹತ್ತಿರ ಸಂಚಾರ ಸ್ಥಗಿತಗೊಂಡ ಬಗ್ಗೆ ಪೊಲೀಸರು ಅಳವಡಿಸಿದ್ದ ಸುರಕ್ಷಾ ಬ್ಯಾರಿಕೆಡ್ ದಾಟಿ ನದಿ ನೀರು ರಭಸವಾಗಿ ನುಗ್ಗಿ ಬರುತ್ತಿರುವುದು ಗಮನಾರ್ಹ. 2011 ರಲ್ಲಿಯೇ ಸಿದ್ದಾಪುರ ಹಾಗೂ ಖೇಮಲಾಪುರ ಇವೆರಡೂ ಶಾಶ್ವತ ಮುಳುಗಡೆ ಗ್ರಾಮಗಳು ಎಂದು ತಾಲ್ಲೂಕು ಆಡಳಿತ ಘೋಷಣೆ ಮಾಡಿದೆ. ಈಗಾಗಲೇ ಈ ಉಭಯ ಗ್ರಾಮಸ್ಥರಿಗೆ ಈ ಹಿಂದೆಯೇ ಪರಿಹಾರ ಧನ ವಿತರಿಸಿದ್ದರೂ ಅವರಿಗೆ ಸೂಕ್ತ ಸ್ಥಳ ಈವರೆಗೂ ನೀಡದೇ ಇರುವುದರಿಂದ ಈಗ ನಮಗೆ ಸುರಕ್ಷಿತ ಸ್ಥಳಕ್ಕೆಎಲ್ಲರೂ ಹೋಗಬೇಕು ಎಂದು ಹೇಳಲು ಬರುತ್ತಿರುವ ಇವರು "ಗಡ್ಡಕ್ಕೆ ಬೆಂಕಿ ಹೊತ್ತಿದಾಗ ಬಾವಿ ತೋಡಿದರು" ಎಂಬ ಮಾತಿನಂತೆ ಈಗ ನಾವು ಮನೆ ಮಠ ಹಾಗೂ ದನಕರುಗಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು? ನೀವೇ ಹೇಳಿರಿ. ಪ್ರತಿವರ್ಷವೂ ನಮ್ಮ ಈ ಗೋಳು ತಪ್ಪವಾತ ನೋಡ್ರಿ" ಎಂದು ನೊಂದ ಹಲವರು ತಮ್ಮ ಅಳಲು ತೋಡಿಕೊಂಡರು. ಈ ನಿಟ್ಟಿನಲ್ಲಿ ಮೀನಾಮೇಷ ಎಣಿಸದೆ ನೆರೆ ಸಂತ್ರಸ್ತರ ಹಿತಕಾಪಾಡಲು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿದಿನಗಳು ಮೌನ ಮುರಿದು ಈ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಮೊದಲ ಆಧ್ಯತೆ ನೀಡಿ ಸಮರೋಪಾದಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.
*ವರದಿ: ಡಾ.ಜಯವೀರ ಎ.ಕೆ. *ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments