* ಪ್ರೇಮ (ತಾ)ಪತ್ರ(ಯ).!

 "ಪ್ರೇಮಪತ್ರದ ಪರಿಪಾಟಲುಗಳ ಪರಿಹಾಸಗಳ ಪಕ್ಕಾ ಹಾಸ್ಯಗವಿತೆಯಿದು. ಪತ್ರ ತಾಪತ್ರಯಗಳ ಪರದಾಟದ ಕಚಗುಳಿಯಿಡುವ ನಕ್ಕು ನಗಿಸುವ ಮುದ ನೀಡುವ ಭಾವಗೀತೆಯಿದು. ಇಲ್ಲಿ ತರಲೆಯಿದೆ, ಕಿಟಲೆಯಿದೆ, ತುಂಟತನವಿದೆ, ಹಾಸ್ಯವಿದೆ, ಲಾಸ್ಯವಿದೆ, ವ್ಯಂಗ್ಯವಿದೆ, ವಿಡಂಬನೆಯಿದೆ, ವಾಸ್ತವವಿದೆ, ಉತ್ಪ್ರೇಕ್ಷೆಯೂ ಇದೆ. ಅಂತಿಮ ಚರಣ ತಪ್ಪದೇ ಓದಿ. ಮನಸಾರೆ ನಕ್ಕುಬಿಡಿ.. ಇದು ಬರಿಯ ಕಾವ್ಯವಲ್ಲ, ಹಾಸ್ಯಭಾವ ಲಹರಿಯ ಶುದ್ಧ ನಗೆಝರಿ. ಒಪ್ಪಿಸಿಕೊಳ್ಳಿ.. " - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 



ಪ್ರೇಮ (ತಾ)ಪತ್ರ(ಯ).!



ಇದು ಪ್ರೇಮಪತ್ರಗಳ ಕವಿತೆಯಲ್ಲ ಪ್ರೇಮಿಗಳ ಕತೆ

ಪ್ರೇಮಪತ್ರದಿಂದಾದ ಅವಘಡಗಳ ನಿತ್ಯ ಸತ್ಯ ವ್ಯಥೆ

ನಿಜ ಹಾಸ್ಯವಿದೆಯೆಂದು ಓದಿ ನಗಬೇಡಿ ಸುಮ್ಮನೆ

ಕೊಂಚವಾದರು ಅರ್ಥೈಸಿಕೊಳ್ಳಿ ಪ್ರೇಮ ಸಂವೇದನೆ.!


ಕೇಳಿ ಶೀಘ್ರಲಿಪಿಕಾರನ ಪ್ರೇಮಿಸಿದವಳ ಪರಿಪಾಟಲು

ತನ್ನವನ ಪ್ರೇಮಪತ್ರದ ಲಿಪಿಯ ಓದಲಾಗದೆ ಕಡೆಗೆ

ಸೇರಿಕೊಂಡಳು ಪ್ರೇಮಿಗಾಗಿ ಶೀಘ್ರಲಿಪಿಯ ತರಗತಿಗೆ.!

ಅದೇನು ಪ್ರೇಮಪತ್ರ ಮಹಿಮೆಯೊ ಅಲ್ಲಿನ ಮಾಸ್ತರನೆ 

ಅವಳಿಗೆ ಮರುಳಾಗಿ ಶರಣಾಗಿ ತಾಳಿಕಟ್ಟಿದ ಕಟ್ಟಕಡೆಗೆ.!


ಕನ್ನಡಪಂಡಿತನ ಪ್ರೀತಿಸಿದವಳ ಕತೆ ಮತ್ತೂ ಗೋಜಲು

ಪಂಡಿತರ ಪ್ರೇಮಪತ್ರದ ಪದಗಳರ್ಥ ಅರಿತುಕೊಳ್ಳಲು

ಅಂಗಡಿಯಿಂದ ಖರೀದಿಸಿ ತಂದಳು ಕನ್ನಡ ನಿಘಂಟು

ಓದುತ್ತ ಓದುತ್ತ ಬೆಳೆಯಿತು ಅಕ್ಷರಗಳ ಮಧುರ ನಂಟು

ನಿಘಂಟು ಬರೆದವನನ್ನೇ ಹುಡುಕಿ ಹಾಕಿಕೊಂಡಳು ಗಂಟು.!


ನೋಡಿ ವೈದ್ಯನನ್ನು ಪ್ರೇಮ ಮಾಡಿದವಳ ಗತಿ ಫಜೀತಿ

ಅರ್ಥೈಸಿಕೊಳ್ಳಲು ವೈದ್ಯನ ಒಲವಿನೋಲೆಯ ಬರವಣಿಗೆ

ಅವನ ಕಾಂಪೌಂಡರನನ್ನೇ ಕರೆಸಿಕೊಂಡಳು ತನ್ನ ಮನೆಗೆ

ವೈದ್ಯನ ಪ್ರೇಮಪತ್ರದ ಪರಿಭಾಷೆ ತಿಳಿಸುತ್ತ ಕಾಂಪೌಂಡರು

ಅವಳನೇ ಪಠಾಯಿಸಿ ಒತ್ತಿಬಿಟ್ಟ ಮದುವೆಯ ಮೊಹರು.!


ನಿತ್ಯ ನೆತ್ತರಿನಲ್ಲೆ ಪ್ರೇಮಪತ್ರ ಬರೆದು ಮೋಡಿ ಮಾಡಿದ

ಬ್ಲಡ್ಡುಬ್ಯಾಂಕ್ ನೌಕರನ ಒಲವಿನ ಕಥೆ ಇನ್ನೂ ರೋಚಕ

ಕನ್ನಡ ಹುಡುಗಿಗೆ ಆಂಗ್ಲಭಾಷೆಯ ಒಲವಿನೋಲೆ ಓದಿದ

ಅಂಚೆಯವನ ಅನುರಾಗ ಗೀತೆ ಮಗದಷ್ಟು ಮೋಹಕ.!

ಹೇಳುತ್ತಾ ಹೋದರೆ ಮುಗಿಯದು ಪ್ರೇಮಪತ್ರ ಕಥಾನಕ.!


ಅಬ್ಬ ಪತ್ರ ತಾಪತ್ರಯ ಕೇಳಲು ನಿಮಗದೆಷ್ಟು ಹಂಬಲ?

ನಾ ಎಣಿಸಿರಲಿಲ್ಲ ಇಹುದೆಂದು ನಿಮಗೀ ಕೆಟ್ಟ ಕುತೂಹಲ.!

ಬಿಡಿ ಅವರಿವರ ಪತ್ರಕಥೆ, ಹೇಳಿ ಕೇಳಿ ನಮಗೇನು ಫಲ.??

ನಿಮ್ಮದೇನಾದರು ಪ್ರೇಮದೋಲೆ ಕಥೆಯಿದ್ದರೆ ತಪ್ಪದೆ ತಿಳಿಸಿ

ಜಗಕೆಲ್ಲ ಹಂಚುತ್ತೇನೆ ಹೀಗೆ ಮತ್ತೊಂದು ಕವಿತೆಯ ರಚಿಸಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments