* ನಗೆಯ ಸೌಂದರ್ಯದ ಅನಾವರಣದ ಆರು ಸುಂದರ ಹನಿಗವಿತೆಗಳು.

 “ಇಲ್ಲಿವೆ ನಗೆಯ ಸೌಂದರ್ಯದ ಅನಾವರಣದ ಆರು ಸುಂದರ ಹನಿಗವಿತೆಗಳು.


ಮಂದಹಾಸದ ಮಾಧುರ್ಯವ ರಿಂಗಣಿಸುವ ಮಧುರ ಮಿನಿ ಭಾವಗೀತೆಗಳು. ಇಲ್ಲಿ ನಗುವಿನ ಆಂತರ್ಯದ ಸೊಬಗಿದೆ. ನಗೆಯ ಆಸ್ವಾಧಿಸುವ ಔದಾರ್ಯದ ಬೆರಗಿದೆ. ಜೊತೆಜೊತೆಗೆ ಒಲವಿನ ಮೆರುಗಿದೆ. ಪ್ರೇಮದ ಪುನುಗಿದೆ. ಅನುರಾಗದ ಗುನುಗಿದೆ. ನಗೆಯನ್ನು ಅಂತಃಕರಣದಿಂದ ಒಪ್ಪಿ ಅಪ್ಪಿ ಆರಾಧಿಸಿದಾಗ ಬದುಕು ಬೆಳಕಾಗಬಲ್ಲುದು. ಬೆಳಕು ಬದುಕಾಗಬಲ್ಲುದು. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



1. ನಗೆಪ್ರಣತೆ.!


ಮಂದಹಾಸವೆಂಬ ನಗೆ ಮುಗುಳು

ಅಧರದಂಚಿನ ಸೆಳೆವ ಬೆಳದಿಂಗಳು

ತೊಳೆಯುತ್ತ ನೋವಿನಾ ಕಾರಿರುಳು

ಚಿಗುರಿಸುವುದು ನಲಿವಿನ ತಂಬೆರಳು.!


***********************


2. ನಗೆಗಾರುಡಿ.!


ಅಂದವಳ ತುಟಿಯಂಚಿನ

ನಗೆಹನಿ ನನ್ನೆದೆ ಚಿಪ್ಪಿಗೆ ಬಿತ್ತು

ನೋಡಿದರೀಗ ಈ ಹೊತ್ತು

ಹೊಳೆದಿದೆ ಒಲವ ಸ್ವಾತಿಮುತ್ತು.!


**********************


3. ನಿವೇದನೆ..!


ಗೆಳತಿ ಸ್ಫುರಿಸಿಬಿಡು ಮಂದಹಾಸ

ಕಾದಿಹೆನು ನಿನ್ನೊಲವಿನಾ ದಾಸ

ಇಲ್ಲದಿರೆ ನಿನ್ನ ನಗೆಯ ಸಹವಾಸ

ದಿನವೆಲ್ಲವೂ ಬರಡಾದಂತೆ ಭಾಸ

ನಿಂತು ಹೋದೀತು ನನ್ನೀ ಶ್ವಾಸ.!


**********************


4. ನಗೆಬೆಳಕು.!


ಹೊಮ್ಮಿದಂತೆಲ್ಲ ಮೊಗದಿ ನಗೆಕಿರಣ

ಉಕ್ಕುವುದು ಸಂತಸದ ಭಾವಸ್ಫುರಣ

ಬೆಳಗುವುದು ಸುತ್ತೆಲ್ಲ ಜಗದ ಕಣಕಣ

ಹರಡುವುದು ಹೃನ್ಮನದಿ ಹೊಂಗಿರಣ.!


*******************


5. ಹಾಸ.!


ಇದೇನಿದು ಇಂಥಹ ವಿಪರ್ಯಾಸ

ಕಂಡವಳ ಹೊಳೆವ ಮಂದಹಾಸ

ಬೆಳದಿಂಗಳು ಮಂಕಾದಂತೆ ಭಾಸ

ಶಶಿಯೂ ಬೇಡಿಹನಿವಳ ಸಹವಾಸ.!


****************


6. ಪ್ರೇಮಾಯಣ.!


ಅವಳೋ ಕಂಗಳ ಕೋಲ್ಮಿಂಚ ಹರಿಸುತ್ತ

ಸಾಗುತ್ತಾಳೆ ಮೆಲ್ಲನೆ ನಗೆಮುತ್ತ ಸುರಿಸುತ್ತ

ಇವನೋ ಒಂದೊಂದೆ ಮುತ್ತನಾರಿಸುತ್ತ

ನಡೆಯುತ್ತಾನೆ ಅವಳನೇ ಹಿಂಬಾಲಿಸುತ್ತ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments